ಎ.ಕೆ.47 ಬುಲೆಟ್ ಪರೀಕ್ಷೆಯಲ್ಲಿ ಬರೋಬ್ಬರಿ 1,430 ಜಾಕೆಟ್ ಗಳು ವಿಫಲ !

Update: 2018-02-04 16:34 GMT
ಸಾಂದರ್ಭಿಕ ಚಿತ್ರ

ಮುಂಬೈ, ಫೆ.4: ಎ-ಕೆ 47 ಬುಲೆಟ್ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆ ಖರೀದಿಸಿರುವ 1,430 ಬುಲೆಟ್‌ಪ್ರೂಫ್ (ಗುಂಡು ನಿರೋಧಕ) ಜಾಕೆಟ್‌ಗಳನ್ನು ಮರಳಿಸಲಾಗಿದೆ.

ಕಾನ್ಪುರ ಮೂಲದ ಸಂಸ್ಥೆಯೊಂದರಿಂದ 4,600 ಗುಂಡುನಿರೋಧಕ ಜಾಕೆಟ್‌ಗಳನ್ನು ಪೊಲೀಸ್ ಇಲಾಖೆ ಖರೀದಿಸಿತ್ತು. ಆದರೆ ಎ-ಕೆ 47 ಗುಂಡು ನಿರೋಧಕ ಪರೀಕ್ಷೆಯಲ್ಲಿ ಈ ಜಾಕೆಟ್‌ಗಳು ವಿಫಲವಾದ ಹಿನ್ನೆಲೆಯಲ್ಲಿ ಇವನ್ನು ವಾಪಾಸು ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿ.ವಿ.ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.

  ಚಂಡೀಗಢದಲ್ಲಿರುವ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿರುವ ಪರೀಕ್ಷೆಯ ಸಂದರ್ಭ ಎ.ಕೆ-47 ರೈಫಲ್‌ನ ಬುಲೆಟ್ 1,430 ಜಾಕೆಟ್‌ಗಳನ್ನು ಬೇಧಿಸಿ ಒಳನುಗ್ಗಿದ ಕಾರಣ ಇವನ್ನು ತಿರಸ್ಕರಿಸಲಾಗಿದೆ. ಇವನ್ನು ಬದಲಿಸಿ ಕೊಡುವಂತೆ ತಿಳಿಸಲಾಗಿದೆ ಎಂದವರು ತಿಳಿಸಿದ್ದಾರೆ.

  2008ರ ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭ ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಮೃತಪಟ್ಟಿದ್ದು, ಅವರು ಧರಿಸಿದ್ದ ಬುಲೆಟ್‌ಪ್ರೂಫ್ ಜಾಕೆಟ್‌ನ ಗುಣಮಟ್ಟ ವಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣದ ಬಳಿಕ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಬುಲೆಟ್‌ಪ್ರೂಫ್ ಜಾಕೆಟ್ ಸರಬರಾಜು ಮಾಡಲು ಸಂಸ್ಥೆಗಳು ಹಿಂಜರಿದ ಕಾರಣ ಹಲವಾರು ಬಾರಿ ಟೆಂಡರ್ ಕರೆಯಲಾಗಿತ್ತು. ಅಂತಿಮವಾಗಿ, ಮುಂಬೈ ದಾಳಿ ಘಟನೆಯ ಸುಮಾರು 9 ವರ್ಷದ ಬಳಿಕ ಕಾನ್ಪುರದ ಸಂಸ್ಥೆಯೊಂದು ಮುಂದೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News