'ಪದ್ಮಾವತ್' ರಕ್ಷಣೆಗೆ ಬಂದ 'ಪ್ಯಾಡ್‌ಮ್ಯಾನ್'

Update: 2018-01-26 12:13 GMT

ಗಣರಾಜ್ಯೋತ್ಸವದ ವೇಳೆಗೆ ಎರಡು ಬಹುನಿರೀಕ್ಷಿತ ಚಿತ್ರಗಳ ನಡುವೆ ನಿರೀಕ್ಷಿಸಲಾಗಿದ್ದ ಬಾಕ್ಸ್‌ಆಫೀಸ್ ಸಮರವೊಂದು ನಡೆಯದೇ ಹೋಯಿತು. ಇದಕ್ಕೆ ಕಾರಣವೂ ಇದೆ. ವಿವಾದಗಳ ಸುಳಿಗೆ ಸಿಲುಕಿರುವ ಪದ್ಮಾವತ್‌ನ ಜೊತೆಗೇ ಅಕ್ಷಯ್ ಅಭಿನಯದ ಪ್ಯಾಡ್‌ಮ್ಯಾನ್ ಕೂಡಾ ಬಿಡುಗಡೆಗೊಳ್ಳುವುದರಲ್ಲಿತ್ತು. ಆದರೆ ಪದ್ಮಾವತ್ ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿಯವರ ವಿನಂತಿಯಂತೆ ಪ್ಯಾಡ್‌ಮ್ಯಾನ್ ಬಿಡುಗಡೆ ಫೆಬ್ರವರಿ 9ಕ್ಕೆ ಮುಂದೂಡಲ್ಪಟ್ಟಿದೆ. ಸ್ವತಃ ಅಕ್ಷಯ್‌ಕುಮಾರ್ ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಈ ವಿಷಯ ತಿಳಿಸಿದ್ದಾರೆ. ಕಳೆದ ಕೆಲವು ಸಮಯದಿಂದ ಹಿಂಸಾತ್ಮಕ ಪ್ರತಿಭಟನೆಗಳನ್ನು ಎದುರಿಸುತ್ತಿರುವ ಪದ್ಮಾವತ್ ಚಿತ್ರಕ್ಕಾಗಿ ನಿರ್ದೇಶಕ ಬನ್ಸಾಲಿ ಹಲವಾರು ಅಡೆತಡೆಗಳನ್ನು ಎದುರಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪದ್ಮಾವತ್ ಚಿತ್ರತಂಡದ ಜೊತೆ ಬಾಲಿವುಡ್ ಏಕತೆಯನ್ನು ಪ್ರದರ್ಶಿಸುವುದು ಅತ್ಯಗತ್ಯವಾಗಿದೆಯೆಂದು ಅಕ್ಷಯ್ ಹೇಳಿಕೊಂಡಿದ್ದಾರೆ.

ಪದ್ಮಾವತ್ ನಿರ್ದೇಶಕ ಬನ್ಸಾಲಿ ಅವರಂತೂ, ಅಕ್ಷಯ್‌ರ ಉದಾರತೆಗೆ ತುಂಬು ಹೃದಯದ ಕೃತಜ್ಞತೆ ಹೇಳಿದ್ದಾರೆ. ಈ ಮೊದಲು ಪದ್ಮಾವತಿ ಎಂದು ಹೆಸರಿಡಲಾಗಿದ್ದ ಪದ್ಮಾವತ್, ವಾಸ್ತವಿಕವಾಗಿ ಕಳೆದ ತಿಂಗಳೇ ಬಿಡುಗಡೆಯಾಗಲಿತ್ತು. ಆದರೆ ಸೆನ್ಸಾರ್ ಮಂಡಳಿಯು ಕೆಲವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು, ಚಿತ್ರಕ್ಕೆ ಸರ್ಟಿಫಿಕೇಟ್ ನೀಡಲು ನಿರಾಕರಿಸಿತ್ತು. ಕಡೆಗೂ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಹಸಿರುನಿಶಾನೆ ತೋರಿಸಿದರೂ, ರಜಪೂತ ಸಂಘಟನೆ ಕರ್ಣಿಸೇನಾದ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯನ್ನು ಜನವರಿ 25ಕ್ಕೆ ನಿಗದಿಪಡಿಸಲಾಗಿತ್ತು. ಹೀಗೆ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಪದ್ಮಾವತ್‌ಗೆ, ಪ್ಯಾಡ್‌ಮ್ಯಾನ್ ತೋರಿದ ಔದಾರ್ಯವು ಬಾಲಿವುಡ್‌ನಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News