ಅನುಪಮ್ ಖೇರ್, ರಾಮ್ ಮಾಧವ್, ಸ್ವಪನ್ ದಾಸ್‍ಗುಪ್ತಾ ಟ್ವಿಟರ್ ಖಾತೆ ಹ್ಯಾಕ್ : 'ಐ ಲವ್ ಪಾಕಿಸ್ತಾನ್' ಟ್ವೀಟ್

Update: 2018-02-06 12:03 GMT
ಅನುಪಮ್ ಖೇರ್, ರಾಮ್ ಮಾಧವ್, ಸ್ವಪನ್ ದಾಸ್‍ಗುಪ್ತಾ

ಹೊಸದಿಲ್ಲಿ,ಫೆ.6 :ಟರ್ಕಿಯ ಹ್ಯಾಕರ್ ಗುಂಪು ಅಯ್ಯಿಲ್ಡಿಝ್ ಟಿಮ್ ಮಂಗಳವಾರ ನಟ ಅನುಪಮ್ ಖೇರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಜಾಧವ್ ಹಾಗೂ ರಾಜ್ಯಸಭಾ ಸದಸ್ಯ ಸ್ವಪನ್ ದಾಸ್ ಗುಪ್ತಾ ಅವರ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿದ್ದು 'ಲವ್ ಪಾಕಿಸ್ತಾನ್' ಎಂಬ ಟ್ವೀಟ್ ಗಳು ಈ ಹ್ಯಾಕ್ ಮಾಡಲ್ಪಟ್ಟ ಖಾತೆಗಳಿಂದ ಬಂದಿವೆ. ಇದು ದೇಶಾದ್ಯಂತ ಅನುಪಮ್ ಖೇರ್ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಸದಸ್ಯರ ಆತಂಕಕ್ಕೆ ಕಾರಣವಾಗಿದೆ.  ಸುರಕ್ಷಿತ ಇಂಟರ್ನೆಟ್ ದಿನದಂದು ನಡೆದ ಈ ಹ್ಯಾಕಿಂಗ್ ಹಲವು ಪ್ರಶ್ನೆಗಳನ್ನೂ ಹುಟ್ಟು ಹಾಕಿದೆ.

ಖೇರ್ ಟ್ವಿಟರ್ ಹ್ಯಾಂಡಲ್ ಅನ್ನು 'ಅನುಮಪಮ್‍ಪಿಖೇರ್' ಬದಲು 'ಅನುಪಮ್‍ಪಿಖೇರ್‍ಟಿಸಿ' ಎಂದು ಹ್ಯಾಕರ್ ಗಳು ಬದಲಾಯಿಸಿದ್ದು ಅದು ಪ್ರಮಾಣೀಕೃತ ಬ್ಲೂ ಟಿಕ್ ಮಾರ್ಕ್ ಅನ್ನೂ ಕೆಲ ಹೊತ್ತು ಕಳೆದುಕೊಂಡಿತ್ತು. ಈ ಖಾತೆಯನ್ನು ಸ್ವಲ್ಪ ಸಮಯ ರದ್ದುಗೊಳಿಸಿ ಮತ್ತೆ ಆರಂಭಿಸಲಾಗಿದೆ.

ದಾಸ್‍ಗುಪ್ತಾ ಅವರ ಖಾತೆಯನ್ನೂ ರದ್ದುಗೊಳಿಸಲಾಗಿದ್ದರೆ ರಾಮ್ ಮಾಧವ್ ಅವರ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಆದ ಸ್ಥಿತಿಯಲ್ಲಿಯೇ ಸದ್ಯ ಇದ್ದು  ಅಯ್ಯಿಲ್ಡಿಝ್ ಟಿಮ್  ಪೋಸ್ಟ್ ಮಾಡಿದ  ಹಲವು ಟ್ವೀಟುಗಳಿವೆ. ಇದೇ ತಂಡ  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆವರ ಬೆಂಬಲಿಗರ ಟ್ವಿಟರ್ ಖಾತೆಗಳನ್ನೂ ಹ್ಯಾಕ್ ಮಾಡಿತ್ತು.

ಹ್ಯಾಕ್ ಆದ ಕೂಡಲೇ ಖೇರ್ ಅವರ ಟ್ವಿಟರ್ ಖಾತೆಯಿಂದ ಬಂದ ಪೋಸ್ಟ್ ಈ ರೀತಿಯಾಗಿತ್ತು. "ನಿಮ್ಮ ಖಾತೆಯನ್ನು ಟರ್ಕಿಶ್ ಸೈಬರ್ ಸೇನೆ ಅಯ್ಯಿಲ್ಡಿಝ್ ಟಿಮ್ ಹ್ಯಾಕ್ ಮಾಡಿದೆ. ನಿಮ್ಮ  ನೇರ ಸಂದೇಶಗಳು ಹಾಗೂ ಮಾಹಿತಿ ನಮ್ಮ ಕೈಯ್ಯಲ್ಲಿ. ಐ ಲವ್ ಪಾಕಿಸ್ತಾನ್'' ಎಂದು ಹೇಳಿತ್ತು.

ದಾಸ್‍ಗುಪ್ತಾ ಅವರ ಖಾತೆಯಿಂದ ಪಾಕಿಸ್ತಾನ ಸರಕಾರದ ಕಾಶ್ಮೀರದ ಹೇಳಿಕೆಗಳ ಬಗ್ಗೆ  ಹಾಗೂ ಪಾಕಿಸ್ತಾನದ ಸೇನಾ ಅಧಿಕಾರಿಗಳ ಟ್ವೀಟ್ ಪೋಸ್ಟ್ ಮಾಡಲಾಗಿತ್ತಲ್ಲದೆ ಅಲ್ಲಿಯೂ 'ಲವ್ ಪಾಕಿಸ್ತಾನ್,' ಎಂದು ಹೇಳಲಾಗಿತ್ತು.

ಅನುಪಮ್ ಖೇರ್ ಅವರಿಗೆ 1. 2 ಕೋಟಿ ಟ್ವಿಟರ್ ಫಾಲೋವರ್ ಗಳಿದ್ದಾರಲ್ಲದೆ ಅವರು ಮೋದಿ ಸರಕಾರದ ಕಟ್ಟಾ ಅಭಿಮಾನಿಯೂ ಆಗಿದ್ದಾರೆ. ಅವರ ಟ್ವಿಟರ್ ಖಾತೆ ಹ್ಯಾಕ್ ಆದಾಗ ಅವರು ಲಾಸ್ ಏಂಜಲಿಸ್ ನಗರದಲ್ಲಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News