ರಾಜೀನಾಮೆ ನೀಡಲು ಸಂಸದ ಪಾಂಡಾಗೆ ಬಿಜೆಡಿ ಸೂಚನೆ
Update: 2018-01-27 19:41 IST
ಭುವನೇಶ್ವರ, ಜ.27: ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷದಿಂದ ಅಮಾನತ್ತಾಗಿರುವ ಸಂಸದ ಬೈಜಯಂತ್ ಪಾಂಡಾಗೆ ಒಡಿಶಾದ ಅಧಿಕಾರಾರೂಢ ಬಿಜೆಡಿ ಸೂಚಿಸಿದೆ.
ಕೇಂದ್ರಪಾರ ಕ್ಷೇತ್ರದಿಂದ ಸಂಸದನಾಗಿ ಆಯ್ಕೆಯಾಗಿರುವ ಪಾಂಡರನ್ನು ಪಕ್ಷವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಜನವರಿ 24ರಂದು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅಲ್ಲದೆ 2014ರ ಲೋಕಸಭಾ ಚುನಾವಣೆ ಸಂದರ್ಭ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ ಆರೋಪವೂ ಪಾಂಡಾರ ಮೇಲಿದೆ.
ತಾನು ಐಎಂಎಫ್‌ಎ ಉದ್ಯೋಗಿಯಾಗಿದ್ದು ಕೋಟ್ಯಾಂತರ ರೂಪಾಯಿ ಸಂಬಳ ಪಡೆಯುತ್ತಿರುವುದನ್ನು ಪಾಂಡ ಮರೆಮಾಚಿದ್ದರು. ಸುಳ್ಳು ಪ್ರಮಾಣಪತ್ರ ನೀಡುವ ಅಗತ್ಯವೇನಿತ್ತು ಎಂದು ಬಿಜೆಡಿ (ಬಿಜು ಜನತಾ ದಳ) ಉಪಾಧ್ಯಕ್ಷ ವೇದ್‌ಪ್ರಕಾಶ್ ಅಗರ್‌ವಾಲ್ ಪ್ರಶ್ನಿಸಿದ್ದಾರೆ. ಹೀಗೆ ಮಾಡುವ ಮೂಲಕ ಅವರು ಸಂಸದನಾಗಿ ಮುಂದುವರಿಯುವ ನೈತಿಕ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ಅಗರ್‌ವಾಲ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.