ಮಾರ್ಚ್‌ನಲ್ಲಿ ಕೆಂಪುಕೋಟೆ ಹೊರಗೆ ಯಾಗ: ಬಿಜೆಪಿ ಸಂಸದ ಮಹೇಶ್ ಗಿರಿ ಘೋಷಣೆ

Update: 2018-01-22 17:15 GMT

ಹೊಸದಿಲ್ಲಿ,ಜ.22: ಇಲ್ಲಿನ ಕೆಂಪುಕೋಟೆಯ ಹೊರಭಾಗದ ಹುಲ್ಲುಹಾಸಿನಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ಏಳು ದಿನಗಳ ಕಾಲ ಬೃಹತ್ ವೈದಿಕ ಯಾಗವನ್ನು ನಡೆಸಲಾಗುವುದೆಂದು ಬಿಜೆಪಿ ಸಂಸದ ಮಹೇಶ್ ಗಿರಿ ಸೋಮವಾರ ಘೋಷಿಸಿದ್ದಾರೆ. ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ರಾಜಕೀಯ ಮುಖಂಡರನ್ನು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದೆಂದು ಅವರು ಹೇಳಿದ್ದಾರೆ. 18-25ರಿಂದ ಮಾರ್ಚ್ ನಡುವೆ ನಡೆಯಲಿರುವ ಈ ಯಜ್ಞದಲ್ಲಿ 1100 ಅರ್ಚಕರು ಪಾಲ್ಗೊಳ್ಳಲಿದ್ದಾರೆ ಎಂದರು.

 ಅಪಾರ ವೆಚ್ಚದಲ್ಲಿ ನಡೆಯಲಿರುವ ಈ ವೈದಿಕ ಕಾರ್ಯಕ್ರಮಕ್ಕೆ ದೇಣಿಗೆ ನೀಡಲು ದಿಲ್ಲಿ ಮೂಲದ ಕೆಲವು ಉದ್ಯಮಿಗಳು ಮುಂದೆ ಬಂದಿರುವುದಾಗಿ ಮಹೇಶ್ ಗಿರಿ ತಿಳಿಸಿದ್ದಾರೆ.

  ‘ರಾಷ್ಟ್ರೀಯ ರಕ್ಷಾ ಮಹಾಯಜ್ಞ’ದ ನೀಲಿನಕಾಶೆಯನ್ನು ಸೋಮವಾರ ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅನಾವರಣಗೊಳಿಸಿ ಮಾತನಾಡಿದ ಮಹೇಶ್ ಗಿರಿ ಅವರು, ಯಾಗದ ವೇದಿಕೆಯನ್ನು ನಿರ್ಮಿಸಲು ಭಾರತ ಹಾಗೂ ಚೀನಾ ನಡುವೆ ಸಂಘರ್ಷದ ಪರಿಸ್ಥಿತಿ ಏರ್ಪಟ್ಟಿದ್ದ ಡೋಕ್ಲಾಮ್, ಗಡಿನಿಯಂತ್ರಣ ರೇಖೆ ಸಮೀಪದ ಪೂಂಚ್‌ನಿಂದ ಮಣ್ಣು ಹಾಗೂ ನೀರನ್ನು ಬಳಸಿಕೊಳ್ಳಲಾಗುವುದು ಎಂದರು. ‘‘ ಬಾಹ್ಯ ಹಾಗೂ ಆಂತರಿಕ ಶಕ್ತಿಗಳು ದೇಶದ ಹಿತಾಸಕ್ತಿಗಳಿಗೆ ಹಾನಿ ಮಾಡಲು ಯತ್ನಿಸುತ್ತಿವೆ. ಇಂತಹ ಪ್ರಯತ್ನಗಳನ್ನು ತಡೆಯಲು ಹಾಗೂ ನವಭಾರತದ ನಿರ್ಮಾಣಕ್ಕಾಗಿ ಪಣತೊಡಲು ನಮ್ಮ ಪುರಾತನ ಪರಂಪರೆಯ ಪ್ರಕಾರ ಯಾಗವನ್ನು ನಡೆಸಲಾಗುವುದೆಂದು ಅವರು ಹೇಳಿದ್ದಾರೆ.

 ಒಟ್ಟು 108 ಯಜ್ಞ ಕುಂಡಗಳನನ್ನು ಸ್ಥಾಪಿಸಿ, ಸುಮಾರು 1,100 ಅರ್ಚಕರಿಂದ ದೇವರಿಗೆ ಹವಿಸ್ಸನ್ನು ಅರ್ಪಿಸಲಾಗುವುದು ಎಂದು ಗಿರಿ ತಿಳಿಸಿದರು. ದೇಶಾದ್ಯಂತ ರಥಯಾತ್ರೆಗಳನ್ನು ಆಯೋಜಿಸಿ ಯಾಗಕ್ಕೆ ಬೇಕಾಗುವ ತುಪ್ಪವನ್ನು ಸಂಗ್ರಹಿಸಲಾಗುವುದು ಎಂದರು.

ಪ್ರತಿವರ್ಷವೂ ರಾಮಲೀಲಾ ಉತ್ಸವ ನಡೆಯುವ ಈ ಮೈದಾನದಲ್ಲಿ ತಾತ್ಕಾಲಿಕವಾಗಿ ವೈದಿಕ ಗ್ರಾಮವೊಂದನ್ನು ನಿರ್ಮಿಸಲಾಗುವುದು. ಖ್ಯಾತ ಗಾಯಕರಾದ ಶಂಕರ್ ಮಹಾದೇವನ್ ಹಾಗೂ ಕೈಲಾಶ್ ಖೇರ್ ಸಂಗೀತ ಪ್ರದರ್ಶನ ನೀಡಲಿದ್ದಾರೆ. ಈ ಬೃಹತ್ ಯಾಗದಲ್ಲಿ ಬಾಲಿವುಡ್‌ನ ಖ್ಯಾತನಾಮರು, ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳ ಪಾಲ್ಗೊಳ್ಳುವರು ಎಂದು ಪೂರ್ವ ದಿಲ್ಲಿ ಕ್ಷೇತ್ರದ ಸಂಸದರೂ ಆದ ಮಹೇಶ್ ಗಿರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News