ನಾವೇನು ತ್ಯಾಜ್ಯ ಸಂಗ್ರಾಹಕರಲ್ಲ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

Update: 2018-02-06 12:46 GMT

 ಹೊಸದಿಲ್ಲಿ, ಫೆ.6: ದೇಶಾದ್ಯಂತ ಘನ ತ್ಯಾಜ್ಯ ನಿರ್ವಹಣೆ ಕುರಿತು ಅಪೂರ್ಣ ಮಾಹಿತಿಯಿರುವ 846 ಪುಟಗಳ ಅಫಿದಾವತ್ ಸಲ್ಲಿಸಿದ ಕೇಂದ್ರ ಸರಕಾರವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ತಾನೇನು ತ್ಯಾಜ್ಯ ಸಂಗ್ರಾಹಕನಲ್ಲ ಎಂದು ಸರಕಾರಕ್ಕೆ ಕಟುವಾಗಿ ಹೇಳಿದೆ.

ಸರಕಾರ ಸಲ್ಲಿಸಿದ ಅಫಿದಾವತ್ ಅನ್ನು ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ ತನ್ನ ಮುಂದೆ  ಸರಕಾರ `ತ್ಯಾಜ್ಯ' ಸುರಿಯಲು ಸಾಧ್ಯವಿಲ್ಲ ಎಂದಿದೆ. ``ನೀವೇನು ಮಾಡುತ್ತಿದ್ದೀರಿ ? ನಮ್ಮನ್ನು ಖುಷಿ ಪಡಿಸಲು ಯತ್ನಿಸುತ್ತಿದ್ದೀರಾ ? ನಮಗೇನೂ ಖುಷಿಯಾಗಿಲ್ಲ, ಎಲ್ಲವನ್ನೂ ನಮ್ಮ ಮೇಲೆಯೇ ಸುರಿಯಲು ಯತ್ನಿಸುತ್ತಿದ್ದೀರಿ, ನಾವು ಇದನ್ನು ಸ್ವೀಕರಿಸುವುದಿಲ್ಲ,'' ಎಂದು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಹಾಗೂ ಮದನ್ ಬಿ ಲೋಕೂರ್ ಅವರನ್ನೊಳಗೊಂಡ ಪೀಠ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ``ನಿಮ್ಮಲ್ಲಿರುವುದನ್ನೆಲ್ಲಾ ನಮ್ಮ ಮುಂದೆ ಎಸೆಯಬೇಡಿ. ನಾವೇನು ತ್ಯಾಜ್ಯಸಂಗ್ರಾಹಕರಲ್ಲ'' ಎಂದು ಪೀಠ ಹೇಳಿತು.

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ರಾಜ್ಯ ಮಟ್ಟದ ಸಲಹಾ ಮಂಡಳಿಗಳನ್ನು  ಘನ ತ್ಯಾಜ್ಯ ನಿರ್ವಹಣಾ ನಿಯಮಗಳು 2016ರಂತೆ ರಚಿಸಿವೆಯೇ ಎಂಬುದನ್ನು ಮೂರು ವಾರಗಳೊಳಗಾಗಿ ವರದಿ ನೀಡುವಂತೆ ಹಾಗೂ ರಾಜ್ಯಗಳಲ್ಲಿ ಈ ಮಂಡಳಿ ರಚಿತವಾದ ದಿನಾಂಕ ಹಾಗೂ ಅವುಗಳು ನಡೆಸಿದ ಸಭೆಗಳ ವಿವರಗಳನ್ನೂ ನೀಡುವಂತೆ ತಿಳಿಸಿದೆ.

ರಾಜ್ಯಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಕುರಿತಂತೆ ವರದಿ ನೀಡುವಂತೆ ಈ ಹಿಂದೆ ಡಿಸೆಂಬರ್ 12ರಂದು ನ್ಯಾಯಾಲಯ ಸರಕಾರಕ್ಕೆ ಹೇಳಿತ್ತು. ಡೆಂಗ್ಯು ಮತ್ತು ಚಿಕನ್ ಗುನ್ಯ ಪ್ರಕರಣಗಳ ಬಗ್ಗೆಯೂ ತನ್ನ ಕಳವಳ ವ್ಯಕ್ತಪಡಿಸಿದ್ದ ನ್ಯಾಯಾಲಯ ಅಸಮರ್ಪಕ ತ್ಯಾಜ್ಯ ನಿರ್ವಹಣೆಯೇ ಇದಕ್ಕೆ ಕಾರಣ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News