ಆಹ್ವಾನಿತ ಹಾಕಿ ಟೂರ್ನಿ ಫೈನಲ್: ಬೆಲ್ಜಿಯಂಗೆ ಶರಣಾದ ಭಾರತ

Update: 2018-01-21 18:11 GMT

ಟೌರಂಗ(ನ್ಯೂಝಿಲೆಂಡ್), ಜ.21: ಮೊದಲ ಹಂತದ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಭಾರತ ತಂಡ ಬೆಲ್ಜಿಯಂ ವಿರುದ್ಧ 1-2 ಅಂತರದಿಂದ ಶರಣಾಗಿದೆ.

ರವಿವಾರ ನಡೆದ ಪಂದ್ಯದಲ್ಲಿ ಬೆಲ್ಜಿಯಂ ಪರ ಟಾಮ್ ಬೂನ್(4ನೇ ನಿಮಿಷ) ಹಾಗೂ ಸೆಬಾಸ್ಟಿಯನ್ ಡೊಕಿಯೆರ್(36ನೇ ನಿ.) ತಲಾ ಒಂದು ಗೋಲು ಬಾರಿಸಿದರು. ಮನ್‌ದೀಪ್ ಸಿಂಗ್ 19ನೇ ನಿಮಿಷದಲ್ಲಿ ಭಾರತದ ಪರ ಏಕೈಕ ಗೋಲು ದಾಖಲಿಸಿದರು.

ಪಂದ್ಯ ಆರಂಭವಾಗಿ 3 ನಿಮಿಷ ಕಳೆಯುವಷ್ಟರಲ್ಲಿ ಬೆಲ್ಜಿ ಯಂ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಭಾರತದ ಚಿಂಗ್ಲೆಸನಾ ಬೆಲ್ಜಿಯಂಗೆ ಗೋಲು ನಿರಾಕರಿಸಿದರು. ನಾಲ್ಕನೇ ನಿಮಿಷದಲ್ಲಿ ಗೋಲು ಬಾರಿಸಿದ ಬೆಲ್ಜಿಯಂ ತಂಡ ಭಾರತಕ್ಕೆ ಒತ್ತಡ ಹೇರಲು ಯಶಸ್ವಿಯಾಯಿತು.

19ನೇ ನಿಮಿಷದಲ್ಲಿ ಡಿಫೆಂಡರ್ ರೂಪಿಂದರ್‌ಪಾಲ್ ಸಿಂಗ್ ನೀಡಿದ ಪಾಸ್ ನೆರವಿನಿಂದ ಮನ್‌ದೀಪ್ ಸಿಂಗ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ 1-1 ರಿಂದ ಸಮಬಲಗೊಳಿಸಿದರು.

36ನೇ ನಿಮಿಷದಲ್ಲಿ ಭಾರತದ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್‌ರನ್ನು ವಂಚಿಸಿದ ಸೆಬಾಸ್ಟಿಯನ್ ಡೊಕಿಯೆರ್ ಬೆಲ್ಜಿಯಂಗೆ 2-1 ಮುನ್ನಡೆ ಒದಗಿಸಿಕೊಟ್ಟರು. ಭಾರತ ಕೊನೆಯ ಕ್ವಾರ್ಟರ್‌ನಲ್ಲಿ ತನ್ನ ದಾಳಿಯನ್ನು ತೀವ್ರಗೊಳಿಸಿತು. ಬೆಲ್ಜಿಯಂನ ಅನುಭವಿ ಗೋಲ್‌ಕೀಪರ್ ವಿನ್ಸೆಂಟ್ ಭಾರತಕ್ಕೆ ಗೋಲು ನಿರಾಕರಿಸಿದರು.

ಭಾರತದ ಕೊನೆಯ ಕ್ಷಣದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಹರ್ಮನ್‌ಪ್ರೀತ್ ಪ್ರಯತ್ನವನ್ನು ಬೆಲ್ಜಿಯಂ ಆಟಗಾರರು ವಿಫಲಗೊಳಿಸಿದರು.

ಎರಡನೇ ಹಂತದ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಮೆಂಟ್ ಜ.24 ರಂದು ನಡೆಯಲಿದ್ದು, ಭಾರತ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ನ್ಯೂಝಿಲೆಂಡ್‌ನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News