ಮೋದಿ ಸರಕಾರವೆಂದರೆ ಏಕವ್ಯಕ್ತಿ ಪ್ರದರ್ಶನ, ಇಬ್ಬರು ವ್ಯಕ್ತಿಗಳ ಸೈನ್ಯ: ಶತ್ರುಘ್ನ ಸಿನ್ಹಾ
ನರಸಿಂಗಪುರ (ಒರಿಸ್ಸಾ), ಫೆ.6: ಕೇಂದ್ರದಲ್ಲಿರುವ ತಮ್ಮದೇ ಸರಕಾರದ ವಿರುದ್ಧ ಆಗಾಗ ಟೀಕೆ ಮಾಡುತ್ತಲೇ ಇರುವ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಸೋಮವಾರದಂದು ಮತ್ತೊಮ್ಮೆ ತಮ್ಮ ಪಕ್ಷದ ಅಗ್ರ ನಾಯಕರ ಕಾಲೆಳೆದಿದ್ದಾರೆ. ಕೇಂದ್ರದ ಮಂತ್ರಿಗಳ ಸ್ಥಾನಮಾನವು ಕುಸಿದಿದೆ. ಈಗ ಸರಕಾರವು ಏನಿದ್ದರೂ ಏಕವ್ಯಕ್ತಿ ಪ್ರದರ್ಶನ ಮತ್ತು ಇಬ್ಬರು ವ್ಯಕ್ತಿಗಳ ಸೈನ್ಯದಂತೆ ಕಾಣುತ್ತಿದೆ ಎಂದು ಸಿನ್ಹಾ ಕುಹಕವಾಡಿದ್ದಾರೆ. ರವಿವಾರದಂದು ಒರಿಸ್ಸಾದ ನರಸಿಂಗಪುರದಲ್ಲಿ ಬಿಜೆಪಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು ಆಯೋಜಿಸಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಲು ಆಗಮಿಸಿದ್ದ ಸಿನ್ಹಾ ನಂತರ ಮಾಧ್ಯಮಗಳ ಜೊತೆ ನಡೆದ ಸಂವಾದದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್ ಶಾ ಅವರನ್ನು ಗುರಿ ಮಾಡಿ ಈ ಮಾತುಗಳನ್ನು ಆಡಿದರು.
ವಿದ್ಯುತ್ ಉತ್ಪಾದನಾ ಘಟಕದ ನಿರ್ಮಾಣದಿಂದ ಸೂರು ಕಳೆದುಕೊಳ್ಳಲಿರುವ ಸ್ಥಳೀಯ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಯಶವಂತ್ ಸಿನ್ಹಾ ಅವರು ನರಸಿಂಗಪುರದಲ್ಲಿ ನಾಲ್ಕು ದಿನಗಳ ಧರಣಿ ಸತ್ಯಾಗ್ರಹ ಆಯೋಜಿಸಿದ್ದರು. ಈ ಸತ್ಯಾಗ್ರಹವು ಸೋಮವಾರ ರಾತ್ರಿ ಕೊನೆಗೊಂಡಿತು. ಪಕ್ಷ ಮತ್ತು ಸರಕಾರ ಜೊತೆಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಆದರೆ ಇಲ್ಲಿ ಕೇವಲ ನಮಗೆ ಮಾತ್ರವಲ್ಲ ನೀವು ಮತ್ತು ಇತರ ಹಲವರಿಗೆ, ಕೇಂದ್ರದಲ್ಲಿ ಏಕವ್ಯಕ್ತಿ ಪ್ರದರ್ಶನ ಮತ್ತು ಇಬ್ಬರು ವ್ಯಕ್ತಿಗಳ ಸೈನ್ಯ ಕೆಲಸದಲ್ಲಿದೆ ಎಂಬಂತೆ ಭಾಸವಾಗುತ್ತಿದೆ ಎಂದು ಶತ್ರುಘ್ನ ಸಿನ್ಹಾ ತಿಳಿಸಿದರು.
ಸರಕಾರದಲ್ಲಿ ಮಂತ್ರಿಗಳ ಸ್ಥಾನಮಾನ ಕುಸಿಯುತ್ತಿದೆ. ಬಹಳಷ್ಟು ಜನರಿಗೆ ಕೇಂದ್ರ ಸರಕಾರದ ಶೇ. 80 ಮಂತ್ರಿಗಳ ಬಗ್ಗೆ ಅರಿವೂ ಇರಲಿಕ್ಕಿಲ್ಲ. ಒಂದು ವೇಳೆ ತಿಳಿದಿದ್ದರೂ ಇವರೆಲ್ಲಾ ಅನಗತ್ಯ ಮಂತ್ರಿಗಳೆಂದೇ ತಿಳಿಯಬಹುದು ಎಂದು ಸಿನ್ಹಾ ವ್ಯಂಗ್ಯವಾಡಿದರು.
ಯಾವಾಗಲು ಒಟ್ಟಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರ ಅತ್ಯುತ್ತಮವಾಗಿತ್ತು. ಅವರ ಸರಕಾರದಲ್ಲಿ ಸಚಿವರುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಜನರಿಗೆ ಸರಕಾರ ಕೆಲಸ ಮಾಡುತ್ತಿಲ್ಲ ಕೇವಲ ಮಾತನಾಡುತ್ತದೆ ಎಂದು ಅನಿಸಿದರೆ. ಈ ಹಿಂದೆ ಸರಕಾರಗಳು ಆ ಕಾರಣಕ್ಕಾಗಿ ಬೆಲೆ ತೆತ್ತಿರುವುದನ್ನು ನಾವು ನೋಡಿದ್ದೇವೆ. ರಾಜೀವ್ ಗಾಂಧಿ ಸರಕಾರವೂ 1984ರಲ್ಲಿ ಅಭೂತಪೂರ್ವ ಬಹುಮತವನ್ನು ಪಡೆದಿತ್ತು. ಆದರೆ ಜನರ ವಿಶ್ವಾಸ ಕಳೆದುಕೊಳ್ಳಲು ಅದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. ಜನಶಕ್ತಿಯು ಯಾವಾಗಲೂ ಧನಶಕ್ತಿಗಿಂತ ದೊಡ್ಡದು ಎಂದು ಶತ್ರುಘ್ನ ಸಿನ್ಹಾ ತಿಳಿಸಿದರು.