ತಾಲಿಬಾನ್ ಅಡಗುದಾಣಗಳನ್ನು ನಾಶಪಡಿಸಿ

Update: 2018-01-23 17:04 GMT

ವಾಶಿಂಗ್ಟನ್, ಜ. 23: ಪಾಕಿಸ್ತಾನದ ನೆಲದಿಂದ ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುವ ತಾಲಿಬಾನ್ ನಾಯಕರನ್ನು ಹುಡುಕಿ ಬಂಧಿಸುವಂತೆ ಅಮೆರಿಕ ಸೋಮವಾರ ಪಾಕಿಸ್ತಾನಕ್ಕೆ ಕರೆ ನೀಡಿದೆ.

ಇದಕ್ಕೆ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ಪ್ರತಿಕ್ರಿಯಿಸಿದ ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿ ಐಝಾಝ್ ಅಹ್ಮದ್ ಚೌಧರಿ, ಅವರನ್ನು ತನ್ನ ದೇಶ ಈಗಾಗಲೇ ಅವರ ನೆಲೆಗಳಿಂದ ಹೊರದಬ್ಬಿದೆ ಎಂದು ಹೇಳಿದರು ಹಾಗೂ ಭಯೋತ್ಪಾದಕರ ಸುರಕ್ಷಿತ ಆಶ್ರಯ ತಾಣಗಳು ಇದ್ದರೆ ತೋರಿಸುವಂತೆ ಬಹಿರಂಗ ಸವಾಲು ಹಾಕಿದರು.

‘‘ತಾಲಿಬಾನ್ ನಾಯಕರನ್ನು ಕೂಡಲೇ ಬಂಧಿಸುವಂತೆ ಅಥವಾ ಹೊರದಬ್ಬುವಂತೆ ಹಾಗೂ ಆ ಮೂಲಕ ಭಯೋತ್ಪಾದಕ ಗುಂಪು ತನ್ನ ಕಾರ್ಯಾಚರಣೆಗೆ ಪಾಕಿಸ್ತಾನದ ನೆಲವನ್ನು ಬಳಸುವುದನ್ನು ತಡೆಯುವಂತೆ ನಾವು ಪಾಕಿಸ್ತಾನಕ್ಕೆ ಕರೆ ನೀಡುತ್ತೇವೆ’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ತನ್ನ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅದೇ ವೇಳೆ, ಕಳೆದ ವಾರಾಂತ್ಯದಲ್ಲಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ವೈಭವೋಪೇತ ಹೊಟೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು.

ದಾಳಿಯಲ್ಲಿ ಕನಿಷ್ಠ ವಿದೇಶೀಯರು ಸೇರಿದಂತೆ 22 ಮಂದಿ ಮೃತಪಟ್ಟಿದ್ದು, ಅಫ್ಘಾನ್ ತಾಲಿಬಾನ್ ಹೊಣೆ ಹೊತ್ತುಕೊಂಡಿದೆ.

ಉಗ್ರ ಅಡಗುದಾಣಗಳಿದ್ದರೆ ತೋರಿಸಿ: ಪಾಕ್

ಸ್ವಲ್ಪವೇ ಹೊತ್ತಿನಲ್ಲಿ ಸಭೆಯೊಂದರಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಚೌಧರಿ, ತನ್ನ ದೇಶದ ಸೇನೆಯು 2014ರಿಂದ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಲ್ಲಿರುವ ಎಲ್ಲ ಭಯೋತ್ಪಾದಕರು, ಅವರ ಅಡಗುದಾಣಗಳು ಮತ್ತು ಅವರ ಸ್ಫೋಟಕಗಳನ್ನು ನಿರ್ಮೂಲಗೊಳಿಸಿದೆ ಎಂದರು.

‘‘ನಿಮ್ಮಲ್ಲಿ ಸುರಕ್ಷಿತ ಭಯೋತ್ಪಾದಕ ಆಶ್ರಯತಾಣಗಳಿವೆ ಎಂದು ಯಾರಾದರೂ ಕೇಳಿದರೆ, ಎಲ್ಲಿ ತೋರಿಸಿ ಎಂದು ನಾವು ಹೇಳುತ್ತೇವೆ’’ ಎಂದು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News