ಪ್ರಪಂಚೋದ್ಯ

Update: 2018-01-20 18:39 GMT

ಇದು ವಿಚಿತ್ರವಾದರೂ ನಿಜವಂತೆ. ಮಧ್ಯಪ್ರದೇಶದ ಸುಂದರೈಲ್ ಎಂಬ ಪುಟ್ಟಗ್ರಾಮದ 75 ವರ್ಷದ ವೃದ್ಧ ಸರಸ್ವತಿ ಕಳೆದ 60 ವರ್ಷಗಳಿಂದ ಒಂದು ಅಗಳು ಅನ್ನವನ್ನಾಗಲಿ ಅಥವಾ ಇನ್ನಾವುದೇ ಘನ ಆಹಾರವನ್ನಾಗಲಿ ಸೇವಿಸಿಯೇ ಇಲ್ಲವಂತೆ. ಕೆಲವರು ಹೇಳುವ ಹಾಗೆ ವಾರದಲ್ಲಿ ಒಂದು ಸಲ ಮಾತ್ರ ಬಾಳೆಹಣ್ಣು ಸೇವಿಸುತ್ತಾರೆ. ಇದನ್ನು ಬಿಟ್ಟರೆ ಆಕೆ ಬೇರ್ಯಾವುದೇ ಆಹಾರ ತಿಂದದ್ದೇ ಇಲ್ಲವೆಂದು ಆಕೆಯನ್ನು ಬಲ್ಲ ಗ್ರಾಮಸ್ಥರು ಹೇಳುತ್ತಾರೆ. ಬಾಳೆಹಣ್ಣನ್ನು ಹೊರತುಪಡಿಸಿ ಸರಸ್ವತಿ ನೀರು ಹಾಗೂ ಚಹಾವನ್ನಷ್ಟೇ ಸೇವಿಸುತ್ತಾರೆ.

75 ವರ್ಷ ಕಳೆದಲೂ ಈಗಲೂ ಸರಸ್ವತಿ ಆರೋಗ್ಯವಾಗಿದ್ದಾರೆ. ಘನ ಆಹಾರ ಸೇವಿಸದೆ ಇರುವುದೇ ತನ್ನ ಆರೋಗ್ಯದ ಗುಟ್ಟೆಂದು ಅಕೆ ಹೇಳಿಕೊಳ್ಳುತ್ತಾರೆ. ಸರಸ್ವತಿ ಮೊದಲ ಮಗನನ್ನು ಹೆತ್ತಾಗ ಆಕೆಗೆ ಟೈಫಾಯಿಡ್ ರೋಗ ತಗಲಿತ್ತಂತೆ. ಸರಸ್ವತಿಗೆ ಆಗ ಸೂಕ್ತ ಚಿಕಿತ್ಸೆ ನೀಡಲಾಗಿದ್ದರೂ, ಆನಂತರ ಆಕೆ ಆಹಾರಸೇವನೆಯಲ್ಲಿ ಆಸಕ್ತಿಯನ್ನೇ ಕಳೆದುಕೊಂಡಳಂತೆ. ಕೇವಲ ವಾರದಲ್ಲಿ ಒಂದೇ ಒಂದು ಬಾಳೆ ಹಣ್ಣು ಸೇವಿಸುವ ಆಕೆ, ಕಳೆದ 6 ದಶಕಗಳಿಂದ ಇದೇ ಪಥ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದಾಳೆ. 75 ವರ್ಷದ ಸರಸ್ವತಿ ಈಗಲೂ ಹೊಲದ ಕೆಲಸದಲ್ಲಿ ತನ್ನ ಕುಟುಂಬದವರಿಗೆ ನೆರವಾಗುತ್ತಿದ್ದಾರೆ.

ಆಗಸದಲ್ಲಿ ಸ್ಫೋಟಿಸಿದಉಲ್ಕೆ; ಬೆದರಿದ ಜನತೆ

ಕಳೆದ ಮಂಗಳವಾರ, ನಡು ರಾತ್ರಿಯ ಹೊತ್ತು. ಅಮೆರಿಕದ ಮಿಶಿಗನ್ ರಾಜ್ಯದ ಈಶಾನ್ಯ ಪ್ರದೇಶದ ನಾಗರಿಕರಿಗೆ ಇದ್ದಕ್ಕಿದ್ದಂತೆ ಆಗಸದಲ್ಲಿ ಕಣ್ಣು ಕೋರೈಸುವಂತಹ ಬೆಳಕಿನ ಪುಂಜವೊಂದು ಸ್ಫೋಟಿಸಿದ ಅನುಭವವಾಯಿತು.ಲೋಕದ ಅಂತ್ಯ ಸಮೀಪಿಸಿತೇ? ಅಥವಾ ಅನ್ಯಗ್ರಹದ ಏಲಿಯನ್‌ಗಳೇನಾದರೂ ದಾಳಿ ನಡೆಸಿದರೇ?, ಇಲ್ಲ ಎದುರಾಳಿ ಉತ್ತರ ಕೊರಿಯದಿಂದ ಅಣ್ವಸ್ತ್ರ ಕ್ಷಿಪಣಿ ದಾಳಿ ನಡೆಯಿತೇ ಎಂದವರು ಭಯಭೀತಗೊಂಡರು. ಪೊಲೀಸರಂತೂ ನಾಗರಿಕರಿಂದ ಹರಿದುಬರುತ್ತಿದ್ದ ತುರ್ತು ಕರೆಗಳಿಗೆ ಉತ್ತರಿಸಲೂ ಸಾಧ್ಯವಾಗದೆ, ದಿಗ್ಭ್ರಾಂತರಾಗಿದ್ದರು.

ಅಂದು ರಾತ್ರಿ ವಾಹನ ಚಲಾಯಿಸುತ್ತಿದ್ದ ಮಿಶಿಗನ್ ನಿವಾಸಿ ಡ್ಯಾನಿ ಮ್ಯಾಕ್ವೆನ್ ಜೂನಿಯರ್‌ಗೆ ಆಗಸವಿಡೀ ಮಿಂಚಿನಷ್ಟು ಬೆಳಕಿನಿಂದ ಪ್ರಕಾಶಮಾನವಾಗಿರುವುದು ಗೋಚರಿಸಿತಂತೆ. ‘‘ಬಾನಂಚಿನ ಒಂದು ಮೂಲೆಯಿಂದ ಜ್ವಾಲೆಯ ಚೆಂಡೊಂದು ಮೇಲೇಳುತ್ತಿತ್ತು ಮತ್ತು ಅದು ಕಿಡಿಗಳ ಪುಂಜವಾಗಿ ಸ್ಫೋಟಗೊಂಡಿತು. ಅಂತಹ ಅಂಧಕಾರದಲ್ಲೂ ಇಡೀ ಆಗಸವು ಕಿತ್ತಳೆ ಬಣ್ಣವನ್ನು ತಾಳಿತ್ತು. ಒಂದು ಕ್ಷಣ ದಿಗ್ಭ್ರಾಂತನಾದ ನನಗೆ ಏನು ಮಾಡಬೇಕೆಂದೇ ತೋಚಲಿಲ್ಲ’’ ಎಂದವರು ಹೇಳುತ್ತಾರೆ.

ಆಕಾಶದಲ್ಲಿ ಬಿಳಿಬಣ್ಣದ ತೇಜಪುಂಜವು ಸ್ಫೋಟಿಸುವುದನ್ನು ಹಲವಾರು ಜನರು ವೀಡಿಯೊಗಳಲ್ಲಿ ಸೆರೆಹಿಡಿದಿದ್ದಾರೆ. ಈ ಸ್ಫೋಟವು, ರಿಕ್ಟರ್ ಮಾಪಕದಲ್ಲಿ 2.0 ತೀವ್ರತೆಯ ಭೂಕಂಪಕ್ಕೆ ಸರಿಸಮವಾಗಿತ್ತೆಂದು ಅಮೆರಿಕದ ಜಿಯೋಲೊಜಿಕಲ್ ಸರ್ವೇ ಹೇಳಿದೆ.

ಆದರೆ ನಾಸಾದ ವಿಜ್ಞಾನಿಗಳು, ಉಲ್ಕೆಯೊಂದು ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಸ್ಫೋಟಗೊಂಡಿದ್ದೇ, ಈ ಬೆಳಕಿನ ಜ್ವಾಲೆ ಉಂಟಾಗಲು ಕಾರಣವೆಂದು ಸ್ಪಷ್ಟಪಡಿಸಿದ್ದಾರೆ. ಎರಡು ಚದರ ಕಿ.ಮೀ. ವಿಸ್ತೀರ್ಣದ ಈ ಬೆಳಕಿನ ಉಂಡೆಯು, ತಾಸಿಗೆ 28 ಸಾವಿರ ಮೈಲು ವೇಗದಲ್ಲಿ ಭೂಮಿಯೆಡೆಗೆ ಧಾವಿಸಿ ಬಂದಿತ್ತು. ಭೂ ವಾತಾವರಣ ಪ್ರವೇಶಿಸುತ್ತಿದ್ದಂತೆಯೇ ಅದು ವಿಪರೀತ ಬಿಸಿಯಿಂದ ಕರಗತೊಡಗಿದಾಗ ಉಜ್ವಲವಾದ ಪ್ರಕಾಶವನ್ನು ಹೊರಹೊಮ್ಮಿಸಿದೆಯೆಂದು ನಾಸಾದ ಉಲ್ಕೆ ಪರಿಸರ ಕಾರ್ಯಾಲಯದ ವಿಜ್ಞಾನಿ ಬಿಲ್ ಕೂಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News