ಕೇವಲ ನೋಟ್ ಬ್ಯಾನ್, ಜಿಎಸ್ ಟಿ ಆಧಾರದಲ್ಲಿ ಸರಕಾರದ ಸಾಧನೆ ಅಳೆಯಬೇಡಿ: ಪ್ರಧಾನಿ ಮೋದಿ

Update: 2018-01-20 12:51 GMT

ಹೊಸದಿಲ್ಲಿ,ಜ.20: ತನ್ನ ಸರಕಾರದ ಸಾಧನೆಯು ಇಡೀ ವಿಶ್ವದ ಗಮನವನ್ನು ಸೆಳೆದಿದೆ ಮತ್ತು ದೇಶದ ಆರ್ಥಿಕತೆಯ ಅಭಿವೃದ್ಧಿಗಾಗಿ ತೆಗೆದುಕೊಂಡಿರುವ ಕ್ರಮಗಳನ್ನು ರೇಟಿಂಗ್ ಏಜೆನ್ಸಿಗಳು ಅನುಮೋದಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನೋಟು ನಿಷೇಧದ ನಂತರದ ಆರ್ಥಿಕ ಹಿಂಜರಿತ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ಸರಕಾರದ ವಿರುದ್ಧ ಕೇಳಿಬರುತ್ತಿರುವ ಟೀಕೆಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಮೋದಿ, ಕೇವಲ ಇವೆರಡು ನೀತಿಗಳ ಆಧಾರದಲ್ಲಿ ತನ್ನ ಸರಕಾರದ ಸಾಧನೆಯ ಮೌಲ್ಯಮಾಪನ ಮಾಡಬಾರದು ಎಂದು ಹೇಳಿದರು.

 ನಾವು ಆರ್ಥಿಕ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಶೌಚಾಲಯಗಳನ್ನು ನಿರ್ಮಿಸಿದ್ದೇವೆ, 18,000 ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿದ್ದೇವೆ ಎಂದು ಬೆಟ್ಟು ಮಾಡಿದ ಅವರು, ಕಳೆದೊಂದು ವರ್ಷದಲ್ಲಿ 70 ಲಕ್ಷ ಭವಿಷ್ಯನಿಧಿ ಖಾತೆಗಳನ್ನು ಸೃಷ್ಟಿಸಲಾಗಿದೆ. ಉದಯೋನ್ಮುಖ ಉದ್ಯಮಿಗಳಿಗೆ ತಮ್ಮ ಉದ್ಯಮಗಳನ್ನು ಸ್ಥಾಪಿಸಲು ನೆರವಾಗುವ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಗೆ 10 ಕೋಟಿ ಜನರು ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದರು.

ಆರ್ಥಿಕತೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು ಯುವಜನರು ಜಾಗತಿಕ ಬೇಡಿಕೆಗನುಗುಣವಾಗಿ ಕೌಶಲವನ್ನು ರೂಪಿಸಿಕೊಳ್ಳಲು ಸರಕಾರವು ನೆರವಾಗುತ್ತಿದೆ ಎಂದರು.

ರಾಜ್ಯಗಳಿಗೆ ಕಳವಳಗಳನ್ನುಂಟು ಮಾಡಿದ ವಿಷಯಗಳನ್ನು ಬಗೆಹರಿಸದ್ದಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಟೀಕಿಸಿದ ಪ್ರಧಾನಿ, ಬಿಜೆಪಿಯು ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News