ಕಿತ್ತಳೆ ಬಣ್ಣದ ಪಾಸ್‌ಪೋರ್ಟ್ ರದ್ದು: ಕೇಂದ್ರ ಸರಕಾರ ನಿರ್ಧಾರ

Update: 2018-01-30 15:38 GMT

ಹೊಸದಿಲ್ಲಿ, ಜ. 31: ಹತ್ತನೇ ತರಗತಿ ಉತ್ತೀರ್ಣರಾಗದವರಿಗೆ ಕಿತ್ತಳೆ ಬಣ್ಣದ ಪಾಸ್‌ಪೋರ್ಟ್ ನೀಡುವ ನಿರ್ಧಾರವನ್ನು ಕೇಂದ್ರ ಸರಕಾರ ಮಂಗಳವಾರ ಹಿಂದೆಗೆದುಕೊಂಡಿದೆ.

ಇದರಿಂದ ಪಾಸ್‌ಪೋರ್ಟ್ ಕೊನೆಯ ಪುಟ ಹೊಂದಿರುವುದು ಮುಂದುವರಿಯಲಿದೆ ಹಾಗೂ ಇದನ್ನು ವಿಳಾಸಕ್ಕೆ ಸಾಕ್ಷಿಯಾಗಿ ಬಳಸಬಹುದು.

ಪಾಸ್‌ಪೋರ್ಟ್‌ನ ಕೊನೆಯ ಪುಟವನ್ನು ಪ್ರಸಕ್ತ ರೀತಿಯಲ್ಲೇ ಮುಂದುವರಿಸಲು ಹಾಗೂ ಇಮಿಗ್ರೇಶನ್ ಪಾಸ್‌ಪೋರ್ಟ್ ಹೊಂದಿರುವವರಿಗೆ ಕಿತ್ತಳೆ ಬಣ್ಣದ ರಕ್ಷಾ ಪುಟ ಹೊಂದಿರುವ ಪ್ರತ್ಯೇಕ ಪಾಸ್‌ಪೋರ್ಟ್ ನೀಡದಿರಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.

ವಿದೇಶಗಳಲ್ಲಿ ದುರ್ಬಲ ಕಾರ್ಮಿಕರ ಶೋಷಣೆಯಿಂದ ಈ ನೂತನ ಕಿತ್ತಳೆ ಬಣ್ಣದ ಪಾಸ್‌ಪೋರ್ಟ್ ರಕ್ಷಿಸುವ ನಿರೀಕ್ಷೆ ಇತ್ತು. ಆದರೆ, ಕಿತ್ತಳೆ ಹಾಗೂ ನೀಲಿ ಬಣ್ಣ ಬಡವರು ಹಾಗೂ ನಿರಕ್ಷರ ಕಾರ್ಮಿಕರ ತಾರತಮ್ಯಕ್ಕೆ ಕಾರಣವಾಗಬಹುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವರು ಟೀಕಿಸಿದ್ದರು.

ಶಾಲಾ ಶಿಕ್ಷಣ ಪೂರೈಸದ ಹಾಗೂ 18 ರಾಷ್ಟ್ರಗಳಲ್ಲಿ ವಿಶೇಷವಾಗಿ ಗಲ್ಫ್‌ನಲ್ಲಿ ಕೆಲಸ ಮಾಡಲು ವಿದೇಶಕ್ಕೆ ತೆರಳುವ ಅಭ್ಯರ್ಥಿಗಳಿಗೆ ಇಸಿಆರ್ ಅಥವಾ ಎಮಿಗ್ರೇಶನ್ ಪರಿಶೀಲನೆ ಅಗತ್ಯವಿರುವ ವರ್ಗದಲ್ಲಿ ಪಾಸ್‌ಪೋರ್ಟ್ ನೀಡಲಾಗುತ್ತದೆ. ಅವರು ಭಾರತದಿಂದ ತೆರಳುವ ಮುನ್ನ ವಲಸಿಗರ ರಕ್ಷಣಾ ಕಚೇರಿಯಿಂದ ‘ಎಮಿಗ್ರೇಶನ್ ಕ್ಲಿಯರೆನ್ಸ್’ ಪ್ರಮಾಣಪತ್ರ ಪಡೆದುಕೊಳ್ಳಬೇಕು.

ಈ ಬಗ್ಗೆ ರಾಹುಲ್ ಗಾಂಧಿ, ಇದು ಬಿಜೆಪಿಯ ತಾರತಮ್ಯದ ಮನೋಭಾವವನ್ನು ತೋರಿಸುತ್ತದೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News