ಕಮಲ್ ಚಿತ್ರಕ್ಕೆ 'ವಿಕ್ರಮ್' ನಾಯಕ

Update: 2018-01-26 12:19 GMT

ಒಂದೆಡೆ ‘ವಿಶ್ವರೂಪಂ 2’ ಚಿತ್ರದ ನಿರ್ಮಾಣ ಹಾಗೂ ಇನ್ನೊಂದೆಡೆ ರಾಜಕೀಯ ಇವೆರಡರ ನಡುವೆ ಬ್ಯುಸಿಯಾಗಿರುವ ಕಮಲಹಾಸನ್, ಈ ವಾರ ತನ್ನ ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿಯೊಂದನ್ನು ನೀಡಿದ್ದಾರೆ. ಚಿಯಾಂ ವಿಕ್ರಮ್ ನಾಯಕನಾಗಿರುವ ಚಿತ್ರವೊಂದನ್ನು ತಾನು ನಿರ್ಮಿಸುವುದಾಗಿ ಘೋಷಿಸಿರುವ ಕಮಲ್, ನಾಯಕಿಯಾಗಿ ತನ್ನ ಕಿರಿಯ ಪುತ್ರಿ ಅಕ್ಷರಹಾಸನ್ ನಟಿಸಲಿದ್ದಾಳೆಂಬ ಮಾಹಿತಿಯನ್ನು ಕೂಡಾ ನೀಡಿದ್ದಾರೆ. ಆದಾಗ್ಯೂ ಕಮಲ್ ಈ ಚಿತ್ರದಲ್ಲಿ ನಟಿಸುವುದಿಲ್ಲವಂತೆ.

ಕಮಲ್ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿದ್ದ ರಾಜೇಶ್ ಎಂ. ಸೆಲ್ವ, ಇನ್ನೂ ಹೆಸರಿಡದ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಮೊದಲು ರಾಜೇಶ್ ಸೆಲ್ವ್ವ, ಕಮಲ್ ಅಭಿನಯದ ‘ತೂಂಗವನಂ’ ಚಿತ್ರದಲ್ಲೂ ಕೆಲಸ ಮಾಡಿದ್ದರು.

ಕಳೆದ ವರ್ಷ ತೆರೆಕಂಡ ‘ವಿವೇಗಂ’ ಬಳಿಕ ಅಕ್ಷರ ಅಭಿನಯದ ಎರಡನೆ ತಮಿಳು ಚಿತ್ರ ಇದಾಗಲಿದೆ. ಇನ್ನು ವಿಕ್ರಮ್, ಸದ್ಯಕ್ಕೆ ‘ಸಾಮಿ ಸ್ಕ್ವಾರ್’ ಹಾಗೂ ‘ಧ್ರುವ ನಕ್ಷತ್ರಂ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಕಮಲ್ ನಿರ್ಮಾಣದ ಚಿತ್ರವು ಬೇಸಿಗೆಯ ವೇಳೆಗೆ ಚಿತ್ರೀಕರಣ ಆರಂಭಿಸುವ ನಿರೀಕ್ಷೆಯಿದೆ. ಕಮಲ್ ತನ್ನ ರಾಜ್ ಕಮಲ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಹಿಂದೆಯೂ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದರೂ, ಅವುಗಳ ಪೈಕಿ ‘ಕಡಮೈ ಗಣ್ಣಿಯಂ ಕಟ್ಟುಪಾಡು’, ‘ಮಗಳಿರ್ ಮಟ್ಟುಂ’ ಹಾಗೂ ನಳ ದಮಯಂತಿ ಈ ಮೂರು ಚಿತ್ರಗಳಲ್ಲಿ ಮಾತ್ರ ನಾಯಕ ಪಾತ್ರಗಳಲ್ಲಿ ನಟಿಸಿರಲಿಲ್ಲ. ಆದಾಗ್ಯೂ ‘ಮಗಳಿರ್ ಮಟ್ಟುಂ’ ಹಾಗೂ ‘ನಳದಮಯಂತಿ’ ಚಿತ್ರಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News