ಫುಟ್ಬಾಲ್‌ನಲ್ಲಿ ಗೋಲ್‌ಕೀಪರ್ ಗೋಲು ದಾಖಲಿಸಿದಾಗ…!

Update: 2018-01-21 18:12 GMT

ಮ್ಯಾಡ್ರಿಡ್, ಜ.21:ಸ್ಪಾನಿಶ್ ಸೆಗುಂಡ ಡಿವಿಜನ್ ಪಂದ್ಯದಲ್ಲಿ ಗೋಲ್‌ಕೀಪರ್‌ವೊಬ್ಬರು ಗೋಲು ಬಾರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

 ಸ್ಪೋರ್ಟಿಂಗ್ ಜಿಜೊನ್ ಹಾಗೂ ಲುಗೊ ತಂಡಗಳ ನಡುವೆ ಶನಿವಾರ ನಡೆದ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಜಿಜೊನ್ ವಿರುದ್ಧ ಲುಗೊ ತಂಡ 2-1 ಅಂತರದಿಂದ ಮುನ್ನಡೆ ಸಾಧಿಸಿದ್ದಾಗ ಗೋಲ್‌ಕೀಪರ್ ಜುಯಾನ್ ಕಾರ್ಲೊಸ್ ಗೋಲು ದಾಖಲಿಸುವ ಮೂಲಕ ಲುಗೋ ತಂಡದ ಖಾತೆ ಇನ್ನೊಂದು ಗೋಲು ಸೇರಿಸಿದರು. ಪಂದ್ಯ ಮುಗಿಯಲು 10 ನಿಮಿಷ ಬಾಕಿ ಇದ್ದಾಗ ಎದುರಾಳಿ ತಂಡದ ಆಟಗಾರ ಡಿಯಾಗೊ ಮರಿನೊ ಗೋಲು ಗಳಿಸಲು ಪ್ರಯತ್ನ ನಡೆಸಿದರು. ಆಗ ಗೋಲ್‌ಕೀಪರ್ ಕಾರ್ಲೊಸ್ ಚೆಂಡನ್ನು ಕಾಲಿನಿಂದ ಒದ್ದು ವಿಫಲಗೊಳಿಸಿದರು. ಕಾರ್ಲೊಸ್ 70 ಯಾರ್ಡ್ ದೂರದಿಂದ ಕಳುಹಿಸಿದ ಚೆಂಡು ಎದುರಾಳಿ ಗೋಲ್‌ಪೆಟ್ಟಿಗೆಗೆ ನೇರವಾಗಿ ಬೀಳುವ ಮೂಲಕ ಲುಗೊ ತಂಡದ ಖಾತೆಗೆ ಗೋಲು ಸೇರ್ಪಡೆಗೊಂಡಿತು.

ಕಾರ್ಲೊಸ್ ಅವರು ಗುರಿಯತ್ತ ಕಳುಹಿಸಿದ್ದ ಚೆಂಡನ್ನು ತಡೆಯಲು ಎದುರಾಳಿ ತಂಡದ ಗೋಲ್‌ಕೀಪರ್ ವಿಫಲರಾದರು. ಇದರೊಂದಿಗೆ ಗೋಲ್‌ಕೀಪರ್ ಗೋಲು ಬಾರಿಸಿದ ಅಪರೂಪದ ದಾಖಲೆ ನಿರ್ಮಾಣಗೊಂಡಿತು. ಲುಗೊ ತಂಡದ ಖಾತೆಗೆ ಇನ್ನೊಂದು ಗೋಲು ಜಮೆಯಾಗಿ ತಂಡ 3-1 ಅಂತರದಲ್ಲಿ ಜಯಗಳಿಸಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News