2022ರ ವೇಳೆಗೆ ಪ್ರತಿಯೊಬ್ಬರಿಗೂ ಸೂರು: ಕೇಂದ್ರ ಸಚಿವ ಹರ್ದೀಪ್ ಸಿಂಗ್

Update: 2018-02-06 13:28 GMT

ಹೊಸದಿಲ್ಲಿ,ಫೆ.6: ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಯಶಸ್ವಿಗೊಂಡಿದೆ ಮತ್ತು 2022ರ ವೇಳೆಗೆ ಪ್ರತಿಯೊಬ್ಬರಿಗೂ ಸೂರು ಒದಗಿಸುವ ಸರಕಾರದ ಉದ್ದೇಶ ಸಾಧನೆಯಾಗಲಿದೆ ಎಂದು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು. ಯೋಜನೆಯು ವಿಫಲಗೊಂಡಿದೆ ಎಂಬ ಕಾಂಗ್ರೆಸ್ ಸದಸ್ಯರ ವಾದವನ್ನು ಅವರು ಇದೇ ವೇಳೆ ತಿರಸ್ಕರಿಸಿದರು.

 ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಪ್ರಯತ್ನಗಳ ಅಂಗವಾಗಿ ಯೋಜನೆಯಡಿ ನಿರ್ಮಾಣಗೊಂಡ ಮನೆಗಳ ಹಕ್ಕುಪತ್ರವನ್ನು ಕುಟುಂಬದಲ್ಲಿಯ ಮಹಿಳೆಯ ಹೆಸರಿಗೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರಶ್ನೆವೇಳೆಯಲ್ಲಿ ಪೂರಕಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, ರಾಜ್ಯಗಳಿಂದ ಸ್ವೀಕರಿಸಲಾ ಗಿರುವ ಮರುಮಾಹಿತಿಗಳಂತೆ ತನ್ನ ಸಚಿವಾಲಯವು ನಗರ ಪ್ರದೇಶಗಳಲ್ಲಿ ಮನೆಗಳ ಕೊರತೆಯ ಸಂಖ್ಯೆಯನ್ನು ಹಿಂದಿನ 1.8 ಕೋಟಿಗಳಿಂದ 1.10 ಕೋಟಿಗೆ ಪರಿಷ್ಕರಿಸಿದೆ. 37.45 ಲಕ್ಷಕ್ಕೂ ಅಧಿಕ ಮನೆಗಳಿಗೆ ಈಗಾಗಲೇ ಮಂಜೂರಾತಿ ನೀಡಲಾಗಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕುಗಳು ಬಡವರಿಗೆ ಸಾಲಗಳನ್ನು ನೀಡುತ್ತಿಲ್ಲ ಎಂದು ಹೇಳಿದ ಕಾಂಗ್ರೆಸ್ ಸದಸ್ಯ ಕೆ.ಸಿ.ವೇಣುಗೋಪಾಲ್ ಅವರು, ಪ್ರಧಾನ ಮಂತ್ರಿ ಆವಾಸ ಯೋಜನೆಯು ವಿಫಲಗೊಳ್ಳುತ್ತಿದೆ ಎಂದು ಪ್ರತಿಪಾದಿಸಿದರು.

ಇದನ್ನು ತಳ್ಳಿ ಹಾಕಿದ ಪುರಿ, ಬಡವರಿಗೆ ಮನೆಗಳ ನಿರ್ಮಾಣಕ್ಕಾಗಿ ಮುಂಗಡಪತ್ರದಲ್ಲಿ ಸಾಕಷ್ಟು ಹಣವನ್ನು ಮೀಸಲಿರಿಸಗಿದೆ ಎಂದು ಹೇಳಿದರು.

ಕರ್ನಾಟಕದ ಸಂಸದ(ಬಿಜೆಪಿ) ಪ್ರಹ್ಲಾದ್ ಜೋಶಿ ಅವರು, ತನ್ನ ರಾಜ್ಯಕ್ಕೆ 3.3 ಲ.ಮನೆಗಳನ್ನು ಮಂಜೂರು ಮಾಡಲಾಗಿದೆಯಾದರೂ ಕೇವಲ 38,000 ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಬೆಟ್ಟು ಮಾಡಿದರು. ಸಚಿವಾಲಯವು ಏನು ಮಾಡುತ್ತಿದೆ ಎನ್ನುವುದನ್ನು ತಿಳಿಯಲು ಅವರು ಬಯಸಿದರು.

 ಎಲ್ಲ ರಾಜ್ಯಗಳಲ್ಲಿ ಮನೆಗಳ ನಿರ್ಮಾಣ ಕಾಮಗಾರಿಯ ಮೇಲೆ ತಾನು ನಿಗಾಯಿರಿಸಿದ್ದೇನೆ ಮತ್ತು ವಿವಿಧ ರಾಜ್ಯ ಸರಕಾರಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ ಎಂದು ಸಮಜಾಯಿಷಿ ನೀಡಿದ ಪುರಿ, ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸಲು ತನ್ನ ಸಚಿವಾಲಯವು ಅದರ ಮಾರ್ಗಸೂಚಿಗಳನ್ನು ತಿದ್ದುಪಡಿಗೊಳಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News