ಪದ್ಮಾವತ್ ವಿವಾದ ಇನ್ನೂ ಮುಗಿದಿಲ್ಲ, ಇನ್ನೊಂದು ಬಾಲಿವುಡ್ ಚಿತ್ರದ ವಿರುದ್ಧ ಅಸಮಾಧಾನ

Update: 2018-02-06 13:21 GMT

ಜೈಪುರ, ಫೆ.6: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಸಿನೆಮಾದಲ್ಲಿ ರಾಣಿ ಪದ್ಮಾವತಿಯನ್ನು ಅವಮಾನಕಾರಿಯಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಕರ್ಣಿ ಸೇನೆ ನಡೆಸಿದ ದಾಂಧಲೆ ಇನ್ನೇನು ಮುಗಿಯಿತು ಎನ್ನುವಾಗಲೇ ಈಗ ಮತ್ತೊಂದು ಸಿನೆಮಾದ ವಿರುದ್ಧ ಬ್ರಾಹ್ಮಣ ಸಂಘಟನೆ ತೊಡೆತಟ್ಟಿ ನಿಂತಿದೆ.

ಬಾಲಿವುಡ್ ನಟಿ ಕಂಗನಾ ರಾನೌತ್ ಅಭಿನಯದ ‘ಮಣಿಕರ್ಣಿಕಾ’ ಸಿನೆಮಾದಲ್ಲಿ ರಾಣಿ ಲಕ್ಷ್ಮಿಬಾಯಿಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಬ್ರಾಹ್ಮಣ ಸಂಘಟನೆ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.

ಸದ್ಯ ರಾಜಸ್ಥಾನದಲ್ಲಿ ಸಿನೆಮಾದ ಚಿತ್ರೀಕರಣ ನಡೆಯುತ್ತಿದೆ. ನಮಗೆ ಸಿಕ್ಕ ಮಾಹಿತಿಯ ಪ್ರಕಾರ ಚಿತ್ರದ ಹಾಡೊಂದರಲ್ಲಿ ರಾಣಿ ಲಕ್ಷ್ಮಿಬಾಯಿ ಬ್ರಿಟಿಷನೊಬ್ಬನನ್ನು ಪ್ರೀತಿಸುತ್ತಿರುವಂತೆ ಚಿತ್ರಿಸಲಾಗಿದೆ ಎಂದು ಸರ್ವ ಬ್ರಾಹ್ಮಣ ಮಹಾಸಭಾದ ಸ್ಥಾಪಕಾಧ್ಯಕ್ಷರಾದ ಸುರೇಶ್ ಮಿಶ್ರಾ ಆರೋಪಿಸಿದ್ದಾರೆ.

 ಈ ಚಿತ್ರದ ಕೆಲವು ಭಾಗವನ್ನು ಜಯಶ್ರೀ ಮಿಶ್ರಾ ಅವರು ಬರೆದಿರುವ ‘ರಾಣಿ’ ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ. ಈ ಪುಸ್ತಕಕ್ಕೆ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರ ಹಿಂದೆಯೇ ಅದನ್ನು ನಿಷೇಧಿಸಿದೆ. ಹಾಗಾಗಿ ನಿಷೇಧಿತ ಪುಸ್ತಕವೊಂದರಲ್ಲಿ ಉಲ್ಲೇಖಿಸಲಾದ ವಿಷಯಗಳನ್ನು ತೆಗೆದು ಸಿನೆಮಾ ಮಾಡುವ ಅಗತ್ಯವಾದರೂ ಏನು ಎಂಬುದು ನಮ್ಮ ಪ್ರಶ್ನೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿರುವ ಸುರೇಶ್ ಮಿಶ್ರಾ ತಿಳಿಸಿದ್ದಾರೆ.

ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೆ ರಾಜಸ್ಥಾನದಲ್ಲಿ ನಾವು ಚಿತ್ರದ ಚಿತ್ರೀಕರಣ ನಡೆಸಲು ಬಿಡುವುದಿಲ್ಲ ಎಂದು ಮಿಶ್ರಾ ಎಚ್ಚರಿಸಿದ್ದಾರೆ.

ಐತಿಹಾಸಿಕ ಕಾಲ್ಪನಿಕ ಕತೆ ಹೊಂದಿದ್ದ ವಿವಾದಿತ ಪುಸ್ತಕದಲ್ಲಿ ರಾಣಿ ಲಕ್ಷ್ಮಿಬಾಯಿ ಬ್ರಿಟಿಷ್ ಅಧಿಕಾರಿ ರಾಬರ್ಟ್ ಎಲ್ಲಿಸ್ ಜೊತೆ ಪ್ರೇಮ ಸಂಬಂಧ ಹೊಂದಿರುವಂತೆ ಉಲ್ಲೇಖಿಸಲಾಗಿತ್ತು. ಈ ಪುಸ್ತಕವನ್ನು 2008ರಲ್ಲಿ ಅಂದಿನ ಮಾಯಾವತಿ ಸರಕಾರ ನಿಷೇಧಿಸಿತ್ತು.

ನಾವು ಜನವರಿ 9ರಂದು ಚಿತ್ರದ ನಿರ್ಮಾಪಕರಿಗೆ ಪತ್ರವೊಂದನ್ನು ಬರೆದಿದ್ದೆವು. ಆದರೆ ಒಂದು ತಿಂಗಳು ಕಳೆದರೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಮಿಶ್ರಾ ತಿಳಿಸಿದ್ದಾರೆ.

ಝಾನ್ಸಿ ರಾಣಿ ಲಕ್ಷ್ಮಿಬಾಯಿ ಬ್ರಾಹ್ಮಣರಾಗಿದ್ದರು ಹಾಗಾಗಿ ಈ ಸಿನೆಮಾ ಬ್ರಾಹ್ಮಣರ ಭಾವನೆಗಳಿಗೆ ಸಂಬಂಧಿಸಿದ್ದಾಗಿರುವುದರಿಂದ ನಮ್ಮ ಸಂಘಟನೆ ಮತ್ತು ಸಮುದಾಯ ನಿಮ್ಮಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಲು ಬಯಸುತ್ತದೆ ಎಂದು ಮಣಿಕರ್ಣಿಕಾ ಸಿನೆಮಾದ ನಿರ್ಮಾಪಕರಾದ ಕಮಲ್ ಜೈನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.

 ಲೇಖಕರ ಹಿನ್ನೆಲೆ, ಚಿತ್ರ ನಿರ್ಮಾಣಕ್ಕೂ ಮುನ್ನ ತಂಡವು ಸಮಾಲೋಚನೆ ನಡೆಸಿರುವ ಇತಿಹಾಸಕಾರರು, ಚಿತ್ರದಲ್ಲಿರುವ ಹಾಡುಗಳು ಮತ್ತು ಅವುಗಳನ್ನು ಯಾವ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ ಎಂಬ ಕುರಿತು ವಿವರಣೆಯನ್ನು ಕೋರಿ ಈ ಪತ್ರವನ್ನು ಬರೆಯಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಿರ್ಮಾಪಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸಂಘಟನೆಯು ಸದ್ಯ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಗೃಹ ಸಚಿವರಾದ ಗುಲಾಬ್ ಚಂದ್ ಕಟರಿಯಾ ಅವರನ್ನು ಭೇಟಿಯಾಗಲಿರುವ ಸಂಘಟನೆಯ ಸದಸ್ಯರು, ಸಿನೆಮಾದಲ್ಲಿ ಆಕ್ಷೇಪಾರ್ಹವಾದ ಯಾವುದೇ ವಿಷಯಗಳಿಲ್ಲ ಎಂಬ ಬಗ್ಗೆ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರಿಂದ ಅಫಿದಾವಿತ್ ಅನ್ನು ಪಡೆಯುವಂತೆ ಮತ್ತು ಚಿತ್ರದ ಕತೆಯನ್ನು ರಾಜ್ಯ ಸರಕಾರಕ್ಕೆ ತಿಳಿಸುವಂತೆ ಸೂಚನೆ ನೀಡಬೇಕೆಂದು ಮನವಿ ಮಾಡಲಿದ್ದಾರೆ ಎಂದು ಮಿಶ್ರಾ ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ಪದ್ಮಾವತ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಸರ್ವ ಬ್ರಾಹ್ಮಣ ಮಹಾಸಭಾವು ರಜಪೂತ ಕರ್ಣಿಸೇನೆಗೆ ಬೆಂಬಲವನ್ನು ನೀಡಿತ್ತು. ಹಾಗಾಗಿ ಈಗ ‘ಮಣಿಕರ್ಣಿಕಾ’ ಚಿತ್ರದ ವಿರುದ್ಧದ ಪ್ರತಿಭಟನೆಯಲ್ಲಿ ಕರ್ಣಿಸೇನೆಯು ಬ್ರಾಹ್ಮಣ ಸಂಘಟನೆಯನ್ನು ಬೆಂಬಲಿಸಲು ನಿರ್ಧರಿಸಿದೆ.

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಚಿತ್ರತಂಡದ ಮೂಲಗಳು, ಮಣಿಕರ್ಣಿಕಾ ಸಿನೆಮಾದಲ್ಲಿ ಜಯಶ್ರೀ ಮಿಶ್ರಾ ಅವರ ಪುಸ್ತಕದಿಂದ ಆಯ್ದ ಯಾವ ವಿಷಯವನ್ನೂ ಅಳವಡಿಸಿಲ್ಲ. ಚಿತ್ರದಲ್ಲಿ ಯಾವುದೇ ಆಕ್ಷೇಪಾರ್ಹ ದೃಶ್ಯಗಳಿಲ್ಲ. ನಮಗೆ ಯಾವ ಪತ್ರವೂ ಬಂದಿಲ್ಲ. ಯಾರಾದರೂ ನಮ್ಮ ಬಳಿ ಬಂದು ಈ ಬಗ್ಗೆ ಮಾತನಾಡಿದರೆ ನಾವು ಸ್ಪಂದನೆಗೆ ಸಿದ್ಧ ಎಂದು ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News