ತೊಗಾಡಿಯಾ ನೇತೃತ್ವದಲ್ಲಿ ಮಾನವ ಹಕ್ಕು ಆಯೋಗಕ್ಕೆ ದೂರು!

Update: 2018-01-21 05:24 GMT

ಪ್ರವೀಣ್ ತೊಗಾಡಿಯಾ, ಪ್ರಮೋದ್ ಮುತಾಲಿಕರೆಲ್ಲ ಬೀದಿಯಲ್ಲಿ ನಿಂತು ಕಣ್ಣೀರು ಸುರಿಸುತ್ತಾ ಪತ್ರಿಕಾಗೋಷ್ಠಿಯ ಕರೆಯ ತೊಡಗಿರುವುದು ನೋಡಿ ಪತ್ರಕರ್ತ ಎಂಜಲು ಕಾಸಿಗೆ ಯಾಕೋ ಉಪೇಂದ್ರ ಅವರ ‘ರಕ್ತ ಕಣ್ಣೀರು’ ಚಿತ್ರ ನೆನಪಿಗೆ ಬಂದು, ತನ್ನ ಜೋಳಿಗೆಯ ಜೊತೆಗೆ ನೇರವಾಗಿ ತೊಗಾಡಿಯಾ ಅವರನ್ನು ಭೇಟಿ ಮಾಡಿದ.

‘‘ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ’’ ಪ್ರಮೋದ್ ಮುತಾಲಿಕ್ ಬಾಗಿಲಲ್ಲೇ ನಿಂತು ಕಾಸಿಯ ಮುಂದೆ ಕಣ್ಣೀರು ಸುರಿಸುತ್ತಾ ಹೇಳಿದರು.

‘‘ಪ್ರಜ್ಞಾಹೀನರಾಗಲು ಅವರಿಗೆ ಪ್ರಜ್ಞೆ ಇದ್ದದ್ದು ಯಾವಾಗ ಸಾರ್?’’ ಸಕಲ ಧೈರ್ಯವನ್ನು ಒಗ್ಗೂಡಿಸಿ ಕಾಸಿ ಕೇಳಿದ.

  ‘‘ಪ್ರಜ್ಞೆ ಬಂದಿದೆ ಎನ್ನುವ ಕಾರಣಕ್ಕಾಗಿಯೇ ನಮ್ಮ ಗುರುಗಳನ್ನು ಎನ್‌ಕೌಂಟರ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಆದುದರಿಂದ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಂತೆ ನಟಿಸುತ್ತಿದ್ದಾರೆ. ಸೊಹ್ರಾಬುದ್ದೀನ್‌ನನ್ನು ಕೊಂದಂತೆ ನನ್ನ ಗುರುಗಳನ್ನು ಕೊಲ್ಲಲು ಸರಕಾರ ವ್ಯಾಪಕ ಯೋಜನೆ ಹಾಕಿಕೊಂಡಿದೆ...’’ ಪ್ರಮೋದ್ ಮುತಾಲಿಕ್ ಏದುಸಿರು ಬಿಡುತ್ತಾ ಹೇಳಿದರು.

‘‘ಎನ್‌ಕೌಂಟರ್ ಮಾಡಿದರೆ ಮೋದಿಯವರಿಗೆ ಏನು ಪ್ರಯೋಜನ?’’ ಕಾಸಿ ಕೇಳಿದ.

 ‘‘ಪಾಕಿಸ್ತಾನವನ್ನು ಓಲೈಸುವುದಕ್ಕಾಗಿ ಆರೆಸ್ಸೆಸ್ ಮತ್ತು ಮೋದಿ ಸರಕಾರ ತೊಗಾಡಿಯರನ್ನು ಕೊಲ್ಲಲು ಹೊರಟಿದೆ. ನಾವು ಬಿಡುವುದಿಲ್ಲ....ನಾವು ಹೋರಾಟ ಮಾಡುತ್ತೇವೆ...’’ ಮುತಾಲಿಕ್ ಗರ್ಜಿಸಿದರು.

‘‘ಆದರೆ ತೊಗಾಡಿಯಾ ಮತ್ತು ನಿಮ್ಮ ಮೇಲೆ ಕ್ರಿಮಿನಲ್ ಕೇಸುಗಳಿವೆಯಲ್ಲ?’’ ಕಾಸಿ ಕೇಳಿದ.

‘‘ಬ್ರಿಟಿಷರ ಕಾಲದಲ್ಲಿ ಕೇಸುಗಳು ಮಹಾತ್ಮಗಾಂಧಿಯ ಮೇಲೂ ಇದ್ದವು. ಆದರೆ ಅವರೇನೂ ಗಾಂಧಿಯನ್ನು ಎನ್‌ಕೌಂಟರ್ ಮಾಡಲಿಲ್ಲ....’’ ಮುತಾಲಿಕ್ ವಾದಿಸಿದರು.

‘‘ಆದರೆ ಬ್ರಿಟಿಷರ ಬದಲಿಗೆ ನೀವೇ ಮಾಡಿದರಲ್ಲ?’’ ಕಾಸಿ ಕೇಳಿದ.

‘‘ಅದು ನಾವು ಮಾಡಿರುವುದಲ್ಲ, ಆರೆಸ್ಸೆಸ್ ಮಾಡಿರುವುದು. ಗಾಂಧೀಜಿಯ ರೀತಿಯಲ್ಲೇ ತೊಗಾಡಿಯಾರನ್ನೂ ನನ್ನನ್ನೂ ಮುಗಿಸಲು ಹೊರಟಿದ್ದಾರೆ....’’ ಎಂದು ಬಳಬಳನೆ ಕಣ್ಣೀರು ಸುರಿಸತೊಡಗಿದರು.

‘‘ಅಂದರೆ ತೊಗಾಡಿಯಾ ಅವರು ಮಹಾತ್ಮಾ ಗಾಂಧೀಜಿಗೆ ಸಮ ಎನ್ನುತ್ತೀರಾ?’’ ಕಾಸಿ ಕೇಳಿದ.

‘‘ಹೂಂ. ಅವರು ಮಹಾತ್ಮಗಾಂಧಿ. ನಾನು ಅಬುಲ್ ಕಲಾಂ ಅಜಾದು. ನಮ್ಮಿಬ್ಬರನ್ನು ಕಂಡರೆ ಅದಕ್ಕೆ ಆರೆಸ್ಸೆಸ್‌ಗೆ ಸಿಟ್ಟು’’ ಪ್ರಮೋದ್ ಮುತಾಲಿಕ್ ಮತ್ತಷ್ಟು ಅಳತೊಡಗಿದರು.

‘‘ಅಚ್ಛೇ ದಿನ್ ಆನೆವಾಲಾ ಹೇ ಎಂದು ಮೋದಿ ಹೇಳಿದ್ದರು. ನೀವು ಕಣ್ಣೀರು ಇಡುತ್ತಿರುವುದು ನೋಡಿದರೆ ಅದು ನಿಜ ಎಂದು ಕಾಣುತ್ತಿದೆಯಲ್ಲವೇ?’’

‘‘ಇಡೀ ಹಿಂದೂ ಧರ್ಮದ ಕಣ್ಣೀರನ್ನು ನಾವು ಸಾಂಕೇತಿಕವಾಗಿ ಹರಿಸುತ್ತಿದ್ದೇವೆ.....’’ ಅವರು ಹೇಳಿದರು.

‘‘ಅಂದರೆ ಆರೆಸ್ಸೆಸ್‌ನೋರು ಹಿಂದೂಗಳಲ್ಲವೇ?’’ ಕಾಸಿ ಕೇಳಿದ.

‘‘ಅವರು ನಕಲಿ ಹಿಂದೂಗಳು. ನಾವೇ ನಿಜವಾದ ಹಿಂದೂಗಳು’’ ಮುತಾಲಿಕ್ ಘೋಷಿಸಿದರು.

‘‘ಆದರೆ ಅವರೂ ಹಿಂದೂಗಳು ಎಂದು ಹೇಳಿಕೊಳ್ಳುತ್ತಿದ್ದಾರಲ್ಲ?’’

‘‘ದೇಶದಲ್ಲಿ ಚುನಾವಣೆ ನಡೆಯಲಿ. ಎಲ್ಲ ಹಿಂದೂಗಳೂ ಈ ಚುನಾವಣೆಯಲ್ಲಿ ಭಾಗವಹಿಸಬೇಕು. ನಿಜವಾದ ಹಿಂದೂಗಳು ಯಾರು ಎನ್ನುವುದು ಆಗ ಗೊತ್ತಾಗುತ್ತದೆ...’’ ಮುತಾಲಿಕ್ ಹೇಳಿದರು.

‘‘ಆರೆಸ್ಸೆಸ್‌ನೋರು ನಿಜವಾದ ಹಿಂದೂ ಗಳೋ ಅಥವಾ ವಿಎಚ್‌ಪಿ ನಿಜವಾದ ಹಿಂದೂಗಳೋ ಎಂದು ಕಂಡು ಹಿಡಿಯುವುದಕ್ಕೆ ಚುನಾವಣೆಯೆ?’’ ಕಾಸಿ ಅಚ್ಚರಿಯಿಂದ ಕೇಳಿದ.

‘‘ಹೌದು. ಹಿಂದೂಸ್ಥಾನ ಆರೆಸ್ಸೆಸ್‌ನದ್ದೋ ವಿಎಚ್‌ಪಿಯದ್ದೋ ಎನ್ನುವುದು ಚುನಾವಣೆಯಲ್ಲಿ ನಿರ್ಧಾರವಾಗಬೇಕು. ನಿಜವಾದ ಹಿಂದೂಗಳೆಲ್ಲ ನಮಗೆ ಮತ ಹಾಕುತ್ತಾರೆ...’’ ಪ್ರಮೋದ್ ಮುತಾಲಿಕ್ ಹೇಳಿದರು.

‘‘ಆದರೆ ಚುನಾವಣೆಯಲ್ಲಿ ಇವಿಎಂ ಮತಯಂತ್ರ ಬಳಸುತ್ತಾರಲ್ಲ....ಇದರ ಬಗ್ಗೆ ನಂಬಿಕೆಯಿದೆಯೇ?’’ ಕಾಸಿ ಅನುಮಾನದಿಂದ ಪ್ರಶ್ನಿಸಿದ.

‘‘ಯಾವ ಕಾರಣಕ್ಕೂ ಇವಿಎಂ ಬಳಸಬಾರದು. ಇವಿಎಂ ಬಳಸಿದರೆ ಆರೆಸ್ಸೆಸ್‌ನೋರೇ ಗೆಲ್ಲುತ್ತಾರೆ. ಮತ ಪತ್ರಗಳ ಮೂಲಕ ಚುನಾವಣೆ ನಡೆದು ನಿಜವಾದ ಹಿಂದೂಗಳು ಯಾರು ಎನ್ನುವುದು ಸಾಬೀತಾಗಬೇಕು...’’ ಮುತಾಲಿಕ್ ಹೇಳಿದರು.

‘‘ಇದರಲ್ಲಿ ಆರೆಸ್ಸೆಸ್ ಸೋತರೆ?’’ ಕಾಸಿ ಕೇಳಿದ.

‘‘ಅವರೆಲ್ಲ ನಕಲಿ ಹಿಂದೂಗಳು ಎಂದು ಸಾಬೀತಾಗುವುದರಿಂದ, ನಿಜವಾದ ಹಿಂದೂಗಳ ಕೈಗೆ ದೇಶವನ್ನು ಒಪ್ಪಿಸಬೇಕು....ಹಾಗೆಯೇ ಗುಜರಾತ್ ಹತ್ಯಾಕಾಂಡ, ಲವ್‌ಜಿಹಾದ್ ಮೊದಲಾದ ಎಲ್ಲ ಹೆಗ್ಗಳಿಕೆಗಳನ್ನು ನಮಗೆ ಹಸ್ತಾಂತರಿಸಬೇಕು...’’

‘‘ಚುನಾವಣೆಯಲ್ಲಿ ನಿಮ್ಮ ಚಿಹ್ನೆ ಯಾವುದು ಸಾರ್?’’

‘‘ತಲೆಬುರುಡೆ. ಗುಜರಾತ್‌ನಲ್ಲಿ ಉರುಳಿಸಿದ ತಲೆಬುರುಡೆಯನ್ನೇ ನಾವು ಚಿಹ್ನೆಯಾಗಿ ಬಳಸಿಕೊಳ್ಳುತ್ತಿದ್ದೇವೆ...’’ ಮುತಾಲಿಕ್ ಘೋಷಿಸಿದರು.

‘‘ಆದರೆ ನೀವೆಲ್ಲ ಹಿಂದೂಗಳು ಅಲ್ಲವೇ ಅಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರಲ್ಲ?’’ ಕಾಸಿ ಪ್ರಶ್ನಿಸಿದ.

‘‘ಅವರೆಲ್ಲ ದೇಶದ್ರೋಹಿಗಳು’’ ಮುತಾಲಿಕ್ ಅಬ್ಬರಿಸಿದರು.

‘‘ಅಂದರೆ ಚುನಾವಾಣೆಯಲ್ಲಿ ಅವರ ಮತಗಳೂ ನಿಮಗೆ ಬೇಕಲ್ಲವೇ?’’ ಕಾಸಿ ಕೇಳಿದ.

‘‘ಮತದಾರರ ಪಟ್ಟಿಯನ್ನು ನಾವೇ ತಯಾರಿಸುತ್ತೇವೆ. ಯಾರಿಗೆಲ್ಲ ನಾವು ಹಿಂದೂ ಎನ್ನುವ ಪ್ರಮಾಣ ಪತ್ರ ಕೊಡುತ್ತೇವೆಯೋ ಅವರಿಗೆ ಮಾತ್ರ ಮತ ಹಾಕಲು ಅವಕಾಶ ವಿರುವುದು...ಈ ಚುನಾವಣೆಗೆ ಪ್ರತ್ಯೇಕ ಚುನಾವಣಾ ಆಯೋಗವಿದ್ದು ಪ್ರತ್ಯೇಕ ಚುನಾವಣಾ ಆಯುಕ್ತರೂ ಇರುತ್ತಾರೆ...’’

‘‘ಯಾರು ಸಾರ್? ಪೇಜಾವರ ಶ್ರೀಗಳೋ?’’

‘‘ಮಠದಲ್ಲಿ ಇಫ್ತಾರ್‌ಕೂಟ ಮಾಡಿದ ಅವರನ್ನು ಹೇಗೆ ನಂಬುವುದು? ಎಸ್. ಎಲ್. ಭೈರಪ್ಪರನ್ನು ಮಾಡಬೇಕು ಎಂದಿದ್ದೇವೆ...’’

‘‘ಚುನಾವಣೆಗೆ ಮುನ್ನವೇ ನಿಮ್ಮನ್ನೆಲ್ಲ ಬಂಧಿಸಿದರೆ...’’ ಕಾಸಿಗೆ ಅನುಮಾನ ಕಾಡಿತು.

‘‘ಹಾಗಾದಲ್ಲಿ ತೊಗಾಡಿಯಾ ನೇತೃತ್ವದಲ್ಲಿ ನಾವು ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸುತ್ತೇವೆ...ಟೀಸ್ತಾ ಸೆಟಲ್ವಾಡ್ ಜೊತೆ ಸೇರಿ ಗುಜರಾತ್ ಹತ್ಯಾಕಾಂಡ ಸಂತ್ರಸ್ತರ ಪರವಾಗಿ ಹೋರಾಟಕ್ಕೆ ಇಳಿಯುತ್ತೇವೆ’’

ಕಾಸಿ ಈಗ ಮುಖ್ಯ ವಿಷಯಕ್ಕೆ ಬಂದ ‘‘ಸಾರ್ ತೊಗಾಡಿಯಾ ಅವರಿಗೆ ಪ್ರಜ್ಞೆ ಬಂದಿದೆಯೇ ಎಂದು ನೋಡಿ. ಅವರನ್ನೊಂದು ಇಂಟರ್ಯೂ ಮಾಡಬೇಕು...’’

ಮುತಾಲಿಕ್ ಒಳಗೆ ಇಣುಕಿದರು. ಬಾಗಿಲು ತೆರೆದ ಸದ್ದು ಕೇಳಿ ತೊಗಾಡಿಯಾ ಪೊಲೀಸರು ಬಂದೇ ಬಿಟ್ಟರೋ ಎಂದು ಗಾಬರಿಯಾಗಿ ‘ಬಚಾವೋ ಬಚಾವೋ’ ಎಂದು ಕಿಟಕಿಯಿಂದ ಹಾರಿ ಓಡ ತೊಡಗಿದರು.

ಕಾಸಿ ಮತ್ತು ಮುತಾಲಿಕ್ ‘ರುಖಿಯೇ ರುಖಿಯೇ...’ ಎನ್ನುತ್ತಾ ಅವರ ಹಿಂದೆಯೇ ಓಡತೊಡಗಿದರು.

*ಚೇಳಯ್ಯ

chelayya@gmail.com

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News