ಒಡಿಶಾ: ಅತ್ಯಾಚಾರಕ್ಕೊಳಗಾದ ಬಾಲಕಿ ಆತ್ಮಹತ್ಯೆಗೆ ಶರಣು

Update: 2018-01-24 16:15 GMT

ಭುವನೇಶ್ವರ, ಜ. 24: ಮೂರು ತಿಂಗಳ ಹಿಂದೆ ಅತ್ಯಾಚಾರಕ್ಕೊಳಗಾದ ಬಳಿಕ ಸೋಮವಾರ ಆತ್ಮಹತ್ಯೆಗೆ ಶರಣಾದ 14 ವರ್ಷದ ಬುಡಕಟ್ಟು ಬಾಲಕಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಳಗ್ಗಿನಿಂದ ಸಂಜೆ ವರೆಗೆ ಬಂದ್‌ಗೆ ಪ್ರತ್ಯೇಕವಾಗಿ ಕರೆ ನೀಡಿದ್ದರಿಂದ ಒರಿಸ್ಸಾದಲ್ಲಿ ಬುಧವಾರ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತು. ಅಂಗಡಿ, ಉದ್ಯಮ ಸ್ಥಾಪನೆ, ಮಾರುಕಟ್ಟೆ, ಕಚೇರಿ, ಬ್ಯಾಂಕ್ ಹಾಗೂ ಹಣಕಾಸಿನ ಸಂಸ್ಥೆಗಳು ಮುಚ್ಚಿದ್ದವು. ರಾಜ್ಯಾದ್ಯಂತ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಪ್ರತಿಭಟನಕಾರರು ಭುವನೇಶ್ವರ, ಸಾಂಬಾಲ್‌ಪುರ ಹಾಗೂ ಭದ್ರಾಕ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ರೈಲ್ ರೋಕೊ ನಡೆಸಿದ ಪರಿಣಾಮ ಹಲವು ರೈಲು ಸಂಚಾರ ರದ್ದುಗೊಂಡಿತು. ಇದರಿಂದ ದೊಡ್ಡ ಸಂಖ್ಯೆಯ ರೈಲು ಪ್ರಯಾಣಿಕರು ತೊಂದರೆಗೊಳಗಾದರು. ಶಾಲಾ, ಕಾಲೇಜುಗಳು ಮುಚ್ಚಿದ್ದುವು. ಅಂದು ನಡೆಯಬೇಕಾಗಿದ್ದ ಕೆಲವು ಪರೀಕ್ಷೆಗಳನ್ನು ಮುಂದೂಡಲಾಯಿತು.

ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟು ನಿಟ್ಟಿನ ಭದ್ರತೆ ಏರ್ಪಡಿಸಲಾಗಿತ್ತು. ರಾಜ್ಯಾದ್ಯಂತದ ಪ್ರತಿಭಟನೆ ಸಂದರ್ಭ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ರಾಜ್ಯ ಸೆಕ್ರೇಟರಿಯೇಟ್‌ಗೆ ಪ್ರವೇಶಿಸಲು ಯತ್ನಿಸಿದ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಸೇರಿದ ಸುಮಾರು 200 ಕಾರ್ಯಕರ್ತರನ್ನು ತಡೆಯಲಾಯಿತು. ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭುವನೇಶ್ವರದ ಪ್ರಮುಖ ಜಂಕ್ಷನ್‌ಗಳಲ್ಲಿ ಪ್ರತಿಭಟನೆ ನಡೆಸಿದರು ಹಾಗೂ ಹಲವು ಪ್ರದೇಶಗಳಲ್ಲಿ ರಸ್ತೆ ತಡೆ ನಡೆಸಿದರು.

ಬಂದ್‌ನಿಂದಾಗಿ ಕತಕ್, ಪುರಿ, ಬೆಹ್ರಾಮ್‌ಪುರ, ಸಾಂಬಾಲ್‌ಪುರ, ಬಾಲಸೂರೆ, ಭದ್ರಾಕ್, ರೂರ್ಕೆಲಾ, ಸುಂದರಗಢ, ಝಾರ್ಸುಗುಡ, ಬಾರ್‌ಗಢ, ಜೈಪುರ, ಕೇಂದ್ರಪಾರ ಹಾಗೂ ಕೋರಾಪುಟನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.

ಅತ್ಯಾಚಾರಕ್ಕೆ ಒಳಗಾದ ಬುಡಕಟ್ಟು ಬಾಲಕಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಹಾಗೂ ಅಪರಾಧಿಗಳಿಗೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಬೆಳಗ್ಗಿನಿಂದ ಸಂಜೆ ವರೆಗೆ ರಾಜ್ಯ ವ್ಯಾಪಿ ಬಂದ್‌ಗೆ ಕರೆ ನೀಡಿತ್ತು. ಬಿಜೆಪಿ ಬೆಳಗ್ಗೆ 6 ಗಂಟೆಯಿಂದ 12 ಗಂಟೆಗಳ ರಾಜ್ಯ ವ್ಯಾಪಿ ಬಂದ್‌ಗೆ ಕರೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News