ಅಮೆರಿಕದ ‘ಸರಕಾರ ಬಂದ್’ ಅಂತ್ಯ

Update: 2018-01-23 17:11 GMT

ವಾಶಿಂಗ್ಟನ್, ಜ. 23: ಫೆಬ್ರವರಿ 8ರವರೆಗೆ ಫೆಡರಲ್ (ಕೇಂದ್ರ) ಸರಕಾರಕ್ಕೆ ನಿಧಿ ಪೂರೈಸುವ ಕಿರು ಅವಧಿಯ ವೆಚ್ಚ ಮಸೂದೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಸಹಿ ಹಾಕಿದ್ದಾರೆ. ಇದರೊಂದಿಗೆ, ಮಕ್ಕಳಿರುವಾಗ ದಾಖಲೆಗಳಿಲ್ಲದೆ ಅಮೆರಿಕಕ್ಕೆ ಬಂದಿರುವ ವಲಸಿಗರನ್ನು ವಾಪಸ್ ಕಳುಹಿಸುವ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಪ್ರತಿಪಕ್ಷ ಡೆಮಾಕ್ರಟಿಕ್ ಸಂಸದರ ನಡುವಿನ ಹಗ್ಗಜಗ್ಗಾಟದಿಂದಾಗಿ ಏರ್ಪಟ್ಟ ‘ಸರಕಾರ ಬಂದ್’ ಕೊನೆಗೊಂಡಿದೆ.

ಸೋಮವಾರ ಬೆಳಗ್ಗೆ ಸೆನೆಟರ್‌ಗಳು ಒಮ್ಮತವೊಂದಕ್ಕೆ ಬಂದ ಬಳಿಕ ಮಸೂದೆಯನ್ನು ಮಂಡಿಸಲಾಯಿತು. ಈ ಮಸೂದೆಯು ಮುಂದಿನ ಮೂರು ವಾರಗಳ ಕಾಲ ಫೆಡರಲ್ ಸರಕಾರ ನಡೆಯಲು ನಿಧಿ ಪೂರೈಸುತ್ತದೆ.

ಇದಕ್ಕೆ ಪ್ರತಿಯಾಗಿ 7 ಲಕ್ಷ ದಾಖಲೆರಹಿತ ವಲಸಿಗರಿಗೆ ಗಡಿಪಾರಿನಿಂದ ರಕ್ಷಣೆ ನೀಡುವ ಮಸೂದೆಯನ್ನು ಸೆನೆಟ್ ಪರಿಶೀಲನೆ ನಡೆಸಲಿದೆ.

ಅಮೆರಿಕದ ರಿಪಬ್ಲಿಕನ್ನರು ಮತ್ತು ಡೆಮಾಕ್ರಟಿಕ್ ಸದಸ್ಯರು ರಾಜಿ ಒಪ್ಪಂದಕ್ಕೆ ಸೋಮವಾರ ಬೆಳಗ್ಗೆ ಹಸಿರು ನಿಶಾನೆ ತೋರಿಸಿದರು. ಇದರೊಂದಿಗೆ ಸರಕಾರಿ ಬಂದ್ ಕೂಡ ಕೊನೆಗೊಂಡಿತು.

ಬಳಿಕ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಇದನ್ನು ಅಂಗೀಕರಿಸಿತು ಹಾಗೂ ಸಹಿಗಾಗಿ ಅಧ್ಯಕ್ಷರಿಗೆ ಕಳುಹಿಸಿತು. ಮಸೂದೆ ಅಂಗೀಕಾರಗೊಂಡಿದೆ ಎನ್ನುವುದನ್ನು ಸೋಮವಾರ ಸಂಜೆ ಘೋಷಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News