ಕರ್ನಾಟಕ ಚುನಾವಣೆ: ಕೈ ನಾಯಕರಿಗೆ ರಾಹುಲ್ ಹೇಳಿದ ಪ್ರಣಾಳಿಕೆ ತಂತ್ರವೇನು ?
ಹೊಸದಿಲ್ಲಿ, ಜ. 27: ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಸಂದರ್ಭ ಪಕ್ಷ ನಡೆಸಿದ ಕಾರ್ಯಾಚರಣೆ ರೀತಿಯಲ್ಲೇ ‘ಜನ ಪ್ರಣಾಳಿಕೆ’ ರೂಪಿಸುವಂತೆ ಹಾಗೂ ಸಮೂಹಕ್ಕೆ ತಲುಪುವ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ವರ್ಷ ಚುನಾವಣೆ ನಡೆಯಲಿರುವ ಕರ್ನಾಟಕದ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ.
ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ ನೇತೃತ್ವದ ತಂಡ ಈಗಾಗಲೆ ಕಾರ್ಯಾಚರಣೆ ಆರಂಭಿಸಿದೆ ಹಾಗೂ ‘ಎಲ್ಲರನ್ನೂ ಒಳಗೊಳ್ಳುವ ಪ್ರಣಾಳಿಕೆ’ಯನ್ನು ಅದು ರೂಪಿಸಲಿದೆ ಎಂದು ನಿರೀಕ್ಷಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕರ್ನಾಟಕದ ಜನರ ನಿರೀಕ್ಷೆಯನ್ನು ಪ್ರತಿಬಿಂಬಿಸುವ ಪ್ರಣಾಳಿಕೆ ರೂಪಿಸಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಎಲ್ಲ ನಾಯಕರ ಪ್ರತಿಕ್ರಿಯೆಯನ್ನು ಕಾಂಗ್ರೆಸ್ ಕೋರಲಿದೆ ಎಂದು ಎಐಸಿಸಿಯ ಕರ್ನಾಟಕ ಉಸ್ತುವಾರಿ ಕಾರ್ಯದರ್ಶಿ ಮಧು ಗೌಡ ತಿಳಿಸಿದ್ದಾರೆ.
ಇದೇ ರೀತಿ ಕಳೆದ ವರ್ಷ ಗುಜರಾತ್‌ನಲ್ಲಿ ನಡೆದ ಎರಡು ಹಂತದ ಚುನಾವಣೆ ಸಂದರ್ಭ ಟೆಲಿಕಾಂ ಉದ್ಯಮಿ ಸಾಮ್ ಪಿತ್ರೋಡಾ ಗುಜರಾತ್‌ನ ವಡೋದರಾ, ಅಹ್ಮದಾಬಾದ್, ರಾಜ್‌ಕೋಟ್, ಜಾಮ್‌ನಗರ ಹಾಗೂ ಸೂರತ್‌ನ ನಿವಾಸಿಗಳೊಂದಿಗೆ ಸಂವಹನ ನಡೆಸಿದ್ದರು.
ಪರಿಸರ ಸಂರಕ್ಷಣೆ, ಯುವಜನಾಂಗಕ್ಕೆ ಉದ್ಯೋಗ, ಸಣ್ಣ ಹಾಗೂ ಮಧ್ಯಮ ಉದ್ಯಮ, ಆರೋಗ್ಯ, ಶಿಕ್ಷಣ ಕೇಂದ್ರೀಕರಿಸಿ ಪ್ರಣಾಳಿಕೆ ಸಿದ್ದಪಡಿಸಲಾಗಿತ್ತು. ಜನರು ಏನು ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ನೆರವಾಗುವ ಉತ್ತಮ ಕಾರ್ಯಾಚರಣೆ ಇದು.
ನಾಯಕರು ಕಚೇರಿಯಲ್ಲಿ ಕುಳಿತುಕೊಂಡು ಪ್ರಣಾಳಿಕೆ ರೂಪಿಸುವುದಕ್ಕಿಂತ ಇದು ಉತ್ತಮ ವಿಧಾನ ಎಂದು ಪಕ್ಷದ ಇನ್ನೊಬ್ಬ ನಾಯಕರು ಹೇಳಿದ್ದಾರೆ. ಕರ್ನಾಟಕದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಸಾಮಾಜಿಕ-ಆರ್ಥಿಕ ಅಂಶಗಳ ಬಗ್ಗೆ ಗಮನ ಕೇಂದ್ರೀಕರಿಸಬೇಕು ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ಕ್ಷೀರಭಾಗ್ಯ, ಅನ್ನ ಭಾಗ್ಯ, ಕೃಷಿ ಭಾಗ್ಯ, ಇಂದಿರಾ ವಸ್ತ್ರ ಭಾಗ್ಯ, ಇಂದಿರಾ ಕ್ಯಾಂಟೀನ್ ಹಾಗೂ ಇತರ ಯೋಜನೆಗಳು ಜನಪರವಾಗಿದೆ ಎಂದು ಅವರು ಹೇಳಿದ್ದಾರೆ.