ಕನಕ: ಮನಕೆ ನಾಟದೇ ಹೋಗುವ ಚಿತ್ರ

Update: 2018-01-27 18:54 GMT

ಆರ್. ಚಂದ್ರು ನಿರ್ದೇಶನದ ಚಿತ್ರ ಎಂದಮೇಲೆ ಅದರಲ್ಲೊಂದು ವಿಶೇಷ ನಿರೀಕ್ಷೆ ಮೂಡುವುದು ಸಾಮಾನ್ಯ. ಆದರೆ ಆ ನಿರೀಕ್ಷೆಗೆ ತಕ್ಕಂತೆ ಕನಕ ಮೂಡಿ ಬಂದಿದೆಯಾ ಎನ್ನುವ ಸಂದೇಹ ಕೊನೆಯವರೆಗೂ ಉಳಿಯುತ್ತದೆ.

ಹಳ್ಳಿಯ ಹುಡುಗ ಕನಕ ಹುಟ್ಟಿದ್ದು ಅಮಾವಾಸ್ಯೆಯಂದು. ಅದೇ ಕಾರಣದಿಂದಾಗಿ ಆತನೇ ತನ್ನ ಕುಟುಂಬಕ್ಕೆ ಅನಿಷ್ಟ ಎಂದುಕೊಳ್ಳುವ ತಂದೆ. ಕೊನೆಗೆ ಮನೆಯನ್ನೇ ತೊರೆದು ಓಡಿ ಹೋಗುವ ಹುಡುಗ. ನಗರದಲ್ಲಿ ರಿಕ್ಷಾಚಾಲಕನಾಗಿ ಒಳ್ಳೆಯ ಹೆಸರು ಪಡೆಯುತ್ತಿರುವಾಗಲೇ ಪರಿಚಯವಾಗುವ ಕನಸು ಎಂಬ ಯುವತಿ.ಆಕೆಯ ಆತ್ಮಹತ್ಯೆಯ ಬಳಿಕ ಹಳ್ಳಿಗೆ ಮರಳುವ ಕನಕ ತಂದೆಯ ಬಳಿಗೆ ಹೋಗುತ್ತಾನೆ. ತಂದೆ ಆತನನ್ನು ಹೇಗೆ ಸ್ವೀಕರಿಸುತ್ತಾನೆ, ಮುಂದಿನ ಬೆಳವಣಿಗೆಯೇನು ಎನ್ನುವುದೇ ಚಿತ್ರದ ಕತೆ.

ಎಲ್ಲರ ಬದುಕಲ್ಲಿಯೂ ಒಂದೊಂದು ಕತೆಗಳಿರುತ್ತವೆ. ಆದರೆ ಎಲ್ಲವೂ ಸಿನೆಮಾ ಆಗುವುದು ಅಸಾಧ್ಯ. ಸಿನೆಮಾ ಆಗಲು ಯೋಗ್ಯವಲ್ಲದ ಒಂದು ಘಟನೆಯನ್ನು ತೆಗೆದುಕೊಂಡು ಚಿತ್ರ ಮಾಡಿರುವ ನಿರ್ದೇಶಕರಿಗೆ ಏನು ಹೇಳುವುದೋ ಗೊತ್ತಿಲ್ಲ. ಯಾಕೆಂದರೆ ಕನಕ ಅಮಾವಾಸ್ಯೆಯಂದು ಹುಟ್ಟಿದ ಅನಿಷ್ಟ ಎಂಬ ನಂಬಿಕೆ ಇರಿಸಿಕೊಂಡ ತಂದೆಗೆ ಮಗನ ಮೇಲೆ ಕರುಣೆ ಮೂಡುವುದು, ಆತ ತನ್ನ ಪ್ರಾಣ ರಕ್ಷಣೆ ಮಾಡಿದಾಗಲೇ. ಡಾ. ರಾಜ್ ಅಭಿಮಾನಿ ಎಂದು ತೋರಿಸಿಕೊಳ್ಳುವ ಕನಕ ಉಚಿತ ವಾಹನ ಸೇವೆ ಒದಗಿಸುವ ಹುಚ್ಚು ಬಿಟ್ಟರೆ, ಅಣ್ಣಾವ್ರ ಕಟೌಟ್ ಗೆ ಹಾಲೆರೆಯುವುದಷ್ಟೇ ಮಾಡುವ ಘನಂದಾರಿ ಕೆಲಸ! ಪ್ರೀತಿಸಿದ ಹುಡುಗಿ ಕನಸು ಅನಗತ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಗಂಡು ದಿಕ್ಕಿಲ್ಲದ ಹುಡುಗಿ ಬದುಕುವುದು ಕಷ್ಟ ಎಂದು ವಿಧವೆ ನಾಯಕಿ ಹೇಳುತ್ತಾಳೆ.! ಹೀಗೆ ಎಲ್ಲವೂ ಘಟನೆಗಳೇ ಹೊರತು, ಯಾವುದೂ ಒಂದು ಸಂದೇಶವಾಗಲೀ ಆವೇಶವಾಗಲೀ ತುಂಬುವುದಿಲ್ಲ.

ಕನಕನಾಗಿ ದುನಿಯಾ ವಿಜಯ್ ಮತ್ತೊಂದು ಕಮರ್ಷಿಯಲ್ ಚಿತ್ರದ ನಾಯಕ ಎನ್ನುವುದಕ್ಕಷ್ಟೇ ಸೀಮಿತ. ಕನಸು ಪಾತ್ರದಲ್ಲಿ ಮಾನ್ವಿತಾ ಕಿರಿಕ್ ಪಾರ್ಟಿಯ ರಶ್ಮಿಕಾ ಗೆಟಪ್ಪಲ್ಲಿ ಬಂದು ಅದೇ ಪಾತ್ರದಂತೆ ಮಧ್ಯಂತರದ ಹೊತ್ತಿಗೆ ಮಾಯವಾಗ್ತಾರೆ. ಖಳ ಓಬಳೇಶನಾಗಿ ರವಿಶಂಕರ್ ತಮ್ಮ ಎಂದಿನ ಗತ್ತಿನಿಂದ ಅಬ್ಬರಿಸಿದ್ದಾರೆ.ಕನಕನ ತಮ್ಮ ಲಕ್ಷ್ಮೀಶ ಮತ್ತು ಓಬಳೇಶನ ಮಗನ ಪಾತ್ರ ನಿರ್ವಹಿಸಿದಂಥ ದರ್ಶನ್ ಮತ್ತು ನವಯುಗ ಚಂದ್ರು ಭರವಸೆಯ ಕಲಾವಿದರಾಗಿ ಗುರುತಿಸಲ್ಪಡುತ್ತಾರೆ. ಮಧ್ಯಂತರದ ಬಳಿಕ ಆಟೊಗ್ರಾಫ್ ಸಿನೆಮಾದ ಶೈಲಿಯಲ್ಲಿ ಎಂಟ್ರಿಯಾಗುವ ವಿಧವೆ ಹರಿಪ್ರಿಯಾ ಪಾತ್ರಕ್ಕಿಂತಲೂ ಕನಕನ ನಾದಿನಿಯಾಗಿ ನಟಿಸಿದ ರೂಪಿಕಾ ಗಮನ ಸೆಳೆಯುತ್ತಾರೆ. ಸಂಭಾಷಣೆಗಳು ಅದರಲ್ಲಿಯೂ ರೂಪಿಕಾಗೆ ನೀಡಿರುವ ಡೈಲಾಗ್‌ಗಳು ಆಕರ್ಷಕವಾಗಿವೆ. ಕುಮಾರಪ್ಪ ನಾಯಕನ ಪಾತ್ರ ವಹಿಸಿದ ಕೆ. ನಂಜುಂಡಿ ಸೇರಿದಂತೆ ರಂಗಾಯಣ ರಘು,ಉಗ್ರಂ ಮಂಜು ಮೊದಲಾದವರು ಚಿತ್ರದಲ್ಲಿದ್ದಾರೆ. ಬುಲೆಟ್ ಪ್ರಕಾಶ್, ಕುರಿ ಪ್ರತಾಪ್ ಮೊದಲಾದ ಹಾಸ್ಯ ಚಿತ್ರದ ಹೈಲೈಟ್. ನವೀನ್ ಸಜ್ಜು ಸಂಗೀತದಲ್ಲಿ ಒಂದೆರಡು ಹಾಡುಗಳು ಮನ ಸೆಳೆಯುವಂತಿವೆ.

‘ಯಾರ ಬದುಕಿನಲಿ’ ಹಾಡಲ್ಲಿ ರಾಗಕ್ಕನುಗುಣವಾಗಿ ಹಾಡನ್ನು ಹೊಂದಿಸುವ ಪ್ರಯತ್ನದಲ್ಲಿ ಅರ್ಥಕ್ಕೆ ಗಮನ ನೀಡದಿರುವುದು ದುರಂತ. ಮೊದಲ ಬಾರಿ ಹಾಡನ್ನು ಕೇಳುತ್ತಿದ್ದರೆ ತಮಿಳಿನ ಅಡಡ ಮಳಡಾ ಗೀತೆ ನೆನಪಾಗುತ್ತದೆ! ಚಿತ್ರದಂತೆ ಛಾಯಾಗ್ರಹಣವೂ ಕಾಡುವುದಿಲ್ಲ.ಒಟ್ಟಿನಲ್ಲಿ ನಿರ್ದೇಶಕ ಚಂದ್ರು ಅಭಿಮಾನಿಗಳಿಗಿಂತ ನಾಯಕ ವಿಜಯ್ ಅಭಿಮಾನಿಗಳಿಗೆ ಪ್ರಿಯವಾಗಬಹುದಾದ ಚಿತ್ರ ಇದು.

ತಾರಾಗಣ: ದುನಿಯಾ ವಿಜಯ್, ಮಾನ್ವಿತಾ
ನಿರ್ಮಾಣ, ನಿರ್ದೇಶನ: ಆರ್. ಚಂದ್ರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News