ರಾಜ ರಾಣಿಗಿಂತ ಹೆಚ್ಚು ಮನಸ್ಸಿನಲ್ಲಿ ಉಳಿಯುವ 'ವಿಲನ್' !

Update: 2018-01-24 06:13 GMT

ಚಿತ್ರದ ಕುರಿತ ಎಲ್ಲಾ ಪ್ರಶ್ನೆ, ಗೊಂದಲಗಳಿಗೆ ಇಲ್ಲಿದೆ ಉತ್ತರ:

ರಜಪೂತ ಸಂಘಟನೆಗಳಿಂದ ಭಾರೀ ಪ್ರತಿರೋಧ ಎದುರಿಸಿರುವ ಸಂಜಯ್ ಲೀಲಾ ಭನ್ಸಾಲಿಯ 'ಪದ್ಮಾವತ್'  ಚಲನಚಿತ್ರ ರಜಪೂತರ ಪರಾಕ್ರಮವನ್ನು ಶಂಕಿಸುತ್ತದೆಯೇ ? - ಇಲ್ಲ

13ನೇ ಶತಮಾನದಲ್ಲಿ ಆಳಿದ್ದ ಮೇವಾರದ ರಜಪೂತರನ್ನು ಹೀರೋಗಳಂತೆ ಚಿತ್ರ ಬಿಂಬಿಸಿದೆಯೇ ? ಹೌದು

ಕರ್ನಿ ಸೇನಾಗೆ 'ಪದ್ಮಾವತ್' ವಿರೋಧಿಸಲು ಕಾರಣಗಳಿವೆಯೇ ? ರಜಪೂತರು ನಿಜವಾಗಿಯೂ ಅಲ್ಲಾವುದ್ದೀನ್ ಖಿಲ್ಜಿಯ ವಿರುದ್ಧ ಗೆದ್ದಿದ್ದಾರೆಂದು ಅವರು ನಂಬದ ಹೊರತು, ಈ ಪ್ರಶ್ನೆಗೆ ಉತ್ತರ - ಇಲ್ಲ.

ರಜಪೂತರನ್ನು  ಹೊಗಳುವುದರಲ್ಲಿ ಭನ್ಸಾಲಿ ಯಶಸ್ವಿಯಾಗಿದ್ದಾರೆಯೇ ? ಒಂದು ವಿಧದಲ್ಲಿ ಹೌದು. ಒಂದರ್ಥದಲ್ಲಿ 'ಪದ್ಮಾವತ್' ಒಂದು ಕಾಲ್ಪನಿಕ ಕಥೆಯೆಂದು ಭನ್ಸಾಲಿ ಹೇಳುತ್ತಾರೆ ಹಾಗೂ ಚಿತ್ರವು ಮುಖ್ಯವಾಗಿ ಮಲಿಕ್ ಮೊಹಮ್ಮದ್ ಜಯಸಿ ಅವರ ಮಹಾಕಾವ್ಯವನ್ನು ಆಧರಿಸಿದ್ದಾಗಿದೆ.

ಚಿತ್ರ ವೀಕ್ಷಿಸಿದ ಮೇಲೆ ಸಂಘಟನೆಗಳ ಪ್ರತಿಭಟನೆಗಳಿಗೆ ಏನಾದರೂ ಅರ್ಥವಿದೆಯೇ ? - ಇಲ್ಲ

ವಾಸ್ತವವಾಗಿ ಕರ್ನಿ ಸೇನಾ ಹೋರಾಡುವ ಉದ್ದೇಶವನ್ನೇ ಚಿತ್ರ ಪ್ರತಿನಿಧಿಸುತ್ತದೆ : ರಜಪೂತ ಧ್ವಜವನ್ನು ಎತ್ತಿ ಹಿಡಿಯುವುದು.

'ಪದ್ಮಾವತ್' ಚಿತ್ರದ ಆರಂಭ ಜಲಾಲುದ್ದೀನ್ ಖಿಲ್ಜಿ( ರಾಝಾ ಮುರಾದ್) ತನ್ನ ಯುವ ಸೋದರಳಿಯನ ವಿಲಕ್ಷಣ ವರ್ತನೆಯನ್ನು ನೋಡುತ್ತಿರುವ ದೃಶ್ಯದೊಂದಿಗೆ ಆರಂಭವಾಗುತ್ತದೆ. ಉಷ್ಟ್ರಪಕ್ಷಿಯ ಕೂದಲು ತರಲು ಹೇಳಿದರೆ ಆತ ಸಂಕೋಲೆಯಲ್ಲಿ ಬಂಧಿತ ಉಷ್ಟ್ರಪಕ್ಷಿಯೊಂದಿಗೆ ಬರುತ್ತಾನೆ, ಹುಚ್ಚನಂತೆ  ಕುಣಿಯುತ್ತಾನೆ ಹಾಗೂ ತನ್ನ ಪತ್ನಿ ಮೆಹರುನ್ನೀಸಾ (ಅದಿತಿ ರಾವ್ ಹೈದಾರಿ) ಹಾಗೂ ಇತರ ಮಹಿಳೆಯರು ಮತ್ತು ನಿಯಮಗಳಿಗೆ ಅಗೌರವ ತೋರುತ್ತಾನೆ. ವಿಷಣ್ಣ ಅರ್ಚಕನೊಬ್ಬ ರಾವಲ್ ರತನ್ ಸಿಂಗ್ (ಶಾಹಿದ್ ಕಪೂರ್) ಪತ್ನಿ ರಾಣಿ ಪದ್ಮಾವತಿಯ ಸೌಂದರ್ಯವನ್ನು ಅತಿಯಾಗಿ ವರ್ಣಿಸಿ ಆಕೆಯನ್ನು ಚಂದಿರ, ಸಾಗರಕ್ಕೆ ಹೋಲಿಸತೊಡಗಿದಾಗ ಖಿಲ್ಜಿಗೆ ಆಕೆಯನ್ನು ನೋಡಬೇಕೆಂಬ ಹುಚ್ಚು ಆಸೆ ಮೂಡುತ್ತದೆ. 163 ನಿಮಿಷ ಅವಧಿಯ ಈ  ಚಿತ್ರದಾದ್ಯಂತ ರಜಪೂತ ಪದ ಹಲವಾರು ಬಾರಿ ಪ್ರಯೋಗವಾಗುತ್ತದೆ.

ವಿಲಾಸಿ ಸೆಟ್ ಹಾಗೂ ಕಂಪ್ಯೂಟರ್ ಜನರೇಟೆಡ್ ಇಮೇಜರಿ ಕಣ್ಮನ ಸೆಳೆಯುತ್ತದೆ. ಚಿತ್ರದುದ್ದಕ್ಕೂ ರಣವೀರ್ ಸಿಂಗ್ ಅವರು ತಮ್ಮ ತೀಕ್ಷ್ಣ ಕಣ್ಣುಗಳು ಹಾಗೂ ತಮ್ಮ ವೈಭವದ ನಡೆ ಹಾಗೂ ನಟನಾ ಕೌಶಲ್ಯದಿಂದ ಗಮನ ಸೆಳೆಯುತ್ತಾರೆ.

ಪದ್ಮಾವತ್ ಸಿನೆಮಾ ಕಲ್ಪನೆಗಳ ನಡುವಿನ ಘರ್ಷಣೆ, ಪ್ರೇಮ, ಯುದ್ಧ ಹಾಗೂ ಇವುಗಳು ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಅರ್ಥಗಳನ್ನು ನೀಡುವ ಬಗೆಯನ್ನು ವಿವರಿಸುತ್ತದೆ.

ತಮ್ಮ ಚಿತ್ರದ ಪ್ರಮುಖ ಪಾತ್ರಗಳ ಸುತ್ತ ಹರಡಿರುವ ಮಿಥ್ಯೆಯೇ ಭನ್ಸಾಲಿಗೆ ದೊಡ್ಡ ಆಸ್ತಿಯಾಗಿದ್ದು ಅವರು ಅದನ್ನು ಆದಷ್ಟು ಸದುಪಯೋಗಪಡಿಸಿದ್ದಾರೆ. ರತನ್ ಸಿಂಗ್ ತನ್ನ  ಸಿದ್ಧಾಂತಗಳ ಬಗ್ಗೆ ಹೇಳಿಕೊಂಡರೆ ಖಲ್ಜಿ ಕೂಡ ತನ್ನ ದುಷ್ಕೃತ್ಯಗಳು ಹಾಗೂ  ಮೋಸದ ಬಗ್ಗೆ ಸಾಕಷ್ಟು ಹೇಳಿಕೊಳ್ಳುತ್ತಾನೆ. ಇದೊಂದು ರಾಜ-ರಾಣಿ-ವೈರಿ ಕಥೆಯಂತೆಯೇ ಇದೆ.

ಇಬ್ಬರು ಪುರುಷರ ನಡುವಿನ ಅಹಂ ಯುದ್ಧದಲ್ಲಿ ದೀಪಿಕಾ ಪಡುಕೋಣೆಯ ಪಾತ್ರವು ಅಷ್ಟೊಂದು ಮಿಂಚುವುದಿಲ್ಲ. ಕೊನೆಗೆ ತನ್ನ ಮಾನ ಹಾಗೂ ಗೌರವವನ್ನು ಉಳಿಸಿಕೊಳ್ಳಲು ಆಕೆ ಆಗಮಿಸುತ್ತಾಳಾದರೂ ಅದಾಗಲೇ ಆಕೆ ಮಿಂಚಬೇಕಾಗಿದ್ದ ಕಾಲ ಮಿಂಚಿರುತ್ತದೆ.

ಸಂಜಯ್ ಲೀಲಾ ಭನ್ಸಾಲಿಯ ಸಂಗೀತ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಸುದೀಪ್ ಚಟರ್ಜಿ ಕ್ಯಾಮರಾ ಹಿಂದೆ ಅದ್ಭುತ ಕೆಲಸ ಮಾಡಿದ್ದಾರೆ. ಒಟ್ಟಾರೆಯಾಗಿ 'ಪದ್ಮಾವತ್' ಒಂದು ಸಂಸ್ಕೃತಿಗಳ ನಡುವಿನ ಸಂಘರ್ಷವಾಗಿದೆ. ಪದ್ಮಾವತಿಯ ಸಂಕಷ್ಟ ಆಕೆ ಪಟ್ಟ ಪಾಡು ಕೊನೆಗೆ ಈ ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಮಾನ ಕಾಪಾಲು ಆಕೆ ಪ್ರಾಣವನ್ನೇ ತ್ಯಾಗ ಮಾಡಬೇಕಾಗಿ ಬಂದ ಅನಿವಾರ್ಯತೆಗಿಂತ ಹೆಚ್ಚಾಗಿ  ಸಂಜಯ್ ಲೀಲಾ ಭನ್ಸಾಲಿಯ ಅಧ್ಭುತ ಕಲ್ಪನಾ ಶಕ್ತಿ ಹಾಗೂ ದೃಷ್ಟಿಕೋನವನ್ನು ಈ ಚಿತ್ರ ಬಿಂಬಿಸುತ್ತದೆ. ಪದ್ಮಾವತಿಯ ಅಂತರಾತ್ಮದೊಳಕ್ಕೆ ಹೊಕ್ಕು ನೋಡುವ ಗಂಭೀರ ಪ್ರಯತ್ನ ಚಿತ್ರದಲ್ಲಿ ನಡೆದಿಲ್ಲ. ಆದರೂ ದೀಪಿಕಾ  ತಮ್ಮ ಪಾತ್ರದಲ್ಲಿ ಪರಿಣಾಮ ಬೀರಿದ್ದಾರೆ. ಇಲ್ಲದೇ ಹೋಗಿದ್ದರೆ ಚಿತ್ರವಿಡೀ ಇಬ್ಬರು ಕತ್ತಿ ಹಿಡಿದ ಪುರುಷರ ಹೋರಾಟಕ್ಕೇ ಸೀಮಿತವಾಗುತ್ತಿತ್ತು.

ಆಂತಿಮವಾಗಿ 'ಪದ್ಮಾವತ್' ಒಂದು ಅದ್ಭುತ ಚಿತ್ರ. ನೋಡುಗರ ಕಣ್ಣುಗಳಿಗೆ ಹಬ್ಬ. ಅಷ್ಟಕ್ಕೂ ಹಲವಾರು ಅಡೆತಡೆಗಳನ್ನು ದಾಟಿ ಅದು ಪ್ರೇಕ್ಷಕರ ಬಳಿ ಬರುತ್ತಿದೆಯಲ್ಲವೇ ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News