ವಿಮಾನಪ್ರಯಾಣ ದರ ಆಟೊರಿಕ್ಷಾ ದರಕ್ಕಿಂತಲೂ ಅಗ್ಗ : ಕೇಂದ್ರ ಸಚಿವ ಜಯಂತ್ ಸಿನ್ಹ

Update: 2018-02-04 14:53 GMT

ಹೊಸದಿಲ್ಲಿ, ಫೆ.4: ವಿಶ್ವದಲ್ಲೇ ಅತ್ಯಂತ ಕನಿಷ್ಟ ವಿಮಾನಯಾನ ದರ ಭಾರತದಲ್ಲಿದೆ. ನಮ್ಮ ದೇಶದಲ್ಲಿ ಆಟೋರಿಕ್ಷಾದಲ್ಲಿ ಪ್ರಯಾಣಿಸುವದಕ್ಕಿಂತಲೂ ಕಡಿಮೆ ದರದಲ್ಲಿ ವಿಮಾನದಲ್ಲಿ ಪ್ರಯಾಣಿಸಬಹುದು ಎಂದು ನಾಗರಿಕ ವಿಮಾನಯಾನ ಇಲಾಖೆಯ ಸಹಾಯಕ ಸಚಿವ ಜಯಂತ್ ಸಿನ್ಹಾ ಬಣ್ಣಿಸಿದ್ದಾರೆ.

ಈ ಹೇಳಿಕೆ ಅಸಂಬದ್ಧ ಎಂದು ಕೆಲವರು ಹೇಳಬಹುದು. ಆದರೆ ಇಂದೋರ್‌ನಿಂದ ದಿಲ್ಲಿಗೆ ವಿಮಾನ ಪ್ರಯಾಣಕ್ಕೆ ಪ್ರಯಾಣಿಕರು ಪ್ರತೀ ಕಿ.ಮೀ.ಗೆ ಕೇವಲ ಐದು ರೂಪಾಯಿ ಪಾವತಿಸಬೇಕು. ಆದರೆ ಆಟೊರಿಕ್ಷಾದಲ್ಲಿ ಪ್ರತೀ ಕಿ.ಮೀ.ಗೆ 8ರಿಂದ 10 ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಸಚಿವರು ವಿವರ ನೀಡಿದ್ದಾರೆ.

    ಇದೀಗ ಭಾರತದಲ್ಲಿ ಬಹಳಷ್ಟು ಮಂದಿ ವಿಮಾನ ಪ್ರಯಾಣದತ್ತ ಒಲವು ತೋರುತ್ತಿದ್ದಾರೆ. ಚಪ್ಪಲ್ ಧರಿಸಿದವರು ಕೂಡಾ ಈಗ ವಿಮಾನದಲ್ಲಿ ಪ್ರಯಾಣಿಸಬಹುದು ಎಂದು ಕೆಲ ದಿನಗಳ ಹಿಂದೆ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿದ್ದರು. ನಾಲ್ಕು ವರ್ಷಗಳ ಹಿಂದೆ ದೇಶದಲ್ಲಿ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ 11 ಕೋಟಿ ಆಗಿತ್ತು. ಆದರೆ ಈ ಆರ್ಥಿಕ ವರ್ಷಾಂತ್ಯದಲ್ಲಿ ಇದು 20 ಕೋಟಿಗೇರುವ ನಿರೀಕ್ಷೆಯಿದೆ . ಮುಂದಿನ ವರ್ಷಗಳಲ್ಲಿ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ 100 ಕೋಟಿಗೆ ತಲುಪಬೇಕು ಎಂಬುದು ಸರಕಾರದ ಆಶಯವಾಗಿದೆ ಎಂದು ಜಯಂತ್ ಸಿನ್ಹ ತಿಳಿಸಿದರು. ಪಕೋಡಾ ಮಾರಿ ದಿನಕ್ಕೆ 200 ರೂ. ಸಂಪಾದಿಸುವ ವ್ಯಕ್ತಿಯನ್ನು ಉದ್ಯೋಗಿ ಎಂದು ಪರಿಗಣಿಸಬಹುದು ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಮಾಧ್ಯಮಗಳಲ್ಲಿ ಇಂದಿನ ದಿನಗಳಲ್ಲಿ ‘ಪಕೋಡಾ ಆರ್ಥಿಕತೆ’ಯ ಬಗ್ಗೆ ಮಾತನಾಡಲಾಗುತ್ತಿದೆ. ಆದರೆ ಪಕೋಡಾ ಮಾರುವವರಿಗೆ ಉದ್ಯಮಿಗಳಾಗಲು ಅವಕಾಶ ಮಾಡಿಕೊಟ್ಟರೆ ಮುಂದಿನ ದಿನದಲ್ಲಿ ಅವರೂ ಕೂಡಾ ಮೆಕ್‌ಡೊನಾಲ್ಡ್ ಸರಣಿ ಆಹಾರ ಮಳಿಗೆಯಂತೆ ಕಾರ್ಯ ನಿರ್ವಹಿಸಬಹುದು ಎಂದರು.

ಉದ್ಯಮಿಗಳು ಮುಂದೆ ಬಂದರೆ ದೇಶದಲ್ಲಿ ಪ್ರಯಾಣಿಕರ ಡ್ರೋನ್ ವಿಮಾನ, ಹೆಲಿಕಾಪ್ಟರ್ ಟ್ಯಾಕ್ಸಿ , ಏರ್-ರಿಕ್ಷಾ ಮುಂತಾದ ಇಲೆಕ್ಟ್ರಿಕ್ ವಾಹನಗಳ ಸೇವೆ ಆರಂಭಗೊಂಡು ಸಂಚಾರ ದಟ್ಟಣೆಯ ಸಮಸ್ಯೆಗೆ ಮುಕ್ತಿ ದೊರಕಬಹುದು ಎಂದು ಜಯಂತ್ ಸಿನ್ಹಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News