ಸೋಮವಾರ ಮುಖ್ಯ ನ್ಯಾ. ದೀಪಕ್ ಮಿಶ್ರಾರಿಂದ ಲೋಯಾ ಪ್ರಕರಣದ ವಿಚಾರಣೆ

Update: 2018-01-20 13:18 GMT

ಹೊಸದಿಲ್ಲಿ, ಜ.20: ಕಳೆದ ವಾರ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರು ಬಹಿರಂಗವಾಗಿ ಮಾಧ್ಯಮಗೋಷ್ಟಿ ಕರೆದು ಮುಖ್ಯನ್ಯಾಯಮೂರ್ತಿಗಳ ಕಾರ್ಯವೈಖರಿಯನ್ನು ಟೀಕಿಸಲು ಕಾರಣಗಳಲ್ಲಿ ಒಂದಾಗಿದ್ದ ಸಿಬಿಐ ವಿಶೇಷ ನ್ಯಾಯಮೂರ್ತಿ ಬಿ.ಎಚ್ ಲೋಯಾ ಸಾವಿನ ಪ್ರಕರಣದ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಸೋಮವಾರದಂದು ನಡೆಸಲಿದ್ದಾರೆ.

ನ್ಯಾಯಾಧೀಶರಾದ ಎ.ಎಂ ಖನ್ವಿಲ್ಕರ್ ಮತ್ತು ಡಿ.ವೈ ಚಂದ್ರಚೂಡ್ ಅವರನ್ನೊಳಗೊಂಡ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ಪೀಠವು ಶುಕ್ರವಾರದಂದು ಲೋಯಾ ಪ್ರಕರಣದ ವಿಚಾರಣೆಗೆ ಮುಂದಿನ ದಿನಾಂಕವನ್ನು ನಿಗದಿಪಡಿಸಿದ್ದು ರೋಸ್ಟರ್ ಕ್ರಮದಂತೆ ಸೂಕ್ತ ಪೀಠಕ್ಕೆ ಪ್ರಕರಣವನ್ನು ಒಪ್ಪಿಸುವಂತೆ ಸೂಚಿಸಿದೆ. ಶನಿವಾರ ಬಿಡುಗಡೆ ಮಾಡಲಾದ ನ್ಯಾಯಾಲಯದ ದಾಖಲೆಗಳ ಪ್ರಕಾರ ಲೋಯಾ ಪ್ರಕರಣದ ವಿಚಾರಣೆಯು ಮುಖ್ಯನ್ಯಾಯಮೂರ್ತಿಯವರ ಪೀಠದಿಂದಲೇ ನಡೆಯಲಿದೆ. ಲೋಯ ಪ್ರಕರಣದ ಸ್ವತಂತ್ರ ತನಿಖೆಯಾಗಬೇಕು ಎಂದು ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನು ಈ ಮೊದಲು ಸರ್ವೋಚ್ಚ ನ್ಯಾಯಾಲಯದ ಹತ್ತನೇ ಅತ್ಯಂತ ಹಿರಿಯ ನ್ಯಾಯಾಧೀಶರಾದ ಅರುಣ್ ಮಿಶ್ರಾ ಸೇರಿದಂತೆ ಇಬ್ಬರು ನ್ಯಾಯಮೂರ್ತಿಗಳಿಗೆ ಒಪ್ಪಿಸಲಾಗಿತ್ತು. ಆದರೆ ಕಳೆದ ವಾರ ನ್ಯಾಯಾಧೀಶ ಅರುಣ್ ಮಿಶ್ರಾ ಅವರ ಪೀಠವು ಲೋಯ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಕಾರಣ ಅದರ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಲೋಯ ಸಾವಿನ ಪ್ರಕರಣ ಸೇರಿದಂತೆ ಹಲವು ಸೂಕ್ಷ್ಮ ಮತ್ತು ಪ್ರಮುಖ ಪ್ರಕರಣಗಳನ್ನು ಮುಖ್ಯನ್ಯಾಯಮೂರ್ತಿಗಳು ಆಯ್ದ ಪೀಠಗಳಿಗೆ ಒಪ್ಪಿಸುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರು ಆರೋಪ ಮಾಡಿದ್ದರು. ಇದರಿಂದ ಬೇಸರಗೊಂಡ ನ್ಯಾಯಾಧೀಶ ಅರುಣ್ ಮಿಶ್ರಾ, ನಾಲ್ವರು ಹಿರಿಯ ನ್ಯಾಯಾಧೀಶರು ಇಂಥ ಹೇಳಿಕೆಯನ್ನು ನೀಡಿ ನನ್ನ ಘನತೆಗೆ ಕುಂದುಂಟು ಮಾಡುತ್ತಿದ್ದಾರೆ. ಅವರು ನನ್ನ ಪೀಠವನ್ನು ಮುಖ್ಯನಾಯಮೂರ್ತಿಗಳ ಆಯ್ದ ಪೀಠ ಎಂದು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News