ಪಾಕ್‌ನ ಒಂದು ಬುಲೆಟ್‌ಗೆ ನಮ್ಮ ಅಸಂಖ್ಯಾತ ಬುಲೆಟ್‌ಗಳಿಂದ ಉತ್ತರ: ರಾಜನಾಥ್ ಸಿಂಗ್
ಅಗರ್ತಲ, ಫೆ.4: ಭಾರತವು ಪಾಕ್‌ನೊಂದಿಗೆ ಶಾಂತಿಯುತ ಸಂಬಂಧ ಬಯಸುತ್ತಿದೆ. ಆದರೆ ಗಡಿಯಾಚೆಗಿಂದ ಹಾರಿಸಲಾಗುವ ಪ್ರತಿಯೊಂದು ಬುಲೆಟ್‌ಗೂ ಅಸಂಖ್ಯಾತ ಬುಲೆಟ್‌ಗಳಿಂದ ಉತ್ತರಿಸುವಂತೆ ಸೇನಾಪಡೆಗಳಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ನಮ್ಮ ಪ್ರದೇಶದೊಳಗೆ ಪಾಕಿಸ್ತಾನಿ ಪಡೆಗಳು ಹಾರಿಸುವ ಒಂದೊಂದು ಬುಲೆಟ್‌ಗೂ ಅಸಂಖ್ಯಾತ ಬುಲೆಟ್‌ಗಳಿಂದ ಪ್ರತ್ಯುತ್ತರ ನೀಡುವಂತೆ ನಮ್ಮ ಪಡೆಗಳಿಗೆ ಸ್ಥಾಯಿ ಆದೇಶ ನೀಡಿದ್ದೇನೆ ಎಂದು ತ್ರಿಪುರದ ಅಗರ್ತಲ ನಗರದ ಹೊರಭಾಗದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ರಾಜನಾಥ್ ಸಿಂಗ್ ತಿಳಿಸಿದರು.
ಪಾಕಿಸ್ತಾನದ ಮೇಲೆ ನಾವು ಮೊದಲು ಆಕ್ರಮಣ ಮಾಡಲು ಬಯಸುವುದಿಲ್ಲ. ನಮ್ಮೆಲ್ಲಾ ನೆರೆಹೊರೆಯ ದೇಶಗಳೊಡನೆ ಶಾಂತಿ ಮತ್ತು ಸೌಹಾರ್ದತೆಯಿಂದ ಬಾಳಲು ನಾವು ಬಯಸುತ್ತೇವೆ. ಆದರೆ ದುರದೃಷ್ಟವಶಾತ್ ಪಾಕಿಸ್ತಾನವು ಜಮ್ಮು ಕಾಶ್ಮೀರವನ್ನು ವಿಭಜಿಸಲು ಹಾಗೂ ಭಾರತೀಯ ಪ್ರದೇಶದೊಳಗೆ ಮತ್ತು ನಮ್ಮ ಸೈನಿಕರ ಮೇಲೆ ಆಕ್ರಮಣ ನಡೆಸಲು ಪ್ರಯತ್ನಿಸುತ್ತದೆ ಎಂದು ಸಿಂಗ್ ಹೇಳಿದರು.
25 ವರ್ಷಗಳಿಂದ ತ್ರಿಪುರದಲ್ಲಿ ಸತತವಾಗಿ ಆಡಳಿತ ನಡೆಸುತ್ತಿರುವ ಎಡಪಕ್ಷಗಳು ತ್ರಿಪುರದ ಅಭಿವೃದ್ಧಿಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದ್ದು, ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ ಎಂದು ಆರೋಪಿಸಿದ ಸಿಂಗ್, ಪ.ಬಂಗಾಳದಲ್ಲಿ 35 ವರ್ಷ ಆಡಳಿತ ನಡೆಸಿದ್ದ ಸಿಪಿಎಂ ಪಕ್ಷ ಆ ರಾಜ್ಯವನ್ನು ಹಾಳುಗೆಡವಿತು. ಅದೇ ರೀತಿ ತ್ರಿಪುರಾದ ಜನತೆ ಇನ್ನಾದರೂ ಎಚ್ಚೆತ್ತುಕೊಂಡು ಎಡಪಕ್ಷಗಳನ್ನು ಆಡಳಿತದಿಂದ ಕಿತ್ತೊಗೆಯದಿದ್ದರೆ ರಾಜ್ಯದ ಸರ್ವನಾಶ ಖಚಿತ ಎಂದು ಹೇಳಿದರು.
ಈಗ ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ಆಡಳಿತವಿದೆ. ಇದಕ್ಕೆ ಕಾರಣವೆಂದರೆ ಬಿಜೆಪಿಯ ಮೇಲೆ ದೇಶದ ಜನರಿಟ್ಟಿರುವ ನಂಬಿಕೆ. ಬಡತನ ನಿವಾರಿಸಿ ಯುವಜನತೆಗೆ ಉದ್ಯೋಗಾವಕಾಶ ದೊರಕಿಸಿಕೊಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಜನತೆ ತಿಳಿದಿದ್ದಾರೆ ಎಂದ ರಾಜನಾಥ್ ಸಿಂಗ್, ತ್ರಿಪುರದಲ್ಲಿ ಪ್ರಾಕೃತಿಕ ಸಂಪನ್ಮೂಲ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ರಾಜ್ಯದಲ್ಲಿ ಬಿಜೆಪಿಗೆ ಒಮ್ಮೆ ಅವಕಾಶ ಕೊಟ್ಟರೆ ತ್ರಿಪುರಾವನ್ನು ‘ನಂಬರ್ ವನ್’ ರಾಜ್ಯವನ್ನಾಗಿಸುತ್ತೇವೆ . ಈ ಬಾರಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮತದಾರರನ್ನು ವಿನಂತಿಸಿದರು.