×
Ad

ಪೇಟಿಎಂ ವಂಚನೆಯ ಹಿಂದೆ ಮಾಜಿ ಉದ್ಯೋಗಿಯ ಕೈವಾಡ

Update: 2018-02-04 20:31 IST

ಹೊಸದಿಲ್ಲಿ,ಫೆ.4: ಇ-ಪಾವತಿ ವೇದಿಕೆಯಾಗಿರುವ ಪೇಟಿಎಂನ ಉದ್ಯೋಗಿಗಳ ಐಡಿಗಳು ಮತ್ತು ಡಿಫಾಲ್ಟ್ ಪಾಸ್‌ವರ್ಡ್‌ಗಳನ್ನು ಸೃಷ್ಟಿಸುವ ವ್ಯವಸ್ಥೆಯನ್ನು ಬಳಸಿಕೊಂಡು ಕಂಪನಿಯನ್ನು ವಂಚಿಸಿರುವ ಪ್ರಕರಣದಲ್ಲಿ ಪೇಟಿಎಂನ ಓರ್ವ ಮಾಜಿ ಉದ್ಯೋಗಿ ಮತ್ತು ಆತನ ಐವರು ಸಹಚರರನ್ನು ಸಿಬಿಐ ತನ್ನ ದೋಷಾರೋಪಣೆ ಪಟ್ಟಿಯಲ್ಲಿ ಹೆಸರಿಸಿದೆ. ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಆರೋಪಗಳನ್ನು ಹೊರಿಸಲಾಗಿದೆ.

ಎರಡು ತಿಂಗಳ ಅವಧಿಗೆ ಪೇಟಿಎಂ ಉದ್ಯೋಗಿಯಾಗಿದ್ದ ಸಾವನ್ ನರೇಂದ್ರರಿಗೆ ಕಂಪನಿಯ ಮರುಪಾವತಿ ಪ್ರಕ್ರಿಯೆಯ ಬಗ್ಗೆ ಚೆನ್ನಾಗಿ ತಿಳಿದಿತ್ತು ಮತ್ತು ಆತ ಪೇಟಿಎಂ ಜಾಲತಾಣದ ಮೂಲಕ ಮಾರಾಟವಾಗುವ ವಿವಿಧ ಉತ್ಪನ್ನಗಳ ಮೇಲೆ ಶೇ.20ರಿಂದ ಶೇ.50ರಷ್ಟು ರಿಯಾಯಿತಿಯನ್ನು ನೀಡುವ ಆಮಿಷವನ್ನು ಗ್ರಾಹಕರಿಗೆ ಒಡ್ಡಿದ್ದ ಎಂದು ಸಿಬಿಐ ಆರೋಪಿಸಿದೆ.

ಸಾವನ್ ಕಂಪನಿಯ ಉದ್ಯೋಗವನ್ನು ತೊರೆದ ಬಳಿಕ ಸೂರಜ್ ಠಾಕೂರ್, ಪುರುಷೋತ್ತಮ ಯಾದವ್, ದೀಪಕ್ ಯಾದವ್, ತುಷಾರ್ ರೇವಾರಿಯಾ ಮತ್ತು ರಾಜೇಶ್ ಮೆಹೊ ಎನ್ನುವವರೊಂದಿಗೆ ಸೇರಿಕೊಂಡು ವಂಚನೆಯನ್ನು ಆರಂಭಿಸಿದ್ದ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದರು.

ಗ್ರಾಹಕರು ತಾವು ಖರೀದಿಸಿದ್ದ ಉತ್ಪನ್ನಗಳನ್ನು ವಾಪಸ್ ಮಾಡಿರದಿದ್ದರೂ ಸಾವನ್ ಕಂಪನಿಯ ಸಿಸ್ಟಮ್‌ನ್ನು ಬಳಸಿಕೊಂಡು ಆ ಉತ್ಪನ್ನಗಳಿಗೆ ಶೇ.100ರಷ್ಟು ರಿಯಾಯಿತಿ ಯನ್ನು ಸೃಷ್ಟಿಸಿದ್ದ. ಇದಕ್ಕಾಗಿ ಆತ ಪೇಟಿಎಂ ಉದ್ಯೋಗಿಗಳ ದಾಖಲೆಗಳನ್ನು ಕಳವು ಮಾಡಿದ್ದ ಎಂದು ಸಿಬಿಐ ಆರೋಪಿಸಿದೆ.

ಹಣ ಮರುಪಾವತಿಗೆ ಸಮ್ಮತಿ ಸೃಷ್ಟಿಯಾದ ಬಳಿಕ ಆತ ತಾನು ಭರವಸೆ ನೀಡಿದ್ದ ರಿಯಾಯಿತಿಯನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ಗ್ರಾಹಕರಿಂದ ಪಡೆಯುತ್ತಿದ್ದ ಎಂದು ಆರೋಪಿಸಲಾಗಿದೆ. ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲಾಗಿತ್ತು ಮತ್ತು ಅವರು ತೃಪ್ತರಾಗಿದ್ದರು. ಹೀಗಾಗಿ ಸಿಸ್ಟಮ್‌ನಲ್ಲಿ ಮರುಪಾವತಿ ಸೌಲಭ್ಯ ಸೃಷ್ಟಿಯಾಗಬಾರದಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಸಾವನ್ ಮತ್ತು ಗ್ಯಾಂಗ್ ವಿವಿಧ ಪೇಟಿಎಂ ವ್ಯಾಲೆಟ್‌ಗಳು ಮತ್ತು ಬ್ಯಾಂಕ್ ಖಾತೆಗಳ ಮೂಲಕ ಮರುಪಾವತಿಗಳನ್ನು ಪಡೆದುಕೊಂಡು ಕಂಪನಿಗೆ 11 ಲಕ್ಷ ರೂ.ಗಳ ನಷ್ಟವನ್ನುಂಟು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News