ಪಾಕ್ ಪ್ರಧಾನಿಯ ಸಂತಾಪಕ್ಕೆ ಉತ್ತರಿಸಲು ನಿರಾಕರಿಸಿದ ಅಫ್ಘಾನ್ ಅಧ್ಯಕ್ಷ
Update: 2018-01-31 22:58 IST
ಕಾಬೂಲ್, ಜ.31: ಕಾಬೂಲ್‌ನಲ್ಲಿ ಜನವರಿ 28ರಂದು ನಡೆದ ಭಯೋತ್ಪಾದಕ ಬಾಂಬ್ ದಾಳಿಯಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆಗೆ ಸಂತಾಪ ವ್ಯಕ್ತಪಡಿಸಿ ಪಾಕಿಸ್ತಾನದ ಪ್ರಧಾನಿ ಶಹೀದ್ ಕಾಖನ್ ಅಬ್ಬಾಸಿ ಮಾಡಿದ ದೂರವಾಣಿ ಕರೆಗೆ, ಉತ್ತರಿಸಲು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ನಿರಾಕರಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ನಡೆದ ಸರಣಿ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿ ಅಬ್ಬಾಸಿ ಅವರು ಘನಿ ಅವರಿಗೆ ದೂರವಾಣಿ ಕರೆ ಮಾಡಿದ್ದರೆಂದು, ಅಫ್ಘಾನ್ ದಿನಪತ್ರಿಕೆ ಟೊಲೊ ನ್ಯೂಸ್ ವರದಿ ಮಾಡಿದೆ.
ಇತ್ತೀಚೆಗೆ ಕಾಬೂಲ್‌ನಲ್ಲಿ ನಡೆದ ದಾಳಿಗಳಿಗೆ ಸಂಬಂಧಿಸಿದ ಪುರಾವೆಗಳನ್ನು ಪಾಕಿಸ್ತಾನ ಸೇನೆಯ ಜೊತೆ ಹಂಚಿಕೊಳ್ಳಲು ಘನಿ ಅವರು ಇಸ್ಲಾಮಾಬಾದ್‌ಗೆ ನಿಯೋಗವೊಂದನ್ನು ಕಳುಹಿಸಿದ್ದಾರೆಂದು ಅಫ್ಘಾನ್ ದಿನಪತ್ರಿಕೆ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ತಾಲಿಬಾನ್ ಮತ್ತಿತರ ಉಗ್ರಗಾಮಿ ಗುಂಪುಗಳಿಗೆ ಪಾಕ್ ಬೆಂಬಲ ನೀಡುತ್ತಿದೆಯೆಂದು ಅಫ್ಘಾನ್ ಸರಕಾರ ಆಪಾದಿಸುತ್ತಿದೆ.