ದಲಿತ ಯುವಕರ ಮರ್ಯಾದಾ ಹತ್ಯೆ ಪ್ರಕರಣ: ಆರು ಮಂದಿಗೆ ಗಲ್ಲು ಶಿಕ್ಷೆ
ನಾಸಿಕ್, ಜ.20: 2013ರಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಅಹ್ಮದ್‌ನಗರ್ ಜಿಲ್ಲೆಯಲ್ಲಿ ಮೂವರು ದಲಿತ ಯುವಕರನ್ನು ಕೊಲೆ ಮಾಡಲಾದ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯವು ಮರಣ ದಂಡನೆ ವಿಧಿಸಿದೆ.
2013ರ ಜನವರಿ ಒಂದರಂದು ಸಚಿನ್ ಎಸ್. ಗರು ಹಾಗೂ ಇತರ ಇಬ್ಬರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಏಳು ಮಂದಿಯ ಪೈಕಿ ಆರು ಮಂದಿಯನ್ನು ದೋಷಿಗಳೆಂದು ನಾಸಿಕ್ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಆರ್. ವೈಷ್ಣವ್ ಜನವರಿ 15ರಂದು ತೀರ್ಪು ನೀಡಿದ್ದರು. ಜೊತೆಗೆ ದೋಷಿಗಳು ತಲಾ 20,000 ರೂ. ದಂಡ ಪಾವತಿಸುವಂತೆ ಮತ್ತು ಸರಕಾರವು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವಂತೆಯೂ ನ್ಯಾಯಾಧೀಶರು ಆದೇಶ ನೀಡಿದ್ದರು.
ನ್ಯಾಯಾಲಯವು ಪೋಪಟ್ ವಿ. ದರಂಡಲೆ, ಗಣೇಶ್ ಪಿ. ದರಂಡಲೆ, ಪ್ರಕಾಶ್ ವಿ. ದರಂಡಲೆ, ರಮೇಶ್ ವಿ. ದರಂಡಲೆ, ಅಶೋಕ್ ಎಸ್. ನವ್ಗಿರೆ ಮತ್ತು ಸಂದೀಪ್ ಎಂ. ಕುರೆ ಎಂಬವರಿಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ.
ಸಚಿನ್ ಗರು (24) ಸೋನೈ ಗ್ರಾಮದ ದರಂಡಲೆ ಕುಟುಂಬಕ್ಕೆ ಸೇರಿದ ಮರಾಠ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯ ಕುಟುಂಬದ ವಿರೋಧದ ನಡುವೆಯೂ ಪ್ರೇಮಿಗಳು ವಿವಾಹವಾಗಲು ಯೋಜನೆ ರೂಪಿಸಿದ್ದರು. ಇವರ ಪ್ರೀತಿಯ ಬಗ್ಗೆ ಅರಿತ ಯುವತಿಯ ಮನೆಯವರು ಸಚಿನ್ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಹೊಸ ವರ್ಷದಂದು ತಮ್ಮ ಮನೆಯ ಒಳಚರಂಡಿ ಸ್ವಚ್ಛಗೊಳಿಸಲು ಕರೆದಿದ್ದರು.
ಯುವತಿಗೆ ಮನೆಗೆ ಆಗಮಿಸಿದ ಮೂವರು ಯುವಕರ ಪೈಕಿ ಮೊದಲಿಗೆ ಸಚಿನ್ ಮೇಲೆ ದಾಳಿ ನಡೆಸಿದ ಆಕೆಯ ಮನೆಯವರು ಆತನ ತಲೆ ಮತ್ತು ಕೈಕಾಲುಗಳನ್ನು ಕತ್ತರಿಸಿ ಚರಂಡಿಗೆ ಎಸೆದರು. ನಂತರ ಆತನ ಜೊತೆಗೆ ಆಗಮಿಸಿದ್ದ ಸಂದೀಪ್ ತನ್ವರ್ (20) ಮತ್ತು ರಾಹುಲ್ ಕಂದರೆ (20) ಯನ್ನು ಹತ್ಯೆ ಮಾಡಿ ಅವರ ದೇಹಗಳನ್ನು ಗ್ರಾಮದ ಹೊರಗಿರುವ ನೀರಿಲ್ಲ ಬಾವಿಯಲ್ಲಿ ಹೂತು ಹಾಕಿದ್ದರು.
ಮೂವರು ಯುವಕರು ಏಕಾಏಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ ಸಚಿನ್‌ನ ಛಿದ್ರಗೊಂಡ, ಕೊಳೆತ ದೇಹವು ಚರಂಡಿಯಲ್ಲಿ ಪತ್ತೆಯಾಗಿತ್ತು ಮತ್ತು ಆತನ ಇಬ್ಬರು ಸ್ನೇಹಿತರ ದೇಹಗಳು ಬಾವಿಯೊಳಗಿಂದ ತೆಗೆಯಲಾಯಿತು.
ಮಹಾರಾಷ್ಟ್ರದಲ್ಲಿ ನಡೆದ ಮರ್ಯಾದಾ ಹತ್ಯೆಗಳಲ್ಲಿ ಒಂದಾಗಿದ್ದ ಈ ಪ್ರಕರಣದ ವಿಚಾರಣೆಯು ಐದು ವರ್ಷಗಳ ಕಾಲ ನಡೆದು ಒಟ್ಟಾರೆ 54 ಸಾಕ್ಷಿಗಳಿಂದ ಹೇಳಿಕೆಗಳನ್ನು ದಾಖಲಿಸಲಾಗಿತ್ತು.
ಪ್ರಕರಣವನ್ನು ಆಲಿಸಿದ ನ್ಯಾಯಾಧೀಶರು, ಇದೊಂದು ಅತ್ಯಂತ ಹೀನಾಯ ಮತ್ತು ಭೀಕರ ಪ್ರಕರಣವಾಗಿದೆ. ದೋಷಿಗಳು ಇತರರ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಮರೆತಿದ್ದಾರೆ. ಅಂಥ ಜನರಿಗೆ ಈ ಸಮಾಜದಲ್ಲಿ ಬದುಕುವ ಯಾವುದೇ ಹಕ್ಕಿಲ್ಲ. ಹಾಗಾಗಿ ಈ ಸಮಾಜವನ್ನು ಉಳಿಸಲು ಅಂಥವರನ್ನು ಗಲ್ಲಿಗೇರಿಸುವುದೇ ಸರಿಯಾದ ದಾರಿ ಎಂದು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.