ಮಲ್ಯಗೆ ನೀಡಿದ್ದ ಸಾಲದ ಬಗ್ಗೆ ದಾಖಲೆಗಳಿಲ್ಲ: ಕೇಂದ್ರ ಮಾಹಿತಿ ಆಯೋಗಕ್ಕೆ ತಿಳಿಸಿದ ವಿತ್ತ ಸಚಿವಾಲಯ!

Update: 2018-02-07 06:44 GMT

ಹೊಸದಿಲ್ಲಿ, ಫೆ.7: ಉದ್ಯಮಿ ವಿಜಯ್ ಮಲ್ಯ ಅವರಿಗೆ ನೀಡಲಾಗಿರುವ ಸಾಲಗಳ ಬಗ್ಗೆ ತನ್ನ ಬಳಿ ಮಾಹಿತಿಯಿಲ್ಲ ಎಂದು ವಿತ್ತ ಸಚಿವಾಲಯವು  ಕೇಂದ್ರ ಮಾಹಿತಿ ಆಯೋಗಕ್ಕೆ ತಿಳಿಸಿದ್ದು, ಈ ಮಾಹಿತಿ ಅಸ್ಪಷ್ಟತೆಯಿಂದ ಕೂಡಿದೆ ಎಂದು ಆಯೋಗ ಹೇಳಿದೆ.

ರಾಜೀವ್ ಕುಮಾರ್ ಖರೆ ಎಂಬವರು ಸಲ್ಲಿಸಿದ ಅಪೀಲಿನ ಮೇಲಿನ ವಿಚಾರಣೆ ಸಂದರ್ಭ ಮಾತನಾಡಿದ ಮುಖ್ಯ ಮಾಹಿತಿ ಆಯುಕ್ತ ಆರ್.ಕೆ. ಮಾಥುರ್, ಈ ಆರ್‍ಟಿಐ ಅರ್ಜಿಯನ್ನು ಸೂಕ್ತ ಪ್ರಾಧಿಕಾರಕ್ಕೆ ಹಸ್ತಾಂತರಿಸುವಂತೆ ವಿತ್ತ ಸಚಿವಾಲಯಕ್ಕೆ ತಿಳಿಸಿದ್ದಾರಲ್ಲದೆ ಸಂಬಂಧಿತ ಸಾರ್ವಜನಿಕ ರಂಗದ ಬ್ಯಾಂಕುಗಳು ಅಥವಾ ರಿಸರ್ವ್ ಬ್ಯಾಂಕ್  ಬಳಿ ಈ ಮಾಹಿತಿ ಲಭ್ಯವಿರಬಹುದೆಂದು ಹೇಳಿದ್ದಾರೆ.

ಖರೆ ಅವರು ಆರಂಭದಲ್ಲಿ ವಿತ್ತ ಸಚಿವಾಲಯಕ್ಕೆ ಸಲ್ಲಿಸಿದ ಆರ್‍ಟಿಐ ಅರ್ಜಿಗೆ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯೋಗದ ಮೊರೆ ಹೋಗಿದ್ದರು. ಅವರು ಕೇಳಿದ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲವೆಂದಿದ್ದ  ಸಚಿವಾಲಯ ದೇಶದ ಆರ್ಥಿಕ ಹಿತಾಸಕ್ತಿಗೆ ಧಕ್ಕೆ ತರಬಹುದಾದಂತಹ ವಿಚಾರದ ಮಾಹಿತಿ ನೀಡಲು ಆರ್‍ಟಿಐ ಕಾಯಿದೆಯನ್ವಯ ಇರುವ ವಿನಾಯಿತಿಯನ್ನು ಉಲ್ಲೇಖಿಸಿತ್ತು.

ಮಲ್ಯಗೆ ನೀಡಿದ ಬ್ಯಾಂಕ್ ಸಾಲಗಳ ಮಾಹಿತಿಯಿಲ್ಲ ಎಂದು ವಿತ್ತ ಸಚಿವಾಲಯ ಈಗ  ಆಯೋಗಕ್ಕೆ ತಿಳಿಸಿದ್ದರೂ ಇದೇ ಸಚಿವಾಲಯ ಈ ಸಂಬಂಧ ಈ ಹಿಂದೆ ಸಂಸತ್ತಿನಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿತ್ತು.

ಮಾರ್ಚ್ 17, 2017ರಲ್ಲಿ  ಈ ಬಗೆಗಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಕೇಂದ್ರ ವಿತ್ತ ಸಹಾಯಕ ಸಚಿವ ಸಂತೋಷ್ ಗಂಗ್ವರ್,  ಮಲ್ಯಗೆ ಸೆಪ್ಟೆಂಬರ್ 2004ರಲ್ಲಿ  ಸಾಲ ನೀಡಲಾಗಿತ್ತು ಹಾಗೂ ಫೆಬ್ರವರಿ 2008ರಲ್ಲಿ ಅದನ್ನು ಪರಿಶೀಲಿಸಲಾಗಿತ್ತು. ಈ 8,040 ಕೋಟಿ ರೂ. ಸಾಲವನ್ನು ಅನುತ್ಪಾದಕ ಸಾಲವೆಂದು 2009ರಲ್ಲಿ ಘೋಷಿಸಲಾಗಿತ್ತು ಎಂದು ತಿಳಿಸಿದ್ದರು.

ಮಾರ್ಚ್ 21ರಂದು ಸಚಿವರು ನೀಡಿದ ಇನ್ನೊಂದು ಉತ್ತರದಲ್ಲಿ ``ಸಾಲ ಮರುಪಾವತಿಸಲು ವಿಫಲರಾದ ವಿಜಯ್ ಮಲ್ಯ ಅವರಿಂದ ವಶಪಡಿಸಿಕೊಳ್ಳಲಾದ ಆಸ್ತಿಯ ಆನ್‍ಲೈನ್ ಹರಾಜಿನ ಮೂಲಕ 155 ಕೋಟಿ ರೂ. ವಾಪಸ್ ಪಡೆಯಲಾಗಿತ್ತೆಂದು ಸಾರ್ವಜನಿಕ ರಂಗದ ಬ್ಯಾಂಕುಗಳಿಂದ ತಿಳಿದು ಬಂದಿದೆ'' ಎಂದ  ರಾಜ್ಯಸಭೆಗೆ ತಿಳಿಸಿದ್ದರು.

ರಾಜ್ಯಸಭೆಯಲ್ಲಿ ನವೆಂಬರ್ 17, 2016ರಲ್ಲಿ ಅಮಾನ್ಯೀಕರಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ ಮಲ್ಯ ಸಾಲ ಪ್ರಕರಣವನ್ನು ಹಿಂದಿನ ಯುಪಿಎ ಸರಕಾರದಿಂದ ಪಡೆದ ಭಯಾನಕ ಬಳುವಳಿ ಎಂದು ಬಣ್ಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News