ಅಂತಿಮ ಪಂದ್ಯದಲ್ಲಿ ಭಾರತಕ್ಕೆ ರೋಚಕ ಗೆಲುವು

Update: 2018-01-27 18:14 GMT

  ಜೋಹಾನ್ಸ್‌ಬರ್ಗ್, ಜ.27: ಅಂತಿಮ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಭಾರತ 63 ರನ್‌ಗಳ ಭರ್ಜರಿ ಜಯ ಗಳಿಸಿದೆ.

  ವಾಂಡರರ್ಸ್‌ ಸ್ಟೇಡಿಯಂನಲ್ಲಿ ಟೆಸ್ಟ್‌ನ ನಾಲ್ಕನೇ ದಿನವಾದ ಶನಿವಾರ ಗೆಲುವಿಗೆ 241 ರನ್‌ಗಳ ಸವಾಲನ್ನು ಪಡೆದಿದ್ದ ದಕ್ಷಿಣ ಆಫ್ರಿಕ ತಂಡ ವೇಗಿ ಮುಹಮ್ಮದ್ ಶಮಿ (28ಕ್ಕೆ 5) ದಾಳಿಗೆ ಸಿಲುಕಿ ಎರಡನೇ ಇನಿಂಗ್ಸ್‌ನಲ್ಲಿ 73.3 ಓವರ್‌ಗಳಲ್ಲಿ 177ಕ್ಕೆ ಆಲೌಟಾಗಿದೆ. ಆರಂಭಿಕ ದಾಂಡಿಗ ಡೀನ್ ಎಲ್ಗರ್ ಔಟಾಗದೆ 86 ರನ್(240ಎ, 9ಬೌ,1ಸಿ) ಗಳಿಸಿ ಏಕಾಂಗಿ ಹೋರಾಟ ನಡೆಸಿದರೂ ಫಲಕಾರಿಯಾಗಲಿಲ್ಲ.

 ಮಳೆಯಿಂದಾಗಿ ಇಂದಿನ ಆಟ ತಡವಾಗಿ ಆರಂಭಗೊಂಡಿತ್ತು. ದ.ಆಫ್ರಿಕ ಉತ್ತಮ ಆರಂಭ ಪಡೆದಿದ್ದರೂ, ಬಳಿಕ ಭಾರತದ ಬೌಲರ್‌ಗಳ ದಾಳಿಗೆ ಮುಗ್ಗರಿಸಿ ಸೋಲಿನ ದವಡೆಗೆ ಸಿಲುಕಿತು. ಅಮ್ಲ ಔಟಾದ ಬಳಿಕ ದಿಢೀರನೆ ಕುಸಿತಕ್ಕೊಳಗಾದ ಆಫ್ರಿಕ ತಂಡ ಮತ್ತೆ ಚೇತರಿಸಿಕೊಳ್ಳಲಿಲ್ಲ. ಮುಹಮ್ಮದ್ ಶಮಿ (28ಕ್ಕೆ 5), ಇಶಾಂತ್ ಶರ್ಮಾ(31ಕ್ಕೆ 2), ಜಸ್‌ಪ್ರೀತ್ ಬುಮ್ರಾ (57ಕ್ಕೆ 2) ,ಭುವನೇಶ್ವರ ಕುಮಾರ್ (39ಕ್ಕೆ 1) ದಾಳಿಗೆ ಸಿಲುಕಿ ಗೆಲುವಿನ ಹಾದಿಯಲ್ಲಿ ಮುಗ್ಗರಿಸಿದೆ. ವಾಂಡರರ್ಸ್‌ನಲ್ಲಿ ಭಾರತ ಗೆಲುವಿನ ಅಭಿಯಾನ ಮುಂದುವರಿಸಿದೆ. ಮೂರು ಟೆಸ್ಟ್‌ಗಳ ಸರಣಿಯನ್ನು ಆಫ್ರಿಕ ವಶಪಡಿಸಿಕೊಂಡಿದ್ದರೂ 3-0 ಅಂತರದಲ್ಲಿ ಸರಣಿ ಗೆಲ್ಲುವ ಯತ್ನದಲ್ಲಿ ದಕ್ಷಿಣ ಆಫ್ರಿಕ ಎಡವಿದೆ. ಮೂರನೇ ದಿನದಾಟದಂತ್ಯಕ್ಕೆ 8.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 17 ರನ್ ಗಳಿಸಿದ್ದ ದಕ್ಷಿಣ ಆಫ್ರಿಕ ತಂಡದ ಬ್ಯಾಟಿಂಗ್ ಮುಂದುವರಿಸಿದ ಡೀನ್ ಎಲ್ಗರ್ ಮತ್ತು ಹಾಶಿಮ್ ಅಮ್ಲ 2ನೇ ವಿಕೆಟ್‌ಗೆ 119 ರನ್‌ಗಳ ಜೊತೆಯಾಟ ನೀಡಿದರು. ಇಬ್ಬರು ಆಟಗಾರರು ಆಕರ್ಷಕ ಅರ್ಧಶತಕಗಳನ್ನು ಸಿಡಿಸಿದರು.

ಊಟದ ವಿರಾಮದ ವೇಳೆಗೆ ಭಾರತಕ್ಕೆ ಒಂದೂ ವಿಕೆಟನ್ನು ಉಡಾಯಿಸಲು ಸಾಧ್ಯವಾಗಲಿಲ್ಲ. ಆಫ್ರಿಕ 28 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 69 ರನ್ ಗಳಿಸಿತ್ತು. ಅಮ್ಲ 27 ಮತ್ತು ಎಲ್ಗರ್ 29 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.

ಎಲ್ಗರ್ ಮತ್ತು ಅಮ್ಲ ಶತಕದ ಜೊತೆಯಾಟ ನೀಡಿ ದಕ್ಷಿಣ ಆಫ್ರಿಕದ ಬ್ಯಾಟಿಂಗ್‌ನ್ನು ಮುಂದುವರಿಸಿದರು. ಎಲ್ಗರ್ 45ನೇ ಟೆಸ್ಟ್‌ನಲ್ಲಿ 10ನೇ ಅರ್ಧಶತಕ ದಾಖಲಿಸಿದರು. ಅಮ್ಲ 113ನೇ ಟೆಸ್ಟ್‌ನಲ್ಲಿ 38ನೇ ಅರ್ಧಶತಕ ದಾಖಲಿಸಿದರು.

 52.4ನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕದ ಸ್ಕೋರ್ 124ಕ್ಕೆ ತಲುಪಿದ್ದಾಗ ಹಾಶಿಮ್ ಅಮ್ಲ ಅವರು ಇಶಾಂತ್ ಶರ್ಮಾ ಎಸೆತದಲ್ಲಿ ಹಾರ್ದಿಕ್ ಪಾಂಡ್ಯರಿಗೆ ಕ್ಯಾಚ್ ನೀಡಿದರು. 52ರನ್ (140ಎ,5ಬೌ) ಗಳಿಸಿದ್ದ ಅಮ್ಲ ನಿರ್ಗಮನದ ಬಳಿಕ ದಕ್ಷಿಣ ಆಫ್ರಿಕದ ಬ್ಯಾಟಿಂಗ್ ದುರ್ಬಲಗೊಂಡಿತು.

ಸ್ಕೋರ್ 131ತಲುಪಿದಾಗ ಆಫ್ರಿಕ ಇನ್ನೊಂದು ವಿಕೆಟ್ ಕಳೆದುಕೊಂಡಿತು. ಎಬಿಡಿವಿಲಿಯರ್ಸ್‌ ಅವರು 6 ರನ್ ಗಳಿಸಿ ಬುಮ್ರಾ ಎಸೆತದಲ್ಲಿ ರಹಾನೆಗೆ ಕ್ಯಾಚ್ ನೀಡಿದರು. ನಾಯಕ ಎಫ್‌ಡು ಪ್ಲೆಸಿಸ್ (2) ಇಶಾಂತ್ ಶರ್ಮಾಗೆ ಕ್ಯಾಚ್ ನೀಡಿದರು.

ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್(0) ಅವರನ್ನು ಜಸ್‌ಪ್ರೀತ್ ಬುಮ್ರಾ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ವೆರ್ನಾನ್ ಫಿಲ್ಯಾಂಡರ್(10) ಸ್ವಲ್ಪ ಹೊತ್ತು ಹೋರಾಟ ನಡೆಸಿದರು. 67.3ನೇ ಓವರ್‌ನಲ್ಲಿ ಫಿಲ್ಯಾಂಡರ್ ಅವರು ಮುಹಮ್ಮದ್ ಶಮಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಅದೇ ಓವರ್‌ನ ಅಂತಿಮ ಎಸೆತದಲ್ಲಿ ಆಫ್ರಿಕದ ಇನ್ನೊಂದು ವಿಕೆಟ್ ಪತನಗೊಂಡಿತು. ಫೆಹ್ಲುಕ್ವಾಯೊ (0) ಅವರು ಶಮಿಗೆ ವಿಕೆಟ್ ಒಪ್ಪಿಸಿದರು. ದಕ್ಷಿಣ ಆಫ್ರಿಕ ಒತ್ತಡಕ್ಕೆ ಸಿಲುಕಿತು. ರಬಾಡ (0) ಅವರಿಗೆ ಖಾತೆ ತೆರೆಯಲು ಭುವನೇಶ್ವರ ಕುಮಾರ್ ಅವಕಾಶ ನೀಡಲಿಲ್ಲ. ಮೊರ್ನೆ ಮೊರ್ಕೆಲ್(0) ಖಾತೆ ತೆರೆಯದೆ ಶಮಿಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಗಿಡಿ (4)ಅವರು ಶಮಿ ಎಸೆತದಲ್ಲಿ ಬದಲಿ ಆಟಗಾರ ಕಾರ್ತಿಕ್‌ಗೆಕ್ಯಾಚ್ ನೀಡಿ ಪೆವಿಲಿಯನ್‌ಗೆ ವಾಪಸಾಗುವುದರೊಂದಿಗೆ ದಕ್ಷಿಣ ಆಫ್ರಿಕದ ಎರಡನೇ ಇನಿಂಗ್ಸ್ ಕೊನೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News