×
Ad

ಅತ್ಯಾಚಾರಕ್ಕೊಳಗಾದ, ಪತಿ ನಿಧನವಾದ ನಂತರವೂ ಮಹಿಳೆಗೆ ಜೀವಿಸುವ ಹಕ್ಕಿದೆ ಸರ್

Update: 2018-01-28 16:14 IST

ಹೊಸದಿಲ್ಲಿ, ಜ.28: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನಟಿ ಸ್ವರಾ ಭಾಸ್ಕರ್ ಚಿತ್ರವು ಹೆಣ್ಣನ್ನು ಭೋಗದ ವಸ್ತುವಾಗಿ ಮಾತ್ರ ಬಿಂಬಿಸಿದೆ ಎಂದು ಟೀಕಿಸಿದ್ದಾರೆ.

ವಿಧವೆ, ಅತ್ಯಾಚಾರ ಸಂತ್ರಸ್ತೆ, ಯುವತಿ, ಗರ್ಭಿಣಿ ಹೀಗೆ ಮಹಿಳೆಯ ಬದುಕುವ ಹಕ್ಕಿನ ಬಗ್ಗೆ ಚಿತ್ರವು ಪ್ರಶ್ನೆಯೆತ್ತಿದೆ ಎಂದವರು ಅಭಿಪ್ರಾಯಿಸಿದ್ದಾರೆ. ಈ ಬಗ್ಗೆ ಪತ್ರವೊಂದನ್ನು ಬರೆದಿರುವ ಅವರು, ಸತಿ ಹಾಗು ಜೌಹರ್ ಪದ್ಧತಿಯ ವೈಭವೀಕರಣವನ್ನು ಟೀಕಿಸಿದ್ದಾರೆ. ಭಾರೀ ವಿರೋಧಗಳನ್ನು ಎದುರಿಸಿದ ನಂತರ ಕೊನೆಗೂ ಚಿತ್ರ ಬಿಡುಗಡೆ ಮಾಡುವಲ್ಲಿ ಸಫಲವಾದದ್ದಕ್ಕೆ ನಿರ್ದೇಶಕ ಭನ್ಸಾಲಿಯವರನ್ನು ಸ್ವರಾ ಭಾಸ್ಕರ್ ಅಭಿನಂದಿಸಿದ್ದಾರೆ.

“ಈ ಚಿತ್ರವನ್ನು ವೀಕ್ಷಿಸಿದ ನಂತರ ನನಗೆ ಮಹಿಳೆ ಭೋಗದ ವಸ್ತು ಮಾತ್ರ ಎಂಬುದಾಗಿ ಭಾಸವಾಯಿತು. ಮಹಿಳಾ ಹೋರಾಟಗಳ ಮತದಾನದ ಹಕ್ಕು, ಆಸ್ತಿಯ ಹಕ್ಕು, ಶಿಕ್ಷಣದ ಹಕ್ಕು ಸೇರಿದಂತೆ ಎಲ್ಲಾ ಸಾಧನೆಗಳು ಅರ್ಥಹೀನ ಎಂಬಂತೆ ಅನಿಸಿತು. ನಿಮ್ಮ ಚಿತ್ರ ಕಗ್ಗತ್ತಲ ಯುಗದ ‘ಮಹಿಳೆಯರಿಗೆ ಬದುಕಲು ಹಕ್ಕಿದೆಯೇ’ ಎನ್ನುವ ಪ್ರಶ್ನೆಗೆ ಕರೆದೊಯ್ದಿತು. ಅತ್ಯಾಚಾರಕ್ಕೊಳಗಾದ ನಂತರ, ಪತಿ ನಿಧನವಾದ ನಂತರವೂ ಮಹಿಳೆ ಜೀವಿಸುವ ಹಕ್ಕಿದೆ ಸರ್” ಎಂದು ಸ್ವರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಕ್ರಮಣಕಾರರು ರಾಜ್ಯಕ್ಕೆ ನುಗ್ಗಿ ಪುರುಷರನ್ನು ಹತ್ಯೆಗೈದ ನಂತರ ದೀಪಿಕಾ ಪಡುಕೋಣೆ (ರಾಣಿ ಪದ್ಮಾವತಿ) ಮಹಿಳೆಯರ ಜೊತೆ ಸೇರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಸಂಬಂಧಿಸಿ ಸ್ವರಾ ಈ ಆಕ್ರೋಶವನ್ನು ಹೊರಗೆಡವಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News