​ ಜೀವನದ ಸಾರ ಹೇಳುವ ರಾಜು

Update: 2018-01-21 10:45 GMT

ಚಿತ್ರ: ರಾಜು ಕನ್ನಡ ಮೀಡಿಯಮ್
ತಾರಾಗಣ: ಗುರುನಂದನ್, ಆವಂತಿಕಾ ಶೆಟ್ಟಿ, ಸುದೀಪ್, ಸಾಧು ಕೋಕಿಲ
ನಿರ್ದೇಶನ: ನರೇಶ್ ಕುಮಾರ್
ನಿರ್ಮಾಣ: ಕೆ.ಎ. ಸುರೇಶ್

‘ಫಸ್ಟ್ ರ್ಯಾಂಕ್ ರಾಜು’ ಚಿತ್ರದ ಮೂಲಕ ಆಧುನಿಕ ಶೈಕ್ಷಣಿಕ ರೀತಿಯ ವೈಫಲ್ಯಗಳನ್ನು ತಮಾಷೆಯಾಗಿ ತೆರೆದಿಟ್ಟಿದ್ದ ನರೇಶ್, ರಾಜು ಕನ್ನಡ ಮೀಡಿಯಮ್ ಚಿತ್ರದಲ್ಲಿ ಬದುಕನ್ನು ಹೇಗೆ ಜೀವಿಸಬೇಕು ಎಂದು ತೋರಿಸಿದ್ದಾರೆ. ಹಾಗಂತ ಇದೊಂದು ಆಧ್ಯಾತ್ಮಿಕ ಹಂದರದ ಕತೆಯೇನೂ ಅಲ್ಲ. ತಲೆ ಕೆಡಿಸುವ ಬುದ್ಧಿವಾದಗಳೂ ಇಲ್ಲ. ರಾಜು ಬದುಕನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಪ್ರೇಕ್ಷಕನನ್ನೂ ಜೊತೆಯಲ್ಲೇ ಕರೆದೊಯ್ಯುವ ಚಿತ್ರ ಇದು.

ಚಿತ್ರವು ಮಲೆನಾಡ ಹುಡುಗ ರಾಜುವಿನ ಬಾಲ್ಯದ ದಿನಗಳ ಮೂಲಕ ಪ್ರಯಾಣ ಶುರು ಮಾಡುತ್ತದೆ. ಆತ ಬಾಲ್ಯದಿಂದ ಬದುಕಲ್ಲಿ ಏನೇನು ಮುಖ್ಯ ಎಂದುಕೊಳ್ಳುತ್ತಾನೆಯೋ ಅವೆಲ್ಲವೂ ಒಂದು ಹಂತದಲ್ಲಿ ಸುಳ್ಳು ಎನಿಸಿಬಿಡುತ್ತದೆ. ಹೀಗೆ ವಿವಿಧ ಹಂತಗಳಲ್ಲಿ ವಿದ್ಯೆ, ಗೆಳತಿ, ಸ್ನೇಹ ಮುಖ್ಯ ಎಂದು ಬೆನ್ನು ಬೀಳುವ ರಾಜುವಿಗೆ ನಗರದ ಹುಡುಗಿ ನಿಶಾ ಜೊತೆಗೆ ಪ್ರೇಮವಾಗುತ್ತದೆ. ಆಕೆಗೆ ನೈಜ ಪ್ರೇಮದ ಪರಿಚಯ ಮಾಡುವ ಸಮಯದಲ್ಲೇ ದುಡ್ಡು ಎಷ್ಟು ಮುಖ್ಯ ಎಂಬ ಸತ್ಯದ ಅರಿವಾಗುತ್ತದೆ. ದುಡ್ಡು ಸಂಪಾದನೆಗಾಗಿ ಉಸಿರು ಬಿಗಿ ಹಿಡಿದು ಸಾಧನೆ ಮಾಡಬೇಕೆಂಬ ಸತ್ಯವನ್ನು ಶ್ರೀಮಂತ ಉದ್ಯಮಿಯೊಬ್ಬರು ಮೂಡಿಸುತ್ತಾರೆ. ಆ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಆದರೆ ಸಂಪಾದನೆಯನ್ನೇ ಗುರಿಯಾಗಿರಿಸಿಕೊಂಡ ರಾಜುವಿನ ಬಾಳಲ್ಲಿ ನಡೆಯುವ ಪ್ರಮುಖ ಘಟನೆಯೇನು, ಅದು ಆತನಿಗೆ ತಿಳಿಸುವ ಸತ್ಯವೇನು ಎನ್ನುವುದನ್ನು ಪರದೆಯ ಮೇಲೆ ನೋಡಿದರೇನೇ ಸೊಗಸು.

ಮಲೆನಾಡ ಹುಡುಗ ರಾಜುವಾಗಿ ಗುರುನಂದನ್ ಮತ್ತೊಮ್ಮೆ ಆಕರ್ಷಕ ನಟನೆ ನೀಡಿದ್ದಾರೆ. ಜೀವನದ ವಿವಿಧ ಘಟ್ಟಗಳನ್ನು ತೋರಿಸುವ ಸಂದರ್ಭದಲ್ಲಿ ಅದಕ್ಕೆ ಹೊಂದಿಕೊಂಡಂತೆ ಕಾಣಿಸಿಕೊಂಡಿದ್ದಾರೆ. ಆದರೆ ಶಾಲಾ ಬಾಲಕನ ಗೆಟಪ್ ನಲ್ಲಿ ನೈಜತೆಯ ಕೊರತೆ ಎದ್ದು ಕಾಣುತ್ತದೆ. ನಾಯಕಿಯಾಗಿ ಆವಂತಿಕಾ ಶೆಟ್ಟಿಯವರಿಗೂ ನಟನೆಗೆ ಅವಕಾಶ ವಿರುವ ಪಾತ್ರವೇ ಲಭ್ಯವಾಗಿದೆ. ಬಾಲ್ಯದ ಗೆಳತಿ ಯಾಗಿ ನಟಿಸಿದ ಆಶಿಕಾ ಜೊತೆಗಿನ ಹಾಡು ಮಾತ್ರ ಚಿತ್ರದ ಪ್ರಥಮ ಆಕರ್ಷಣೆಯಾಗಿಯೇ ಉಳಿದಿದೆ. ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುದೀಪ್‌ಗೆ ‘ಅವರಿಗಷ್ಟೇ ಹೊಂದಬಲ್ಲದು’ ಎಂಬಂಥ ಪಾತ್ರ ನೀಡಲಾಗಿದೆ. ಅವರ ಆಕರ್ಷಕ ಕಂಠ ಆಭರಣವಾದರೆ, ಆ ಧ್ವನಿಯಲ್ಲಿ ಮೂಡಿ ಬಂದಿರುವ ಅರ್ಥಪೂರ್ಣ ಸಂಭಾಷಣೆಗಳು ಮುತ್ತು, ರತ್ನ, ವೈಢೂರ್ಯದಂತಿವೆ. ಚಿತ್ರದ ಒಟ್ಟು ಸಂಭಾಷಣೆಯ ಮೂಲಕ ನರೇಶ್ ಸಂದರ್ಭವನ್ನು ಚೆನ್ನಾಗಿ ಮಾಡಿದ್ದಾರೆ. ಸುದೀಪ್ ಸೇರಿದಂತೆ ಪ್ರತಿಯೊಬ್ಬರ ಮಾತುಗಳಲ್ಲಿಯೂ ಈಗಾಗಲೇ ವಾಟ್ಸ್‌ಆ್ಯಪ್ ನಲ್ಲಿ ಹರಿದಾಡಿರುವಂಥ ಜೋಕ್, ಉಪಕತೆಗಳೇ ತುಂಬಿ ಕೊಂಡಿವೆ! ಆದರೆ ಅವುಗಳನ್ನು ದೃಶ್ಯ ವಾಗಿಸಿರುವ ರೀತಿಯಲ್ಲಿ ಹೊಸತನವಿದೆ.

ಚಿಕ್ಕಣ್ಣ, ಸಾಧುಕೋಕಿಲ, ಅಮಿತ್ ಮೊದಲಾ ದವರ ತಾರಾಗಣ ನೀಡುವ ಖುಷಿ, ಟಿಕೆಟ್ ಗೆ ಕೊಟ್ಟ ಹಣ ವಾಪಸು ಬಂತೆನ್ನುವ ಸಮಾಧಾನ ನೀಡಬಹುದು! ಎಲ್ಲಕ್ಕಿಂತ ಮುಖ್ಯವಾಗಿ ಮಾತಿಗೊಮ್ಮೆ ವಿಭಿನ್ನ ಚಿತ್ರ ಎನ್ನುವವರು ಈ ಸಿನೆಮಾದ ಸೆಕೆಂಡ್ ಹಾಫ್ ನೋಡುವುದು ಉತ್ತಮ. ಯಾಕೆಂದರೆ ಕಲ್ಪಿಸಲಾಗದಂಥ ಸನ್ನಿವೇಶಗಳು ಚಿತ್ರದಲ್ಲಿ ಮೂಡಿವೆ. ಅವುಗಳು ಒಂದಷ್ಟು ನಾಟಕೀಯತೆಗೆ ಕಾರಣ ವಾಗಬಹುದು. ಆದರೆ ಆ ದೃಶ್ಯಗಳು ಯಾವ ಸಂದೇಶವನ್ನು ನೀಡಲು ಸೃಷ್ಟಿಯಾಗಿವೆಯೋ, ಆ ಸಂದೇಶವನ್ನು ಪ್ರೇಕ್ಷಕರ ಮನ ದೊಳಗೆ ಸೇರಿಸಿಬಿಡುತ್ತದೆ. ಹಾಗಾಗಿ ಸಂಭ್ರಮದೊಡನೆ ಸಂದೇಶ ನೀಡುವ ಈ ಚಿತ್ರ ನೋಡಿ ಮಂದಹಾಸದೊಡನೆ ಥಿಯೇಟರ್ ನಿಂದ ಹೊರಗೆ ಬರಬಹುದು.
 

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News