ನೀತಿ ಸಂಹಿತೆ ಉಲ್ಲಂಘನೆ: ರಾಯುಡುಗೆ 2 ಪಂದ್ಯ ನಿಷೇಧ

Update: 2018-01-31 19:02 GMT

ಹೊಸದಿಲ್ಲಿ, ಜ.31: ಬಿಸಿಸಿಐಯ ನೀತಿ ಉಲ್ಲಂಘನೆ ಮಾಡಿದ ಆರೋಪದಲ್ಲಿ ಹೈದರಾಬಾದ್ ಕ್ರಿಕೆಟ್ ತಂಡದ ನಾಯಕ ಅಂಬಟಿ ರಾಯುಡು 2 ಪಂದ್ಯಗಳಿಂದ ನಿಷೇಧಕ್ಕೊಳಗಾಗಿದ್ದಾರೆ. ಅವರು ಜ.11ರಂದು ನಡೆದ ಕರ್ನಾಟಕ ವಿರುದ್ಧದ ಸೈಯದ್ ಮುಸ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಅವರಿಗೆ ಬಿಸಿಸಿಐ ನಿಷೇಧ ವಿಧಿಸಿದೆ.

ಇದರಿಂದಾಗಿ ಮುಂಬರುವ ವಿಜಯ್ ಹಝಾರೆ ಟ್ರೋಫಿಗಾಗಿ ಹೈದರಾಬಾದ್ ತಂಡದ ಪರ ಆಡಲಿರುವ ರಾಯುಡು ಫೆ 5ಮತ್ತು 6 ರಂದು ನಡೆಯಲಿರುವ 2 ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

‘‘ರಾಯುಡು ವಿರುದ್ಧ ಅಂಪಾಯರ್‌ಗಳಾದ ಅಭಿಜಿತ್ ದೇಶ್‌ಮುಖ್, ಉಲ್ಲಾಸ್ ವಿಠಲ್ ರಾವ್ ಗಾಂಧೆ ಹಾಗೂ 3ನೇ ಅಂಪಾಯರ್ ಅನಿಲ್ ದಂಡೇಕರ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪ ಹೊರಿಸಿದ್ದರು. ಈ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಹೈದರಾಬಾದ್ ಕ್ರಿಕೆಟ್ ತಂಡದ ಅಧಿಕಾರಿಯ ಪಾತ್ರವಿದೆಯೇ ಎಂಬುದರ ಬಗ್ಗೆ ಬಿಸಿಸಿಐ ಪರಿಶೀಲಿಸುತ್ತಿದೆ ಎಂದು ಬಿಸಿಸಿಐ ಹೇಳಿದೆ.

   ಹೈದರಾಬಾದ್‌ನ ಫೀಲ್ಡರ್‌ನ ಕಾಲು ಬೌಂಡರ್ ಲೈನ್‌ಗೆ ತಾಗಿತ್ತು. ಆದರೆ ಇದನ್ನು ಕ್ರೀಡಾಂಗಣದಲ್ಲಿರುವ ಅಂಪೈರ್ ಗಮನಿಸಿರಲಿಲ್ಲ ಹಾಗೂ ಈ ಬಗ್ಗೆ 3ನೇ ಅಂಪೈರ್ ಅಭಿಪ್ರಾಯ ಕೇಳಲಿಲ್ಲ. ಕರ್ನಾಟಕದ ಕರುಣ್‌ನಾಯರ್ ಅವರಿಗೆ ಬೌಂಡರಿಯ ಬದಲು 2 ರನ್ ನೀಡಲಾಗಿತ್ತು. ಕರ್ನಾಟಕ ತಂಡ 5 ವಿಕೆಟ್ ನಷ್ಟದಲ್ಲಿ 203 ರನ್ ಗಳಿಸಿತ್ತು. ಬಳಿಕ ಕರ್ನಾಟಕದ ಖಾತೆಗೆ 2 ರನ್‌ಗಳ ಸೇರ್ಪಡೆಗೊಂಡಿತ್ತು. ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 203 ರನ್‌ಗಳ ಕೊಡುಗೆ ನೀಡಿದ್ದರೂ ಪಂದ್ಯವನ್ನು ಕಳೆದುಕೊಂಡಿತ್ತು. ಈ ವಿಚಾರದ ಬಗ್ಗೆ ರಾಯುಡು ಅಂಪಾಯರ್ ಜೊತೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ 2ನೇ ಪಂದ್ಯವು ನಿಗದಿತ ಸಮಯಕ್ಕಿಂತ ತಡವಾಗಿ ಆರಂಭಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News