ಜ.29ರಿಂದ ಬಜೆಟ್ ಅಧಿವೇಶನ

Update: 2018-01-27 14:40 GMT

ಹೊಸದಿಲ್ಲಿ, ಜ.27: ಜನವರಿ 29ರಿಂದ ನಡೆಯಲಿರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ರವಿವಾರ ಎಲ್ಲಾ ಪಕ್ಷಗಳ ಸದನದ ನಾಯಕರ ಸಭೆಯನ್ನು ಕರೆದಿದ್ದಾರೆ.

ಬಜೆಟ್ ಅಧಿವೇಶನದಲ್ಲಿ ತ್ರಿವಳಿ ತಲಾಖ್ ಮಸೂದೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಸರಕಾರ ಹಾಗೂ ಪ್ರತಿಪಕ್ಷಗಳ ನಡುವೆ ತಿಕ್ಕಾಟ ನಡೆಯುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಸದನದ ಕಲಾಪ ಸುಸೂತ್ರವಾಗಿ ನಡೆಯುವಂತಾಗಲು ಸರಕಾರ ಪ್ರಯತ್ನಿಸುತ್ತಿದೆ. ಈ ಮಧ್ಯೆ ರವಿವಾರ ಸರಕಾರ ಕೂಡಾ ಇದೇ ರೀತಿಯ ಸಭೆಯೊಂದನ್ನು ಕರೆದಿದ್ದು ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ವಿಪಕ್ಷಗಳ ಪ್ರಮುಖ ಮುಖಂಡರು ಪ್ರಮುಖ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ನಿರೀಕ್ಷೆಯಿದೆ.

  ಉಭಯ ಸದನಗಳ ಸದಸ್ಯರ ಜಂಟಿ ಸಭೆಯನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡುವುದರೊಂದಿಗೆ ಅಧಿವೇಶನಕ್ಕೆ ಚಾಲನೆ ದೊರಕಲಿದೆ. ಪ್ರಥಮ ಹಂತದ ಅಧಿವೇಶನ ಜನವರಿ 29ರಿಂದ ಫೆ.9ರವರೆಗೆ ನಡೆಯಲಿದ್ದು ಜ.29ರಂದು ಸರಕಾರ ಆರ್ಥಿಕ ಸಮೀಕ್ಷೆಯ ವರದಿಯನ್ನು ಹಾಗೂ ಫೆ.1ರಂದು ಬಜೆಟ್ ಮಂಡಿಸಲಿದೆ.

2019ರ ಸಾರ್ವತ್ರಿಕ ಚುನಾವಣೆಗೂ ಮೊದಲು ಸರಕಾರ ಮಂಡಿಸಲಿರುವ ಅಂತಿಮ ಪೂರ್ಣಕಾಲಿಕ ಬಜೆಟ್ ಇದಾಗಿರುವ ಕಾರಣ ಇದರಲ್ಲಿ ಹಲವು ರಾಜಕೀಯ ಸೂಚ್ಯಾರ್ಥಗಳನ್ನು ಹೊಂದಿರುವ ಘೋಷಣೆ ಒಳಗೊಳ್ಳುವ ನಿರೀಕ್ಷೆಯಿದೆ. ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಮಸೂದೆಗೆ ಅಂಗೀಕಾರದ ಜೊತೆಗೆ, ತ್ರಿವಳಿ ತಲಾಖ್ ಮಸೂದೆಗೆ ಅಂಗೀಕಾರ ಪಡೆಯಲು ಸರಕಾರ ಮತ್ತೆ ಪ್ರಯತ್ನಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News