ಎದೆ ಢವ ಢವಗೊಳಿಸುವ ಚಿತ್ರದೊಂದಿಗೆ ಬಂದಿದ್ದಾನೆ ಪ್ರಣವ್

Update: 2018-02-04 09:14 GMT

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಪುತ್ರ ನಾಯಕನಾಗಿ ನಟಿಸಿರುವ ಪ್ರಥಮ ಚಿತ್ರ ‘ಆದಿ’. ಅದರ ಜೊತೆಗೆ ‘ದೃಶ್ಯಂ’ ಎಂಬ ಬ್ಲಾಕ್ ಬಸ್ಟರ್ ಸಿನೆಮಾವನ್ನು ನಿರ್ದೇಶಿಸಿದ ಜೀತು ಜೋಸೆಫ್ ಚಿತ್ರದ ನಿರ್ದೇಶಕರು ಎನ್ನುವುದು ಮತ್ತೊಂದು ಹೈಲೈಟ್. ಈ ಎರಡೂ ಅಂಶಗಳನ್ನು ಮನಸ್ಸಲ್ಲಿರಿಸಿಕೊಂಡು ಥಿಯೇಟರ್‌ಗೆ ಹೋದರೆ ಸಿನೆಮಾ ನಿರಾಶೆ ಮಾಡುವುದಿಲ್ಲ ಎನ್ನುವುದು ಚಿತ್ರದ ಪ್ಲಸ್ ಪಾಯಿಂಟ್.

ಆದಿತ್ಯ ಮೋಹನ್ ಎನ್ನುವುದು ನಾಯಕನ ಹೆಸರು. ಆತ ಒಬ್ಬ ಗಿಟಾರಿಸ್ಟ್. ಸಿನೆಮಾ ಸಂಗೀತ ನಿರ್ದೇಶಕನಾಗಬೇಕೆನ್ನುವುದು ಕನಸು. ಆದರೆ ಆತನ ತಂದೆ ಉದ್ಯಮಿ ಮೋಹನ್ ಗೆ ಮಗ ಯಾವುದಾದರೂ ಭರವಸೆಯ ಕ್ಷೇತ್ರದಲ್ಲಿ ವೃತ್ತಿ ನಿರತನಾಗಿರಲೆಂಬ ಆಸೆ. ತನ್ನ ಕ್ಷೇತ್ರದಲ್ಲಿ ಸಾಧನೆ ನಡೆಸಲು ತಂದೆಯಲ್ಲಿ ಎರಡು ವರ್ಷ ಸಮಯಾವಕಾಶ ಕೇಳುವ ಆದಿತ್ಯ ಆ ಪ್ರಯತ್ನದಲ್ಲಿ ಒಂದು ಅಪಾಯಕ್ಕೆ ಸಿಲುಕಿಕೊಳ್ಳುತ್ತಾನೆ. ಅದೇನು ಅಪಾಯ? ಅದರಿಂದ ಹೇಗೆ ಹೊರಬರುತ್ತಾನೆ ಎನ್ನುವುದನ್ನು ತಿಳಿಯಲು ಸಿನೆಮಾ ನೋಡಲೇಬೇಕು.

 ಸಾಮಾನ್ಯವಾಗಿ ಹೊಸಮುಖವೊಂದನ್ನು ನಾಯಕನನ್ನಾಗಿ ಪರಿಚಯಿಸುವಾಗ ಪ್ರೇಮಕತೆಗಳನ್ನು ಆಯ್ದುಕೊಳ್ಳುವುದು ಸಹಜ. ಆದರೆ ಇದಕ್ಕೆ ವಿರುದ್ಧವಾಗಿ ನಿರ್ದೇಶಕ ಜೀತು ಜೋಸೆಫ್ ಸಸ್ಪೆನ್ಸ್ ಥ್ರಿಲ್ಲರ್ ಕತೆಯೊಂದನ್ನು ಆಯ್ದುಕೊಂಡಿದ್ದಾರೆ. ವಿಶೇಷ ಎಂಬ ಹಾಗೆ ಪ್ರಣವ್ ಆದಿಯ ಪಾತ್ರದಲ್ಲಿ ಜೀವಿಸಿದ್ದಾರೆ. ಸಾಮಾನ್ಯವಾಗಿ ಭಾರತೀಯ ಸಿನೆಮಾಗಳಲ್ಲಿ ಕಾಣಲು ಅಸಾಧ್ಯವಾದ ‘ಪಾರ್ಕೌರ್ ಸ್ಟಂಟ್ಸ್’ ಗಳ ಮೂಲಕ ಪ್ರಣವ್ ಮನಸೆಳೆಯುವ ಪ್ರಯತ್ನ ನಡೆಸಿದ್ದಾರೆ. 16 ವರ್ಷಗಳ ಹಿಂದೆ ಬಾಲನಟನಾಗಿ ಕಾಣಿಸಿಕೊಂಡಾಗಲೇ ಪಲ್ಟಿ ಹೊಡೆದು ಗಮನ ಸೆಳೆದಿದ್ದ ಈ ಹುಡುಗ ಈಗ ಚೇಸಿಂಗ್ ದೃಶ್ಯಗಳು ಮತ್ತು ಕಟ್ಟಡದಿಂದ ಕಟ್ಟಡಗಳ ಮೇಲೆ, ವಾಹನಗಳ ಮೇಲೆ ಜಿಗಿದು ಅಚ್ಚರಿ ಮೂಡಿಸಿದ್ದಾರೆ. ಯಾವುದೇ ಡ್ಯೂಪ್‌ಗಳನ್ನು ಬಳಸದೆ ಹಗ್ಗದ ಸಹಾಯದಿಂದ ಸಾಹಸದಲ್ಲಿ ತೊಡಗಿಸಿಕೊಂಡ ಆತನ ಪ್ರಯತ್ನ ಮೆಚ್ಚುವಂಥದ್ದು.

ಸ್ಟಾರ್ ಪುತ್ರ ಎಂಬ ಕಾರಣಕ್ಕಾಗಿ ಪಾತ್ರದಿಂದ ಹೊರಗುಳಿಯಬಹುದಾದ ಯಾವುದೇ ಬಿಲ್ಡಪ್ ನೀಡಿಲ್ಲ ಎನ್ನುವುದು ಮೆಚ್ಚಬೇಕಾದ ಅಂಶ. ಅದೇ ವೇಳೆ ತಂದೆ ಮೋಹನ್ ಲಾಲ್ ನಟನೆಯ ಪ್ರಥಮ ಚಿತ್ರದ ಹಾಡೊಂದನ್ನು ರಿ ಪ್ರೊಡ್ಯೂಸ್ ಮಾಡಿ ಬಳಸಿಕೊಳ್ಳಲಾಗಿದೆ. ಮಾತ್ರವಲ್ಲ, ಖುದ್ದು ಮೋಹನ್ ಲಾಲ್, ಮೋಹನ್ ಲಾಲ್ ಆಗಿಯೇ ದೃಶ್ಯವೊಂದರಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತಾರೆ.

ಇಷ್ಟೆಲ್ಲ ಇದ್ದರೂ ವಯಸ್ಸಿಗೆ ತಕ್ಕ ಲವಲವಿಕೆಯ ಹುಡುಗನಾಗಿ ಪ್ರಣವ್ ಕಾಣಿಸಿಕೊಳ್ಳುವುದೇ ಇಲ್ಲ. ಅದಕ್ಕೆ ಕ್ಷಣ ಕ್ಷಣಕ್ಕೂ ಆತಂಕ ತುಂಬಿಕೊಂಡ ಆತನ ಪಾತ್ರವೂ ಕಾರಣವಿರಬಹುದು ಅಥವಾ ನಿಜಕ್ಕೂ ಮೂಡಿಯೆಂದು ಗುರುತಿಸಿಕೊಳ್ಳುವ ಪ್ರಣವ್‌ಗೆ ಅಂಥದೇ ಪಾತ್ರ ನೀಡಿರುವ ನಿರ್ದೇಶಕರ ಜಾಣ್ಮೆಯೂ ಇರಬಹುದು. ಜೀತು ಜೋಸೆಫ್ ‘ದೃಶ್ಯಂ’ ಮಾದರಿಯಲ್ಲೇ ಮೊಬೈಲ್ ಮತ್ತು ತಂತ್ರಜ್ಞಾನದ ಬಳಕೆಯನ್ನು ತೋರಿಸುವ ಸಂದರ್ಭಗಳನ್ನು ಕೂಡ ಚಿತ್ರದಲ್ಲಿ ಇರಿಸಿದ್ದಾರೆ.

ತಂದೆಯ ಪಾತ್ರದಲ್ಲಿ ನಟಿಸಿರುವ ಅದ್ಭುತ ಕಲಾವಿದ ಸಿದ್ದ್ದಿೀಕ್ ಮತ್ತು ತಾಯಿಯಾಗಿ ಲೆನ ಪಾತ್ರಕ್ಕೆ ಜೀವ ತುಂಬಿದ್ದಾರೆ. ‘ಡೈಮಂಡ್ ನೆಕ್ಲೇಸ್’ ಚಿತ್ರದ ಖ್ಯಾತಿಯ ಅನುಶ್ರೀ ಇಲ್ಲಿ ಬಾಯಿಬಡುಕಿ ಜಯಾ ಪಾತ್ರಕ್ಕೆ ಜೀವ ನೀಡಿದ್ದಾರೆ. ಜಯಾ ಮತ್ತು ಆದಿಯ ಪಾತ್ರದ ನಡುವೆ ನಿಧಾನಕ್ಕೆ ಮೂಡುವ ಆತ್ಮೀಯತೆಯನ್ನು ನಿರ್ದೇಶಕರು ಚೆನ್ನಾಗಿ ತೋರಿಸಿದ್ದಾರೆ. ಖಳನಾಗಿ ಜಗಪತಿ ಬಾಬು ನಟಿಸಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್ ನ ಚೇಸಿಂಗ್ ದೃಶ್ಯಗಳು ಸತೀಶ್ ಕುರುಪ್ ಛಾಯಾಗ್ರಹಣದಲ್ಲಿ ಚೆನ್ನಾಗಿ ಮೂಡಿ ಬಂದಿವೆ. ಒಟ್ಟಿನಲ್ಲಿ ಮೋಹನ್ ಲಾಲ್ ಅಭಿಮಾನಿಗಳಷ್ಟೇ ಅಲ್ಲ; ಚಿತ್ರರಸಿಕರನ್ನೆಲ್ಲಾ ಸೆಳೆಯುವಂಥ ಚಿತ್ರ ಇದು ಎನ್ನಬಹುದು.

ತಾರಾಗಣ: ಪ್ರಣವ್ ಮೋಹನ್ ಲಾಲ್, ಅನುಶ್ರೀ
ನಿರ್ದೇಶಕ: ಜೀತು ಜೋಸೆಫ್
ನಿರ್ಮಾಪಕ: ಆ್ಯಂಟನಿ ಪೆರುಂಬಾವೂರ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News