ಉ.ಪ್ರದೇಶ: ಸಂಬಳ ಪಡೆಯಲು ಪರದಾಡುತ್ತಿರುವ ಯೋಗ ಶಿಕ್ಷಕರು

Update: 2018-01-27 16:40 GMT

ಲಕ್ನೊ, ಜ.27: ಲಕ್ನೊದ ರಮಾಬಾ ಅಂಬೇಡ್ಕರ್ ರ್ಯಾಲಿ ಕ್ರೀಡಾಂಗಣದಲ್ಲಿ 2017ರ ಜೂನ್ 21ರಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವಿಕೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಪಾಲ್ಗೊಂಡಿದ್ದವರಿಗೆ ಯೋಗ ಕಲಿಸಿಕೊಟ್ಟಿದ್ದ ಸುಮಾರು 287 ಯೋಗಶಿಕ್ಷಕರಿಗೆ ಇನ್ನೂ ಸಂಭಾವನೆ ದೊರಕಿಲ್ಲ ಎಂದು ವರದಿಯಾಗಿದೆ.

   ಒಂದು ತಿಂಗಳು ಯೋಗ ಕಲಿಸಿದ್ದಕ್ಕೆ ತಮಗೆ ಸಿಗಬೇಕಿರುವ 13,000 ರೂ. ಸಂಬಳ ಪಡೆಯಲು ಈ ಶಿಕ್ಷಕರು ಸರಕಾರಿ ಕಚೇರಿಗೆ ಅಲೆದಾಡಿ ಸುಸ್ತಾದರೂ ಇನ್ನೂ ಸಂಭಾವನೆ ಕೈಸೇರಿಲ್ಲ. 2018ರ ಜನವರಿ 18ರಂದು ಆಯುಷ್ ಇಲಾಖೆಯ ಕಾರ್ಯದರ್ಶಿಗೆ ಲಕ್ನೊ ವಿವಿಯ ಯೋಗಶಿಕ್ಷಕ ಅಮರ್‌ಜೀತ್ ಯಾದವ್ ಬರೆದಿರುವ ಪತ್ರದಲ್ಲಿ , ಜಿಲ್ಲಾಧಿಕಾರಿಯ ಕಚೇರಿ 2017ರ ಜು.14ರಂದೇ 287 ಯೋಗಶಿಕ್ಷಕರಿಗೆ ಸಂಭಾವನೆ ಬಾಕಿಯಿರುವ ಬಗ್ಗೆ ತಿಳಿಸಿದ್ದರೂ ಇನ್ನೂ ಸಂಭಾವನೆ ಶಿಕ್ಷಕರ ಕೈಸೇರಿಲ್ಲ ಹಾಗೂ ಶಿಕ್ಷಕರಿಗೆ ಪ್ರಮಾಣಪತ್ರ ಕೂಡಾ ದೊರೆತಿಲ್ಲ ಎಂದು ತಿಳಿಸಲಾಗಿದೆ. ಆದರೆ ಆಯುಷ್ ಸಚಿವಾಲಯದಿಂದ ಇನ್ನೂ ಹಣ ಬಾರದಿರುವ ಕಾರಣ ಯೋಗಶಿಕ್ಷಕರಿಗೆ ಸಂಭಾವನೆ ಬಾಕಿಯಿದೆ ಎಂದು ಆಯುಷ್ ಇಲಾಖೆಯ ಕಾರ್ಯದರ್ಶಿ ಯತೇಂದ್ರ ಮೋಹನ್ ಒಪ್ಪಿಕೊಂಡಿದ್ದಾರೆ. ಈ ಕುರಿತು ಸಚಿವಾಲಯಕ್ಕೆ ಪತ್ರ ಬರೆಯಲಾಗಿದ್ದು ಶೀಘ್ರದಲ್ಲೇ ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ. ಐದು ದಿನದೊಳಗೆ ಸಂಭಾವನೆ ಹಣ ಕೈಸೇರಲಿದೆ ಎಂದು ಯೋಗಶಿಕ್ಷಕರಿಗೆ ಭರವಸೆ ನೀಡಿದ್ದೇವೆ. ಸರಕಾರ ಶೀಘ್ರವೇ ಪ್ರಮಾಣಪತ್ರ ಹಾಗೂ ಸಂಭಾವನೆಯನ್ನು ನೀಡುವ ನಿರೀಕ್ಷೆ ಇದೆ ಎಂದು ಯಾದವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News