×
Ad

ಗೋಮೂತ್ರದಿಂದ ಔಷಧ ತಯಾರಿ: ಆದಿತ್ಯನಾಥ್ ಸರಕಾರದ ನಿರ್ಧಾರ

Update: 2018-02-04 20:34 IST

ಲಕ್ನೋ, ಫೆ.4: ಗೋಮೂತ್ರವನ್ನು ನೆಲಸ್ವಚ್ಛಗೊಳಿಸಲು ಬಳಸಲು ಆರಂಭಿಸಿರುವ ಆದಿತ್ಯನಾಥ್ ಸರಕಾರ ಇದೀಗ ಗೋಮೂತ್ರವನ್ನು ಔಷಧವಾಗಿ ಬಳಸುವ ಪ್ರಕ್ರಿಯೆಗೆ ಒತ್ತು ನೀಡಲು ಮುಂದಾಗಿದೆ.

"ಆಯುರ್ವೇದ ಇಲಾಖೆ ಗೋಮೂತ್ರವನ್ನು ಬಳಸಿಕೊಂಡು ಎಂಟು ಔಷಧಿಗಳನ್ನು ಸಿದ್ಧಪಡಿಸಿದೆ. ಇದು ಲಿವರ್ ಕಾಯಿಲೆಗಳು, ಕೀಲು ನೋವು ಮತ್ತು ಪ್ರತಿರೋಧ ಶಕ್ತಿಯ ಕೊರತೆಯಂಥ ರೋಗಗಳಿಗೆ ಪ್ರಯೋಜನಕಾರಿ ಎಂದು ದೃಢಪಟ್ಟಿದೆ" ಎಂದು ಆಯುರ್ವೇದ ಇಲಾಖೆ ನಿರ್ದೇಶಕ ಡಾ.ಆರ್.ಆರ್.ಚೌಧರಿ ಭಾನುವಾರ ಪ್ರಕಟಿಸಿದ್ದಾರೆ.

ಇಲಾಖೆಯ ಲಕ್ನೋ ಮತ್ತು ಪಿಲಿಬಿಟ್ ಫಾರ್ಮಸಿಗಳು ಇತರ ಖಾಸಗಿ ಘಟಕಗಳ ನೆರವಿನೊಂದಿಗೆ ಗೋಮೂತ್ರ ಮತ್ತು ತುಪ್ಪವನ್ನು ಬಳಸಿ ಈ ಔಷಧಿಗಳನ್ನು ಸಿದ್ಧಪಡಿಸಿದೆ. ರಾಜ್ಯದ ಬಂಡಾ, ಝಾನ್ಸಿ, ಮುಜಾಫರ್‍ನಗರ, ಅಲಹಾಬಾದ್, ವಾರಣಾಸಿ, ಬರೇಲಿ, ಲಕ್ನೋ ಹಾಗೂ ಪಿಲಿಬಿಟ್‍ಗಳಲ್ಲಿ ಆಯುರ್ವೇದಿಕ್ ಕಾಲೇಜುಗಳಿದ್ದು, ಸಾವಿರಾರು ರೋಗಿಗಳಿಗೆ ಈ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಗೋಮೂತ್ರ ಆಯುರ್ವೇದದ ಅವಿಭಾಜ್ಯ ಅಂಗ. ಒಟ್ಟು ಎಂಟು ಔಷಧಿಗಳನ್ನು ಸಿದ್ಧಪಡಿಸಲಾಗಿದ್ದು, ಗೋಮೂತ್ರ ಹಾಗೂ ಇತರ ಗವ್ಯ ಉತ್ಪನ್ನಗಳನ್ನು ಬಳಸಿ ಇದನ್ನು ಸಿದ್ಧಪಡಿಸಲಾಗಿದೆ. ಗೋಮೂತ್ರ ಹಾಗೂ ಗೋವಿನಿಂದ ಸಿಗುವ ಇತರ ಉತ್ಪನ್ನಗಳು ತೀರಾ ಪ್ರಯೋಜನಕಾರಿ ಎನ್ನುವುದು ಇತ್ತೀಚಿನ ಸಂಶೋಧನೆಗಳಿಂದ ದೃಢಪಟ್ಟಿದೆ. ಲಿವರ್ ಕಾಯಿಲೆ ಹಾಗೂ ಕೀಲು ನೋವು ಚಿಕಿತ್ಸೆಗೆ ಈಗಾಗಲೇ ಇದನ್ನು ಬಳಸುತ್ತಿದ್ದೆವು. ಇದು ರೋಗನಿರೋಧಕ ಶಕ್ತಿ ಉತ್ತೇಜಿಸುವಲ್ಲೂ ಸಹಕಾರಿ ಎನ್ನುವುದು ದೃಢಪಟ್ಟಿದೆ. ಇತರ ರೋಗಗಳ ಚಿಕಿತ್ಸೆಯಲ್ಲಿ ಇದನ್ನು ಬಳಸುವ ಪ್ರಯೋಗಗಳೂ ನಡೆಯುತ್ತಿವೆ ಎಂದು ಹೇಳಿದ್ದಾರೆ.

ಕಳೆದ ಆಗಸ್ಟ್ ನಲ್ಲಿ ಆದಿತ್ಯನಾಥ್ ಸರ್ಕಾರ ನೆಲ ಸ್ವಚ್ಛಗೊಳಿಸಲು ಗೋಮೂತ್ರ ಬಳಸುವ ನಿರ್ಧಾರ ಕೈಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News