ಸಾಹಿತ್ಯೋತ್ಸವದಿಂದ ಹಿಂದೆ ಸರಿದ ಸೆನ್ಸಾರ್ ಮಂಡಳಿ ಮುಖ್ಯಸ್ಥ !

Update: 2018-01-27 15:00 GMT

ಜೈಪುರ, ಜ. 27: ವಿವಾದಾತ್ಮಕ ಚಲನಚಿತ್ರ ‘ಪದ್ಮಾವತ್’ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ರಜಪೂತ ಸಂಘಟನೆ ಕರ್ಣಿ ಸೇನೆ ಬೆದರಿಕೆ ಒಡ್ಡಿದ ಬಳಿಕ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮುಖ್ಯಸ್ಥ ಪ್ರಸೂನ್ ಜೋಷಿ ಜೈಪುರ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.

 ಸಾಹಿತ್ಯೋತ್ಸವದಲ್ಲಿ ರವಿವಾರ ನಡೆಯಲಿರುವ ಅಧಿವೇಶನದಲ್ಲಿ ಅವರು ಪಾಲ್ಗೊಳ್ಳಲಿದ್ದರು. ಸಂಜಯ್ ಲೀಲಾ ಭನ್ಸಾಲಿ ಅವರ ‘ಪದ್ಮಾವತ್’ ಚಲಚನಚಿತ್ರಕ್ಕೆ ಜೋಷಿ ಯು/ಎ ಪ್ರಮಾಣ ಪತ್ರ ನೀಡಿದ್ದರು.

‘‘ಜೈಪುರ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಸಾಹಿತ್ಯ ಹಾಗೂ ಕಾವ್ಯ ಪ್ರೇಮಿಗಳೊಂದಿಗೆ ಮಹತ್ ಕ್ಷಣಗಳನ್ನು ಹಂಚಿಕೊಳ್ಳುವುದುನ್ನು ತಪ್ಪಿಸಿಕೊಳ್ಳಲಿದ್ದೇನೆ. ಕಾರ್ಯಕ್ರಮದ ಘನತೆಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ನಾನು ಹೀಗೆ ಮಾಡುತ್ತಿದ್ದೇನೆ. ಅಲ್ಲದೆ, ಸಾಹಿತ್ಯ ಪ್ರೇಮಿಗಳು ಸೃಜನಶೀಲತೆ ಮೇಲೆ ಗಮನ ಕೇಂದ್ರೀಕರಿಸಬೇಕು, ವಿವಾದದ ಮೇಲೆ ಅಲ್ಲ’’ ಎಂದು ಜೋಷಿ ಹೇಳಿದ್ದಾರೆ.

‘ಪದ್ಮಾವತ್’ ಚಲನಚಿತ್ರದ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಿರುವ ಜೋಷಿ, ‘‘ನಾನು ನನ್ನ ಕೆಲಸ ಮಾಡಿದ್ದೇನೆ. ಸೂಕ್ಷ್ಮವಾಗಿ ಹಾಗೂ ಸಮತೋಲನದಿಂದ ಪರಿಶೀಲಿಸಿದ್ದೇನೆ. ಪ್ರಕ್ರಿಯೆ, ಮೌಲ್ಯಯುತವಾದ ಸಂಯೋಜನೆ, ಇದೇ ಸಂದರ್ಭ ಸಮಾಜದ ಕಾಳಜಿ ಹಾಗೂ ಸಿನೆಮಾದ ಕ್ಯಾನ್ವಾಸ್ ಅನ್ನು ಗಮನದಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸಿದ್ದೇನೆ. ಶಾಂತಿಯುತ ಮಾತುಕತೆಗಳಿಗೆ ಅವಕಾಶ ಇರದೇ ಇರುವುದು ಖೇದಕರ. ನಮ್ಮ ಹಾಗೂ ಸಂಸ್ಥೆಗಳ ನಡುವೆ ಪರಸ್ಪರ ನಂಬಿಕೆ ಇರುವುದು ಮುಖ್ಯ. ಹಾಗಿದ್ದಿದ್ದರೆ ಈ ವಿವಾದ ಇಲ್ಲಿವರೆಗೆ ತಲುಪುತ್ತಿರಲಿಲ್ಲ’’ ಎಂದು ಪ್ರಸೂನ್ ಜೋಷಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News