100 ಕೋಟಿ ರೂ. ಕ್ಲಬ್‌ಗೆ ಪದ್ಮಾವತ್

Update: 2018-02-04 12:19 GMT

ವಿವಾದಗಳ ಜ್ವಾಲೆಯ ನಡುವೆ ತೆರೆಕಂಡ ‘ಪದ್ಮಾವತ್’, ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲವಾಗಿದೆ. ಅದ್ದೂರಿ ಮೇಕಿಂಗ್, ತಾರೆಯರ ಅದ್ಭುತ ಅಭಿನಯ ಹಾಗೂ ಸಂಜಯ್‌ಲೀಲಾ ಬನ್ಸಾಲಿಯ ಸಮರ್ಥ ನಿರ್ದೇಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ತೆರೆಕಂಡ ಆರೇ ದಿನಗಳಲ್ಲಿ ಚಿತ್ರವು 137 ಕೋಟಿ ರೂ.ಗಳಿಸುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ದಿಗ್ವಿಜಯ ಸಾಧಿಸಿದೆ. ಇದರೊಂದಿಗೆ ಸೆಂಚುರಿ ಕ್ಲಬ್‌ಗೆ ಸೇರ್ಪಡೆಗೊಂಡ ಈ ವರ್ಷದ ಪ್ರಪ್ರಥಮ ಚಿತ್ರವೆಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಕರ್ಣಿ ಸೇನೆಯ ತೀವ್ರ ವಿರೋಧದ ಹಿನ್ನೆಲೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಹಾಗೂ ಹರ್ಯಾಣಗಳಲ್ಲಿ ಚಿತ್ರ ಬಿಡುಗಡೆಗೊಳ್ಳದಿದ್ದರೂ, ಉಳಿದೆಡೆ ಪದ್ಮಾವತ್ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ.

ವಿದೇಶಗಳಲ್ಲೂ ಪದ್ಮಾವತ್ ವಿಜಯ ಯಾತ್ರೆ ಮುಂದುವ ರಿದಿದ್ದು, ಒಂದೇ ವಾರದಲ್ಲಿ ಸುಮಾರು 8 ಕೋಟಿ ರೂ. ಕೊಳ್ಳೆಹೊಡೆದಿದೆ. ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಹಾಗೂ ರಣವೀರ್ ಸಿಂಗ್ ನಟಿಸಿರುವ ಪದ್ಮಾವತ್, 13ನೇ ಶತಮಾನದಲ್ಲಿ ಜೀವಿಸಿದ್ದಳೆನ್ನಲಾದ ಚಿತ್ತೂರಿನ ರಜಪೂತ ರಾಣಿ ಪದ್ಮಾವತಿಯ ಕಥಾವಸ್ತುವನ್ನು ಹೊಂದಿದೆ.

ಈ ನಡುವೆ ಪದ್ಮಾವತ್‌ಗೆ ಬಾಲಿವುಡ್‌ನ ಗಣ್ಯರಿಂದ ಇನ್ನಿಲ್ಲದ ಪ್ರಶಂಸೆ ವ್ಯಕ್ತವಾಗಿದೆ. ಬಿಗ್‌ಬಿ ಅಮಿತಾಭ್ ಬಚ್ಚನ್ ಅವರಂತೂ ರಣವೀರ್ ನಟನೆಗೆ ಮಾರುಹೋಗಿದ್ದಾರೆ. ದೀಪಿಕಾ ಕೂಡಾ ವಿಮರ್ಶಕರ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ. ಈ ನಡುವೆ ಸ್ವಾರಸ್ಯದ ಸಂಗತಿಯೆಂದರೆ, ಪದ್ಮಾವತ್ ಪಾಕಿಸ್ತಾನದಲ್ಲೂ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಅಲ್ಲಿ ಯಾವುದೇ ಕತ್ತರಿ ಪ್ರಯೋಗಿಸದೆಯೇ ಸೆನ್ಸಾರ್ ಮಂಡಳಿ ಪ್ರದರ್ಶನಕ್ಕೆ ಅವಕಾಶ ನೀಡಿದೆ.

ಇಷ್ಟಕ್ಕೂ ಪದ್ಮಾವತ್ ಬಗ್ಗೆ ಅಪಸ್ವರ ಕೂಡಾ ಕೇಳಿಬಂದಿದೆ. ಚಿತ್ರದಲ್ಲಿ ಸತಿಪದ್ಧತಿ ಹಾಗೂ ಸಾಮೂಹಿಕ ಸಹಗಮನ ಜೋಹರ್‌ನ್ನು ವೈಭವೀಕರಿಸಲಾಗಿದೆ ಯೆಂದು ಉದಯೋನ್ಮುಖ ಚಿತ್ರನಟಿ ಸ್ವರಭಾಸ್ಕರ್ ಸೇರಿದಂತೆ ಕೆಲವರು ಆಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಡುಗಡೆಗೆ ಮೊದಲು ವಿವಾದಗಳಿಂದಲೇ ಸುದ್ದಿಯಲ್ಲಿದ್ದ ಪದ್ಮಾವತ್, ಈಗ ರಿಲೀಸ್‌ನ ಆನಂತರವೂ ಸದ್ದುಮಾಡುತ್ತಿರುವುದಂತೂ ನಿಜ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News