×
Ad

ಭಾರತದಲ್ಲಿ ಅಗತ್ಯ ಔಷಧಿಗಳು ಇವೆಯೇ?: ಈ ಬಗ್ಗೆ ಅಧ್ಯಯನವೊಂದು ಹೇಳುವುದೇನು?

Update: 2018-02-04 20:37 IST

ಮುಂಬೈ,ಫೆ.4: ಸರಕಾರವು ಔಷಧಿಗಳನ್ನು ವ್ಯಾಪಕವಾಗಿ ಲಭ್ಯವಾಗಿಸಲು ಸಾವಿರಾರು ಔಷಧಿಗಳಿಗೆ ಅನುಮತಿ ನೀಡುತ್ತಿದೆಯಾದರೂ ಭಾರತೀಯರು ಅಗತ್ಯ ಔಷಧಿಗಳ ಲಭ್ಯತೆಯ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಬ್ರಿಟನ್‌ನ ನ್ಯೂಕ್ಯಾಸಲ್ ವಿವಿ, ಮುಂಬೈನ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ‘ಲಕ್ಷ’ ಹಾಗೂ ಟಿಸಿಎಸ್ ಜಂಟಿಯಾಗಿ ಕೈಗೊಂಡಿದ್ದ ಅಧ್ಯಯನವು ಹೇಳಿದೆ.

ಈ ವರ್ಷದ ಜ.17ರ ಜರ್ನಲ್ ಆಫ್ ಗ್ಲೋಬಲ್ ಹೆಲ್ತ್‌ನಲ್ಲಿ ಪ್ರಕಟಗೊಂಡಿರುವ ಅಧ್ಯಯನವು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ತೋರಿಸಲಾಗಿರುವ ಔಷಧಿಗಳ ಬಳಕೆ ಮತ್ತು ಮಹಾರಾಷ್ಟ್ರದ 124 ಖಾಸಗಿ ಔಷಧಿ ಅಂಗಡಿಗಳಲ್ಲಿ ಆರು ಅಗತ್ಯ ಔಷಧಿಗಳ ಲಭ್ಯತೆಯನ್ನು ಪರಿಶೀಲಿಸಿತ್ತು.

ಭಾರತದ ದತ್ತಾಂಶ ಕೋಶಗಳಲ್ಲಿ ಹಲವಾರು ಔಷಧಿಗಳನ್ನು ಪಟ್ಟಿ ಮಾಡಲಾಗಿದ್ದರೂ, ಅವುಗಳ ಪೈಕಿ ಕೆಲವೇ ಔಷಧಿಗಳು ಮಾತ್ರ ಜನರ ಕೈಗೆಟಕುವ ಬೆಲೆಗಳಲ್ಲಿ ಖಾಸಗಿ ಫಾರ್ಮಸಿಗಳಲ್ಲಿ ಲಭ್ಯವಿರುವುದನ್ನು ಅಧ್ಯಯನವು ಕಂಡುಕೊಂಡಿದೆ.

ಭಾರತದ 2015ರ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯು 376 ಔಷಧಿಗಳನ್ನೊಳ ಗೊಂಡಿದೆ.

ಈ ಔಷಧಿಗಳು ದೇಶಾದ್ಯಂತ ಸಾರ್ವಜನಿಕ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ವ್ಯಾಪಕವಾಗಿ ಲಭ್ಯವಿರಬೇಕಿತ್ತು. ಆದರೆ ಸಾರ್ವಜನಿಕ ಆರೋಗ್ಯ ಕೇಂದ್ರ ಗಳಲ್ಲಿ ಸೀಮಿತ ಸಂಪನ್ಮೂಲಗಳ ಪೂರೈಕೆಯಿಂದಾಗಿ ರೋಗಿಗಳು ಖಾಸಗಿ ಔಷಧಿ ಅಂಗಡಿಗಳಿಗೆ ತೆರಳುವುದು ಅನಿವಾರ್ಯವಾಗಿದೆ ಮತ್ತು ಅಲ್ಲಿ ಔಷಧಿಗಳು ದುಬಾರಿ ಯಾಗಿವೆ ಎಂದು ನ್ಯೂಕ್ಯಾಸಲ್ ವಿವಿಯ ಡಾ.ಕಾಲಿನ್ ಮಿಲರ್ಡ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ತಾತ್ವಿಕವಾಗಿ ಜೆನರಿಕ್ ಔಷಧಿಗಳಿಗಾಗಿ ಭಾರತದ ವಿಶಾಲ ಮಾರುಕಟ್ಟೆಯಲ್ಲಿ ಪೈಪೋಟಿಯಿಂದಾಗಿ ಖಾಸಗಿ ಔಷಧಿ ಅಂಗಡಿಗಳಲ್ಲಿ ಅಗತ್ಯ ಔಷಧಿಗಳು ಜನರ ಕೈಗೆಟಕುವ ಬೆಲೆಗಳಲ್ಲಿ ದೊರೆಯಬೇಕಾಗಿತ್ತು ಎಂದರು. ಇದನ್ನು ಪರೀಕ್ಷಿಸಲು ಮುಂಬೈ ಸೇರಿದಂತೆ ಮಹಾರಾಷ್ಟ್ರದ ನಾಲ್ಕು ಜಿಲ್ಲೆಗಳಲ್ಲಿಯ 124 ಖಾಸಗಿ ಔಷಧಿ ಅಂಗಡಿಗಳಲ್ಲಿ ಆರು ಅಗತ್ಯ ಔಷಧಿಗಳ ಲಭ್ಯತೆಯ ಬಗ್ಗೆ ಅಧ್ಯಯನ ನಡೆಸಲಾಗಿತ್ತು.

ಆರ್ಟೆಮಿಸಿನಿನ್(ಮಲೇರಿಯಾ),ಲಾಮಿವುಡಿನ್(ಎಚ್‌ಐವಿ/ಏಡ್ಸ್), ರಿಫಾಮ್‌ಪಿಸಿನ್ (ಕ್ಷಯರೋಗ ನಿಯಂತ್ರಣ), ಆಕ್ಸಿಟೊಸಿನ್(ಸಂತಾನೋತ್ಪತ್ತಿ), ಫ್ಲುಕ್ಸೆಟಿನ್(ಮಾನಸಿಕ ಆರೋಗ್ಯ) ಮತ್ತು ಮೆಟ್‌ಫಾರ್ಮಿನ್(ಮಧುಮೇಹ) ಇವು ಈ ಆರು ಅಗತ್ಯ ಔಷಧಿಗಳಾಗಿವೆ. ಈ ಪೈಕಿ ಮೆಟ್‌ಫಾರ್ಮಿನ್ ಮಾತ್ರ ಧಾರಾಳವಾಗಿ ಲಭ್ಯವಿದ್ದು, ಶೇ.64.5ರಷ್ಟು ಅಂಗಡಿಗಳಲ್ಲಿ ಮಾತ್ರ ರಿಫಾಮ್‌ಪಿಸಿನ್ ಲಭ್ಯವಿರುವುದು ಅಧ್ಯಯನದಲ್ಲಿ ಕಂಡುಬಂದಿತ್ತು. ಇತರ ನಾಲ್ಕು ಔಷಧಿಗಳು ಶೇ.50ಕ್ಕೂ ಕಡಿಮೆ ಅಂಗಡಿಗಳಲ್ಲಿ ಮಾತ್ರ ಲಭ್ಯವಿದ್ದವು. ಫಿಕ್ಸೆಡ್ ಡೋಸ್ ಕಾಂಬಿನೇಷನ್‌ನಲ್ಲಿ ಹಲವಾರು ಬ್ರಾಂಡ್‌ಗಳ ಔಷಧಿಗಳು ಅಂಗಡಿಗಳಲ್ಲಿ ಮಾರಾಟವಾಗುತ್ತಿರುವುದು ಇನ್ನೊಂದು ಕಳವಳದ ವಿಷಯವಾಗಿದೆ ಎಂದು ಮಿಲರ್ಡ್ ತಿಳಿಸಿದರು.

ಔಷಧಿಗಳ ತಯಾರಿಕೆಗೆ ಸರಕಾರದ ಒಪ್ಪಿಗೆ, ಅವುಗಳ ಪರಿಣಾಮಕಾರಿ ಗುಣ ಮತ್ತು ಬೆಲೆಗಳನ್ನು ಜನರು ಹೋಲಿಸುವಂತಾಗಲು ಗ್ರಾಹಕ ಸ್ನೇಹಿ ಕೇಂದ್ರ ದತ್ತಾಂಶ ಕೋಶವು ತುರ್ತಾಗಿ ಅಗತ್ಯವಿದೆ ಎಂದು ಅಧ್ಯಯನವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News