ಹೇ ರಾಮ್... ರಾಷ್ಟ್ರಪಿತನಿಗೆ ಬಾಲಿವುಡ್ ಶ್ರದ್ಧಾಂಜಲಿ

Update: 2018-02-04 10:51 GMT

ಮಹಾತ್ಮಾ ಗಾಂಧಿಯವರ 70ನೇ ಪುಣ್ಯತಿಥಿಯ ಸಂದರ್ಭದಲ್ಲಿ, ರಾಷ್ಟ್ರಪಿತನಿಗೆ ಶ್ರದ್ಧಾಂಜಲಿಯಾಗಿ ಬಾಲಿವುಡ್ ಚಿತ್ರವೊಂದು ತೆರೆಕಾಣಲು ಸಜ್ಜಾಗಿದೆ. ‘ಹೇ ರಾಮ್ ಹಮ್ ನೇ ಗಾಂಧಿ ಕೋ ಮಾರ್ ದಿಯಾ’ ಎಂದು ಉದ್ದನೆಯ ಹೆಸರಿಡಲಾದ ಈ ಚಿತ್ರದ ಎರಡನೇ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಭಾರೀ ಗಮನಸೆಳೆದಿದೆ.

 ಟೈಟಲ್‌ನಿಂದಲೇ ಭಾರೀ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ನಯೀಮ್ ಎ. ಸಿದ್ದೀಕ್ ನಿರ್ದೇಶಿಸಿದ್ದಾರೆ. ಮಹಾತ್ಮಾ ಗಾಂಧಿಯ ಹತ್ಯೆಗೆ ಕೇವಲ ಎರಡು ದಿನಗಳ ಮೊದಲು, 1948ರ ಜನವರಿ 28ರಂದು ರೈಲೊಂದರಲ್ಲಿ ಜೊತೆಯಾಗಿ ಪ್ರಯಾಣಿಸುವ, ಇಬ್ಬರು ಸಂಪೂರ್ಣ ತದ್ವಿರುದ್ಧವಾದ ವಿಚಾರಧಾರೆಗಳ ವ್ಯಕ್ತಿಗಳ ಸುತ್ತ ‘ಹೇ ರಾಮ್...’ ಚಿತ್ರದ ಕಥೆಸಾಗುತ್ತದೆ. ತಮ್ಮ ಎರಡು ದಿನಗಳ ಪ್ರಯಾಣದ ಸಂದರ್ಭದಲ್ಲಿ ನಡೆಯುವ ಘಟನಾವಳಿಗಳು ಇವರಿಬ್ಬರ ಬದುಕಿನ ಮೇಲೆ ಪರಿಣಾಮ ಬೀರುವುದೇ ಚಿತ್ರದ ಕಥಾ ವಸ್ತುವಾಗಿದೆ.

 ವಿಶ್ವಾದ್ಯಂತ ಅಹಿಂಸೆಯ ಸಂದೇಶ ವನ್ನು ಹರಡುವುದೇ ತನ್ನ ಚಿತ್ರದ ಸಮಗ್ರ ಉದ್ದೇಶವೆಂದು ನಿರ್ದೇಶಕ ನಯೀಮ್ ಸಿದ್ದೀಕಿ ಹೇಳುತ್ತಾರೆ. 1948ರ ಜನವರಿ 30ರಂದು ನಡೆದ ಗಾಂಧಿ ಹತ್ಯೆಯ ಸಂದರ್ಭದಲ್ಲೇ ಇದ್ದಂತಹ ಹಿಂಸಾತ್ಮಕ ವಾತಾವರಣವನ್ನು ಈಗ ಜಗತ್ತು ಎದುರಿಸುತ್ತಿದೆ. ಧರ್ಮ, ಜಾತಿ, ಜನಾಂಗದ ಹೆಸರಿನಲ್ಲಿ ಎಲ್ಲೆಡೆ ಹಿಂಸೆ ವಿಜೃಂಭಿಸುತ್ತಿದೆ. ಮಾನವತೆ ನಶಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಮಹಾತ್ಮಾ ಗಾಂಧಿಯವರು ಸಾರಿದ ಶಾಂತಿ, ಅಹಿಂಸೆ ಹಾಗೂ ಮಾನವತೆಯ ಸಂದೇಶಗಳನ್ನು ನಾವು ಕೊಲ್ಲದಿರೋಣ ಎಂಬ ಸಂದೇಶವನ್ನು ಜನತೆಗೆ ತಲುಪಿಸುವುದೇ ಈ ಚಿತ್ರದ ಉದ್ದೇಶವೆಂದು ನಯೀಮ್ ಹೇಳುತ್ತಾರೆ. ಉದಯೋನ್ಮುಖ ತಾರೆಯರಾದ ಜತಿನ್ ಗೋಸ್ವಾಮಿ, ಸಮೀಕ್ಷಾ ಭಟ್ನಾಗರ್, ಸುಬ್ರತ್ ದತ್ತಾ ಹಾಗೂ ಪ್ರತಿಮಾ ಕಾಝ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಎಲ್ಲಾ ಸರಿಹೋದಲ್ಲಿ, ಚಿತ್ರ ಮಾರ್ಚ್ ನಲ್ಲಿ ತೆರೆಕಾಣುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News