ಪ್ರತಿಗಾಮಿ ಮೌಲ್ಯಗಳನ್ನು ಎತ್ತಿ ಹಿಡಿಯುವ ‘ಪದ್ಮಾವತ್’

Update: 2018-01-28 09:43 GMT

ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ ಚಿತ್ರ ‘ಪದ್ಮಾವತ್’ ಬಿಡುಗಡೆಗೊಂಡಿದೆ. ‘ಬಾಜಿರಾವ್ ಮಸ್ತಾನಿ’ ಚಿತ್ರದ ಯಶಸ್ಸಿನ ಬಳಿಕ ಅವರು ಕೈಗೆತ್ತಿಕೊಂಡಿದ್ದ ಇನ್ನೊಂದು ಮಹತ್ವದ ಚಿತ್ರ ಇದು. ಅತ್ತ ಪೂರ್ಣ ಇತಿಹಾಸಕ್ಕೂ ಸೇರದ, ಇತ್ತ ಇತಿಹಾಸದಿಂದ ಹೊರಗಿಟ್ಟು ನೋಡಲು ಸಾಧ್ಯವಾಗದ ಕಥಾ ಪಾತ್ರ ‘ಪದ್ಮಿನಿ ಅಥವಾ ಪದ್ಮಾವತಿ’ಯದು. ಸಾಧಾರಣವಾಗಿ ಅಮರ ಚಿತ್ರ ಕತೆಗಳಲ್ಲಿ ಜನಪ್ರಿಯವಾಗಿರುವ ಈ ಪಾತ್ರಕ್ಕೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ. ಅಲ್ಲಾವುದ್ದೀನ್ ಎಂಬ ಸುಲ್ತಾನ ಜೊತೆಗೆ ಕಾಣಿಸಿಕೊಂಡ ಒಂದೇ ಕಾರಣಕ್ಕೆ ಆಕೆ ಭಾರತದ ಇತಿಹಾಸದ ಮಹತ್ವದ ಹೆಸರಾಗಿ ಉಳಿದಿದ್ದಾಳೆ. ಈಕೆಯ ಹೆಸರು ಮೊತ್ತ ಮೊದಲ ಬಾರಿ ಕಾಣಿಸಿಕೊಂಡಿರುವುದು ಜಯಸಿ ಎನ್ನುವ ಸೂಫಿ ಕವಿಯೊಬ್ಬ ಬರೆದ ‘ಪದ್ಮಾವತ್’ ಎನ್ನುವ ಕಾವ್ಯದಲ್ಲಿ. ಆ ಕಾವ್ಯದಲ್ಲಿ ಬರುವ ಅಲ್ಲಾವುದ್ದೀನ್ ಖಿಲ್ಜಿ ಇತಿಹಾಸಕ್ಕೆ ಸೇರಿರುವ ವ್ಯಕ್ತಿಯಾಗಿರುವುದರಿಂದ ಪದ್ಮಿನಿಯನ್ನು ಭಾರತದ ಇತಿಹಾಸದ ಒಂದು ಪಾತ್ರವಾಗಿಯೂ ಗ್ರಹಿಸಲಾಗಿದೆ. ಆಲ್ಲಾವುದ್ದೀನ್ ಆಗಿ ಹೋದ ಸುಮಾರು 300 ವರ್ಷಗಳ ಬಳಿಕ ಜಯಸಿ ಪದ್ಮಾವತ್ ಕಾವ್ಯವನ್ನು ಬರೆದಿದ್ದಾರೆ.

ಒಬ್ಬ ಸೂಫಿ ಕವಿಗೂ ಇತಿಹಾಸಕಾರನಿಗೂ ವ್ಯತ್ಯಾಸವಿದೆಯಾದುದರಿಂದ, ಪದ್ಮಿನಿಯನ್ನು ನೇರವಾಗಿ ಇತಿಹಾಸದ ಜೊತೆಗೆ ತಳಕು ಹಾಕಲು ಸಾಧ್ಯವಿಲ್ಲ. ಮುಖ್ಯವಾಗಿ ಪದ್ಮಾವತ್ ಎನ್ನುವ ಕಾವ್ಯಕ್ಕೆ ಇತಿಹಾಸವಾಗುವ ಯಾವ ಗುಣಲಕ್ಷಣಗಳೂ ಇಲ್ಲ. ಪದ್ಮಾವತ್ ಕಾವ್ಯದಲ್ಲಿ ರಾಜಾ ರತ್ನಸೇನನಿಗೆ ಮಾತನಾಡುವ ಗಿಳಿಯೊಂದು ಪದ್ಮಾವತಿಯ ರೂಪರಾಶಿಯನ್ನು ವರ್ಣಿಸುತ್ತದೆ. ಪದ್ಮಾವತಿ ಸಿಂಹಳ ದೇಶದವಳು. ಆಕೆ ರಜಪೂತ ಕನ್ಯೆ ಎನ್ನುವ ಕುರಿತಂತೆಯೂ ಮಾಹಿತಿಗಳಿಲ್ಲ. ಬಳಿಕ ಆತ ಪದ್ಮಾವತಿಯನ್ನು ಸ್ವಯಂವರ ಒಂದರಲ್ಲಿ ತನ್ನವಳನ್ನಾಗಿಸಿ ಕೊಳ್ಳುತ್ತಾನೆ. ಹಾಗೆಯೇ, ಬ್ರಾಹ್ಮಣ ಮಾಂತ್ರಿಕನ ಪ್ರಸ್ತಾಪವೂ ಕಾವ್ಯದಲ್ಲಾಗುತ್ತದೆ. ಈ ಬ್ರಾಹ್ಮಣನೇ ಮುಂದೆ ಅಲ್ಲಾವುದ್ದೀನ್ ಖಿಲ್ಜಿಗೆ ಪದ್ಮಿನಿಯ ಸೌಂದರ್ಯವನ್ನು ವಿವರಿಸಿ ಅವನಲ್ಲಿ ಆಕೆಯ ಕುರಿತಂತೆ ಮೋಹ ಹುಟ್ಟುವಂತೆ ಮಾಡುತ್ತಾನೆ.

‘ಪದ್ಮಾವತ್’ ಎನ್ನುವುದು ಒಂದು ಫ್ಯಾಂಟಸಿ ಕಾವ್ಯ. ಪದ್ಮಿನಿ ಅಥವಾ ಪದ್ಮಾವತ್ ಪಾತ್ರ ಮುನ್ನೆಲೆಗೆ ಬಂದುದು 19ನೆ ಶತಮಾನದ ಆರಂಭದಲ್ಲಿ. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಹುಟ್ಟಿಕೊಂಡ ವೈದಿಕ ರಾಷ್ಟ್ರೀಯವಾದಿಗಳಿಗೆ ಪದ್ಮಿನಿ ಒಂದು ಆದರ್ಶವಾಗುವುದು, ಆಕೆಯನ್ನು ಪ್ರೇಮಿಸಿದ ‘ಮುಸ್ಲಿಮ್ ಅರಸ’ ಅಲ್ಲಾವುದ್ದೀನ್ ಖಿಲ್ಜಿ ಎನ್ನುವ ಕಾರಣದಿಂದಾಗಿ. ಭಾರತದ ಇತಿಹಾಸವನ್ನು ‘ಕಪ್ಪು-ಬಿಳಿಪು’ ಕೋನದಲ್ಲಿ ನೋಡಿ ಬರೆಯ ತೊಡಗಿದ ಈ ರಾಷ್ಟ್ರೀಯವಾದಿಗಳು, ಪದ್ಮಿನಿಯನ್ನು ಪೂರ್ಣ ಪ್ರಮಾಣದ ಇತಿಹಾಸದ ಪಾತ್ರವಾಗಿಸಿ, ಭಾರತೀಯ ಮಹಿಳೆಯರ ಪಾಲಿನ ಆದರ್ಶವಾಗಿಸಿದರು. ಒಂದು ಪ್ರೇಮ ಕಥಾವಸ್ತುವನ್ನು, ರಾಜಕೀಯ ವಸ್ತುವಾಗಿ ವಿರೂಪಗೊಳಿಸಿದರು. ಜೋಹರ್ ಅಥವಾ ಸತಿ ಸಹಗಮನ ಪದ್ಧತಿ ಹುಟ್ಟಿಕೊಂಡದ್ದು ‘ಮುಸ್ಲಿಮ್ ದಾಳಿಕೋರರಿಂದ ರಕ್ಷಿಸಿಕೊಳ್ಳಲು’ ಎಂಬ ತಮ್ಮ ವಾದಗಳಿಗೂ ಅವರು ರಾಣಿ ಪದ್ಮಿನಿಯ ಕತೆಯನ್ನು ಬಳಸಿಕೊಳ್ಳುತ್ತಾರೆ. ಹೀಗೆ ರಾಜಕೀಯ ಒಳಸುಳಿಗೆ ಸಿಕ್ಕಿಕೊಂಡಿರುವ ‘ಪದ್ಮಾವತ್’ ಕತೆಯನ್ನು ಸಂಜಯ್ ಲೀಲಾ ಬನ್ಸಾಲಿ ಹೇಗೆ ಸ್ವೀಕರಿಸಿದ್ದಾರೆ ಎನ್ನುವ ಕುತೂಹಲ ಬಹುತೇಕ ಪ್ರಾಜ್ಞರಿಗಿತ್ತು. ಇದೇ ಸಂದರ್ಭದಲ್ಲಿ ದೇಶಾದ್ಯಂತ ಕರ್ಣಿಸೇನಾದ ಆಕ್ರೋಶ, ಚಿತ್ರಕ್ಕೆ ಇನ್ನಷ್ಟು ಪ್ರಚಾರವನ್ನು ನೀಡಿತ್ತು. ಹಲವು ವಿವಾದ, ಚರ್ಚೆ, ವಿಚಾರಣೆ, ತನಿಖೆ ಕತ್ತರಿ ಪ್ರಯೋಗಗಳ ಬಳಿಕ ಕೊನೆಗೂ ‘ಪದ್ಮಾವತಿ’ ಪ್ರೇಕ್ಷಕರ ಮುಂದೆ ಬಂದು ನಿಂತಿದ್ದಾಳೆ.

ಆದರೆ ‘ಪದ್ಮಾವತ್’ ಚಿತ್ರ ಪ್ರೇಕ್ಷಕರಲ್ಲಿ ನಿರಾಶೆ ತರುವುದು ಮಾತ್ರವಲ್ಲ, ಈ ಚಿತ್ರ ನಿರ್ದೇಶನ, ನಿರ್ಮಾಣದ ಹಿಂದಿರುವ ಬನ್ಸಾಲಿಯ ಉದ್ದೇಶವನ್ನೇ ಅನುಮಾನಿಸುವಂತೆ ಮಾಡುತ್ತದೆ. 1540ರಲ್ಲಿ ಮಾಲಿಕ್ ಮುಹಮ್ಮದ್ ಜಯಸಿ ಬರೆದಿರುವ ಸೂಫಿ ಕಾವ್ಯವನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆ ಎಂದು ಸಂಜಯ್‌ಲೀಲಾ ಬನ್ಸಾಲಿ ಚಿತ್ರದ ಆರಂಭದಲ್ಲಿ ಘೋಷಿಸುತ್ತಾರಾದರೂ, ಇದು ಸಂಘಪರಿವಾರದ ರಾಷ್ಟ್ರೀಯವಾದದ ಮೂಸೆಯಲ್ಲಿ ಅರಳಿದ ಇತಿಹಾಸವನ್ನು ಇಟ್ಟುಕೊಂಡು ಮಾಡಿದ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಬೇಟೆಗೆ ಹೋದ ಮೇವಾಡದ ರಾಜ ರತ್ನ ಸೇನ(ಶಾಹಿದ್ ಕಪೂರ್), ಬೇಟೆಯಾಡುವ ಸಂದರ್ಭದಲ್ಲಿ ಸಿಂಹಳ ರಾಜಕುಮಾರಿ ಪದ್ಮಾವತಿ(ದೀಪಿಕಾ ಪಡುಕೋಣೆ)ಯನ್ನು ನೋಡಿ ಆಕೆಯನ್ನು ಪ್ರೀತಿಸಿ ತನ್ನ ನಾಡಿಗೆ ಕರೆದುಕೊಂಡು ಬರುತ್ತಾನೆ. ಪದ್ಮಾವತಿಯ ರೂಪರಾಶಿ ಆಸ್ಥಾನದ ಆಚಾರ್ಯ ರಾಘವನನ್ನು ನಿದ್ದೆಗೆಡಿಸುತ್ತದೆ. ಆಕೆಯನ್ನು ಕದ್ದು ನೋಡುವ ಸಂದರ್ಭದಲ್ಲಿ ಸಿಕ್ಕಿ ಬಿದ್ದ ರಾಘವ ರಾಜ್ಯದಿಂದ ಗಡಿಪಾರಾಗುತ್ತಾನೆ. ಇದರಿಂದ ತೀವ್ರ ಅಪಮಾನಗೊಂಡ ಆತ ಅಲ್ಲಾವುದ್ದೀನ್ ಖಿಲ್ಜಿಯ ಆಸ್ಥಾನಕ್ಕೆ ಹೋಗಿ ಅಲ್ಲಿ ಆತನ ಆಪ್ತನಾಗಿ ಅವನಿಗೆ ಪದ್ಮಿನಿಯ ಸೌಂದರ್ಯವನ್ನು ವರ್ಣಿಸುತ್ತಾನೆ. ಇದರಿಂದ ಪ್ರೇರಿತನಾದ ಅಲ್ಲಾವುದ್ದೀನ್ ಖಿಲ್ಜಿಯ ಕಣ್ಣು ಮೇವಾಡದ ಮೇಲೆ ಬೀಳುತ್ತದೆ. ಸೇನೆ ಸಮೇತ ದಾಳಿಗೆ ಮುಂದಾಗುತ್ತಾನೆ. ಆದರೆ ಯುದ್ಧಕ್ಕೆ ಮುಂದಾಗುವ ಮುನ್ನ ‘ಪದ್ಮಾವತಿಯನ್ನು ನೋಡಲು ಅವಕಾಶ ನೀಡಿದರೆ ಯುದ್ಧದಿಂದ ಹಿಂದೆ ಸರಿಯುತ್ತೇನೆ’’ ಎಂಬ ಸಂದೇಶ ನೀಡುತ್ತಾನೆ.

ಅಂತಿಮವಾಗಿ ಪದ್ಮಾವತಿಯ ಸಲಹೆ ಮೇರೆಗೆ ಕನ್ನಡಿಯಲ್ಲಿ ಆಕೆಯನ್ನು ಜಾಣತನದಿಂದ ಅಲ್ಲಾವುದ್ದೀನ್‌ನಿಗೆ ತೋರಿಸಲಾಗುತ್ತದೆ. ಇದರಿಂದ ಕೆರಳುವ ಅಲ್ಲಾವುದ್ದೀನ್ ಪದ್ಮಿನಿಯನ್ನು ತನ್ನವಳನ್ನಾಗಿಸಿಯೇ ತೀರುತ್ತೇನೆ ಎಂದು ನಿರ್ಧರಿಸುತ್ತಾನೆ. ಮೋಸದಿಂದ ರತ್ನಸೇನನನ್ನು ಸೆರೆಹಿಡಿಯುತ್ತಾನೆ. ಆದರೆ ಪದ್ಮಾವತಿಯು ತನ್ನ ಬುದ್ಧಿ ಮತ್ತೆಯನ್ನು ಬಳಸಿಕೊಂಡು ಅವನನ್ನು ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗುತ್ತಾಳೆ. ಹಾಗೆಯೇ ಬ್ರಾಹ್ಮಣ ರಾಘವನನ್ನು ಅಲ್ಲಾವುದ್ದೀನನ ಮೂಲಕವೇ ಕೊಲ್ಲಿಸುತ್ತಾಳೆ. ಅಂತಿಮವಾಗಿ ಅಲ್ಲಾವುದ್ದೀನ್ ಮೇವಾಡದ ಮೇಲೆ ದಾಳಿ ನಡೆಸಿ, ಗೆಲ್ಲುತ್ತಾನೆ. ಆದರೆ ಪದ್ಮಿನಿ ಮತ್ತು ಇಡೀ ಅಂತಃಪುರ ಜೋಹರ್ ಅಥವಾ ಬೆಂಕಿಗೆ ಹಾರುವ ಮೂಲಕ ಅಲ್ಲಾವುದ್ದೀನನ ದುರುದ್ದೇಶವನ್ನು ವಿಫಲಗೊಳಿಸುತ್ತಾರೆ. ಸಂಘಪರಿವಾರ ದೃಷ್ಟಿಕೋನದ ರಾಷ್ಟ್ರೀಯತೆಯ ಮೂಲಕ ಸಿದ್ಧಗೊಂಡ ಭ್ರಾಮಕ, ರೋಚಕ ಕಪ್ಪು ಬಿಳುಪು ಇತಿಹಾಸವನ್ನು ಬನ್ಸಾಲಿ ಇಲ್ಲಿ ನೆಚ್ಚಿಕೊಂಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ.

ಪದ್ನಿನಿಯ ಜೌಹರ್ ಇಲ್ಲಿ ಆದರ್ಶವಾಗಿರುವುದರಿಂದ, ಅದನ್ನು ಎತ್ತಿ ಹಿಡಿಯುವುದಕ್ಕಾಗಿ ಅಲ್ಲಾವುದ್ದೀನ್ ಖಿಲ್ಜಿಯ ವ್ಯಕ್ತಿತ್ವವನ್ನು ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಕುರೂಪಗೊಳಿಸಲಾಗಿದೆ. ಆತನನ್ನು ಒಬ್ಬ ‘ಸೈಕೋ’ ಎಂಬಂತೆ ಬಿಂಬಿಸಲಾಗಿದೆ. ಈ ಪಾತ್ರವನ್ನು ರಣ್‌ವೀರ್ ಸಿಂಗ್ ತನ್ಮಯವಾಗಿ ಅಭಿನಯಿಸಿದ್ದಾರೆ. ಇಡೀ ಚಿತ್ರ ನಿಂತಿರುವುದೇ ಅಲ್ಲಾವುದ್ದೀನ್ ಖಿಲ್ಜಿಯ ವಿಕ್ಷಿಪ್ತ ವ್ಯಕ್ತಿತ್ವದ ಮೂಲಕ. ಅದರ ಮುಂದೆ ಪ್ರೀತಿ, ಪದ್ಮಿನಿಯ ತ್ಯಾಗ, ರಜಪೂತ ರತ್ನಸೇನನ ಶೌರ್ಯ ಎಲ್ಲ ಪೇಲವವಾಗಿದೆ. ಭಾರತದ ಸದ್ಯದ ಸಂದರ್ಭದಲ್ಲಿ ಬಲಿಷ್ಠ ಜಾತಿಗಳು ರಾಜಕೀಯವನ್ನು ನಿಯಂತ್ರಿಸಲು ಯಶಸ್ವಿಯಾಗುತ್ತಿರುವ ಸಂದರ್ಭದಲ್ಲಿ, ಸಂಘಪರಿವಾರದ ಹುಸಿ ರಾಷ್ಟ್ರೀಯತೆಗೆ ಇತಿಹಾಸ ದುರ್ಬಳಕೆಯಾಗುತ್ತಿರುವ ಹೊತ್ತಿನಲ್ಲಿ,ಬನ್ಸಾಲಿ ಈ ಚಿತ್ರವನ್ನು ಮಾಡಿದ್ದಾರೆ. ರಜಪೂತ ಸಮುದಾಯದ ವೈಭವೀಕರಣವೇ ಇಡೀ ಚಿತ್ರದ ಪ್ರಮುಖ ಉದ್ದೇಶವಾಗಿದೆ.

ಮೇಲ್ಜಾತಿಯ ರಾಜಪ್ರಭುತ್ವದ ಕಾಲಘಟ್ಟವನ್ನು ಚಿತ್ರ ಹಾಡಿ ಹೊಗಳುತ್ತದೆ. ಅದುವೇ ಭಾರತದ ಆದರ್ಶವೆಂಬಂತೆ ಚಿತ್ರ ಬಿಂಬಿಸುತ್ತದೆ. ರಜಪೂತರ ವೈಭವೀಕರಣಕ್ಕೆ ಪೂರಕವಾಗಿ ಯೋಧ ಅಲ್ಲಾವುದ್ದೀನನ ಶೌರ್ಯ, ಹೋರಾಟ ಎಲ್ಲವನ್ನು ‘ಕ್ರೌರ್ಯ’ವಾಗಿ ನೋಡಲಾಗಿದೆ. ಒಬ್ಬ ಕ್ರೂರ ಸೈಕೋಪಾತ್‌ಗೆ ಏನೆಲ್ಲ ಲಕ್ಷಣಗಳಿರಬೇಕೋ ಅದನ್ನೆಲ್ಲ ಊಹಿಸಿ ಬನ್ಸಾಲಿ ಅವರು ಅಲ್ಲಾವುದ್ದೀನ್ ಖಿಲ್ಜಿಯ ಮೇಲೆ ಯಾವ ಅಂಜಿಕೆಯೂ ಇಲ್ಲದೆ ಆರೋಪಿಸುತ್ತಾ ಹೋಗುತ್ತಾರೆ. ಇತಿಹಾಸದ ಸೂಕ್ಷ ್ಮ ಗಳನ್ನು ಗುರುತಿಸುವ ಯತ್ನವನ್ನೇ ಅವರು ಮಾಡುವುದಿಲ್ಲ. ಗುಜರಾತ್ ಸೇರಿದಂತೆ ಭಾರತದ ಬಹು ಪ್ರದೇಶಗಳನ್ನು ಗೆದ್ದ, ಮಂಗೋಲಿಯನ್ನರ ಲೂಟಿಯಿಂದ ಭಾರತವನ್ನು ರಕ್ಷಿಸಿದ ಅಲ್ಲಾವುದ್ದೀನ್ ಖಿಲ್ಜಿ ಯನ್ನು ಬನ್ಸಾಲಿ ಎಲ್ಲೂ ಒಬ್ಬ ಯೋಧನಾಗಿ ನೋಡುವುದೇ ಇಲ್ಲ. ಬಹುಶಃ ರಜಪೂತರ ಸತ್ಯಸಂಧತೆ, ಶೌರ್ಯ, ನೆಲದ ಮೇಲಿನ ಅವರ ಪ್ರೇಮ, ಹೆಣ್ಣಿನ ಕುರಿತಂತೆ ಅವರಿಗಿರುವ ಅಗಾಧ ಗೌರವ ಇವೆಲ್ಲವನ್ನು ಎತ್ತಿ ಹಿಡಿಯಲು ಅಲ್ಲಾವುದ್ದೀನ್ ಖಿಲ್ಜಿಯ ವ್ಯಕ್ತಿತ್ವವನ್ನು ಭ್ರಷ್ಟಗೊಳಿಸುವುದು ಬನ್ಸಾಲಿಗೆ ಅತ್ಯಗತ್ಯವಾಗಿತ್ತು ಎಂದು ಕಾಣುತ್ತದೆ. ಎಲ್ಲಿಯವರೆಗೆ ಎಂದರೆ, ಕ್ಲೈಮಾಕ್ಸ್‌ನಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರತ್ನಸೇನರ ನಡುವೆ ದ್ವಂದ್ವಯುದ್ಧ ನಡೆಯುತ್ತದೆ. ಇಲ್ಲೂ ರತ್ನಸೇನನು ಅಲ್ಲಾವುದ್ದೀನನ ಕೈಯಲ್ಲಿ ಸೋತರೆ ಎಲ್ಲಿ ರಜಪೂತರು ಮೈಮೇಲೆ ಬೀಳುತ್ತಾರೋ ಎಂಬ ಭಯದಿಂದ ಮಲ್ಲಿಕಾಫರ್ ಹಿಂದುಗಡೆಯಿಂದ ಬಾಣ ಬಿಟ್ಟು ಕೊಲ್ಲುವ ಮೂಲಕ ಬನ್ಸಾಲಿ ಯುದ್ಧಕ್ಕೆ ಅಂತ್ಯ ಹಾಡಿದ್ದಾರೆ. ಮಂಗೋಲಿಯನ್ನರಂತಹ ಪ್ರಬಲರನ್ನು ಸೋಲಿಸಿದ ಅಲ್ಲಾವುದ್ದೀನ್ ಖಿಲ್ಜಿಗೆ ಮೇವಾಡದಂತಹ ಪುಟ್ಟ ರಾಜ್ಯವನ್ನು ಸೋಲಿಸಲು ಮೋಸದಿಂದ ಮಾತ್ರ ಸಾಧ್ಯವಾಯಿತು ಎನ್ನುವುದನ್ನು ಹೇಳುವ ಮೂಲಕ, ರಜಪೂತರ ಸೋಲನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಾರೆ.

 ಈ ಚಿತ್ರದ ಇನ್ನೊಂದು ಅಪಾಯವೆಂದರೆ, ಜೋಹರ್ ಅಥವಾ ಸತಿಸಹಗಮನದಂತಹ ವ್ಯವಸ್ಥೆಯನ್ನು ಆದರ್ಶಗೊಳಿಸಿರುವುದು. ಬೆಂಕಿಗೆ ಹಾರುವ ಪದ್ಮಿನಿಯನ್ನು ಆಧುನಿಕ ಭಾರತದ ಮಹಿಳೆಯರ ಮೇಲೆ ಮತ್ತೆ ಹೇರಲು ಹೊರಟಿರುವುದು. ಹಿಂದುತ್ವ ರಾಷ್ಟ್ರೀಯತೆಯ ಅಜೆಂಡಾಗಳು ಬನ್ಸಾಲಿಯ ಕೈಯಲ್ಲಿ ಈ ಚಿತ್ರಕಥೆಯನ್ನು ಬರೆಸಿವೆ ಎಂದು ಅನುಮಾನಪಡುವಂತಿದೆ ಇಡೀ ಚಿತ್ರದ ಸಂದೇಶ. ಎಲ್ಲೂ ಹೆಣ್ಣಾಗಿ ಪದ್ಮಿನಿಯೊಳಗಿನ ಒಳಸಂಘರ್ಷಗಳನ್ನು ಎತ್ತಿ ಹಿಡಿಯಲು ಚಿತ್ರಕಥೆ ಸಂಪೂರ್ಣ ವಿಫಲ ವಾಗಿದೆ. ಒಂದು ರೀತಿಯಲ್ಲಿ ಆತ್ಮವೇ ಇಲ್ಲದ ಗೊಂಬೆಯಂತಿದೆ ಪದ್ಮಿನಿ ಪಾತ್ರ. ಜೊತೆಗೆ ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ಬನ್ಸಾಲಿಯ ಜಾದೂ ಕೂಡ ಇಲ್ಲಿಲ್ಲ. ಈ ಹಿಂದೆ ಬನ್ಸಾಲಿ ‘ಬಾಜಿರಾವ್ ಮಸ್ತಾನಿ’ ಚಿತ್ರವನ್ನು ಮಾಡಿದ್ದರು. ಅಲ್ಲಿ ಮಸ್ತಾನಿ-ಬಾಜಿರಾವ್ ಪ್ರೇಮಕತೆಯನ್ನು ಹೇಳುವ ಮೂಲಕ ಪೇಶ್ವೆಗಳನ್ನು ವೈಭವೀಕರಿಸುವ ಬನ್ಸಾಲಿ, ಅವರು ಪಶ್ಚಿಮಬಂಗಾಳ ಸಹಿತ ದೇಶಾದ್ಯಂತ ಮಾಡಿದ ಲೂಟಿ, ಅಮಾಯಕ ಹಿಂದೂಗಳ ಬರ್ಬರ ಹತ್ಯೆಯನ್ನು ಉದ್ದೇಶಪೂರ್ವಕವಾಗಿ ಮರೆಮಾಚುತ್ತಾರೆ. ಈ ಹಿನ್ನೆಲೆಯಲ್ಲಿ ಪದ್ಮಾವತ್ ಚಿತ್ರದಲ್ಲೂ ಇತಿಹಾಸ ಕುರಿತ ಅವರ ಅಸೂಕ್ಷ್ಮತೆ ಬಯಲಾಗಿದೆ. ಚಿತ್ರ ಮುಗಿದಾಗ ನಮ್ಮನ್ನು ಕಾಡುವ ಮುಖ್ಯ ಪ್ರಶ್ನೆ ‘ಕರ್ಣಿಸೇನೆ ಅಥವಾ ರಜಪೂತ ಮುಖಂಡರು ಈ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಯಾಕೆ?’. ಈ ಪ್ರತಿಭಟನೆಯ ಚಿತ್ರಕಥೆಯನ್ನು ನಿಜಕ್ಕೂ ಬರೆದಿರುವುದು ಯಾರು? ಈ ಪ್ರತಿಭಟನೆಯ ಕತೆ, ಚಿತ್ರಕತೆಯನ್ನೂ ಬನ್ಸಾಲಿಯ ಮೂಲಕವೇ ಸಂಘಪರಿವಾರ ಯಾಕೆ ಬರೆಸಿರಬಾರದು?

Writer - ಬಿ.ಎಂ.ಬಶೀರ್

contributor

Editor - ಬಿ.ಎಂ.ಬಶೀರ್

contributor

Similar News