×
Ad

ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದರೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚಿ: ಬಿಜೆಪಿ ಶಾಸಕ ರಾಜಾ ಸಿಂಗ್

Update: 2018-01-20 19:38 IST

ಹೈದರಾಬಾದ್, ಜ.20: ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ಹೈದರಾಬಾದ್ ನ ಬಿಜೆಪಿ ಶಾಸಕ ರಾಜಾ ಸಿಂಗ್ ಈ ಬಾರಿ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ಪದ್ಮಾವತ್’ ಚಿತ್ರವನ್ನು ಜನರು ತಿರಸ್ಕರಿಸಬೇಕು. ನಗರದ ಸಿನೆಮಾ ಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನಕ್ಕೆ ತಡೆ ಒಡ್ಡಬೇಕು ಅಗತ್ಯ ಬಿದ್ದರೆ ಸಿನೆಮಾ ಮಂದಿರವನ್ನು ಧ್ವಂಸ ಮಾಡಿ ಬೆಂಕಿ ಹಚ್ಚಬೇಕು ಎಂದು ರಾಜಾ ಸಿಂಗ್ ಹೇಳಿದ್ದಾರೆ.

ಫೇಸ್ಬುಕ್ ನಲ್ಲಿ ರಾಜಾ ಸಿಂಗ್ ಸಿನೆಮಾ ಮಂದಿರಕ್ಕೆ ಬೆಂಕಿ ಹಚ್ಚಲು ಪ್ರೇರೇಪಿಸಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. “ಪದ್ಮಾವತ್ ಚಿತ್ರ ಪ್ರದರ್ಶನ ತಡೆಗೆ ಒತ್ತಾಯ ಕೇಳಿಬಂದಿದೆ. ನಾವು ಈ ಬಗ್ಗೆ ಪ್ರತಿಭಟನೆಗಳನ್ನು, ರ್ಯಾಲಿಗಳನ್ನು ನಡೆಸಿದ್ದೇವೆ. ಚಿತ್ರ ನಿಷೇಧಕ್ಕೆ ನಮ್ಮಿಂದ ಸಾಧ್ಯವಾದುದನ್ನು ನಾವು ಮಾಡಿದ್ದೇವೆ. ಚಿತ್ರದ ಹೆಸರು ಬದಲಾವಣೆಯಿಂದ ಇತಿಹಾಸ ಬದಲಾಗುವುದಿಲ್ಲ. ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಚಿತ್ರದ ಹೆಸರನ್ನು ಮಾತ್ರ ಬದಲಿಸಿದ್ದಾರೆ. ಯಾವುದೇ ವಿಧದಲ್ಲಾದರೂ ಚಿತ್ರಕ್ಕೆ ವಿರೋಧ ಒಡ್ಡಬೇಕು ಎಂದು ನಾನು ಜನರಲ್ಲಿ ವಿನಂತಿಸುತ್ತೇನೆ. ಚಿತ್ರ ಬಿಡುಗಡೆಯಾದರೆ ದೇಶಭಕ್ತ ಭಾರತೀಯರು ಸಿನೆಮಾ ಮಂದಿರಕ್ಕೆ ಹೋಗಬಾರದು.”

“ ನಿಮಗೆ ಬೇಕಿದ್ದರೆ ಪ್ರತಿಭಟನೆ ಮಾಡಿ, ನಿಮಗೆ ಚಿತ್ರಮಂದಿರವನ್ನು ಧ್ವಂಸ ಮಾಡಬೇಕಿದ್ದರೆ, ಬೆಂಕಿ ಹಚ್ಚಬೇಕೆಂದಿದ್ದರೆ ಅದನ್ನು ಮಾಡಿ. ಇಂತಹ ನಿರ್ದೇಶಕರಿಗೆ ಒಮ್ಮೆ ನಷ್ಟವಾದರೆ ಇನ್ನೊಮ್ಮೆ ಇತಿಹಾಸ ತಿರುಚುವ ಮುನ್ನ ಅವರು ಯೋಚಿಸುತ್ತಾರೆ” ಎಂದು ರಾಜಾ ಸಿಂಗ್ ವಿಡಿಯೋದಲ್ಲಿ ಹೇಳಿದ್ದಾರೆ.

ಶಾಸಕರ ವಿವಾದಾತ್ಮಕ ಹೇಳಿಕೆಯ ಈ ವಿಡಿಯೋ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News