ಸಿಡಿಲಿನ ಸಂದರ್ಭ ಏಕಾಏಕಿ 50,000 ಫ್ಯಾ.ಹೀಟ್‌ವರೆಗಿನ ಉಷ್ಣತೆ ಹೇಗೆ ಸೃಷ್ಟಿಯಾಗುತ್ತದೆ?

Update: 2018-02-07 11:21 GMT

ವಿಸ್ಮಯಕ್ಕೆ ವಿಜ್ಞಾನದ ಉತ್ತರ

ಸಿಡಿಲು ಅನಿಲಗಳಿಂದ ವಿಸರ್ಜನೆಗೊಳ್ಳುವ ವಿದ್ಯುಚ್ಛಕ್ತಿಯಾಗಿದೆ. ಮೋಡಗಳು ರೂಪುಗೊಳ್ಳುವಾಗ ಮತ್ತು ಪ್ರತ್ಯೇಕಗೊಳ್ಳುವಾಗ ಕೆಲವು ಮೋಡಗಳು ಇಲೆಕ್ಟ್ರಾನ್‌ಗಳನ್ನು ಕಳೆದುಕೊಂಡು ಧನ ವಿದ್ಯುತ್ ಆವೇಶವನ್ನು ಮತ್ತು ಇತರ ಮೋಡಗಳು ಇಲೆಕ್ಟ್ರಾನ್‌ಗಳನ್ನು ಸಂಗ್ರಹಿಸಿ ಋಣ ವಿದ್ಯುತ್ ಆವೇಶವನ್ನು ಪಡೆಯುತ್ತವೆ.

ಒಂದೇ ವಿಧದ ವಿದ್ಯುತ್ ಆವೇಶಗಳ ವಿದ್ಯುತ್‌ಸ್ಥಾಯಿ ವಿಕರ್ಷಣೆಯಿಂದಾಗಿ ಮೋಡಗಳ ಮೇಲ್ಮೈ ವಲಯಗಳಲ್ಲಿ ಸ್ಥಾಯಿ ವಿದ್ಯುತ್ ಸಾಂದ್ರಗೊಳ್ಳುತ್ತದೆ. ಮಳೆಗಾಲದಲ್ಲಿ ಮೋಡಗಳು ವೇಗವಾಗಿ ಚಲಿಸಿ ಪರಸ್ಪರ ಘರ್ಷಿಸುತ್ತಿರುತ್ತವೆ. ಧನ ವಿದ್ಯುತ್ ಆವೇಶ ಹೊಂದಿರುವ ಮೋಡಗಳು ಮತ್ತು ಋಣ ವಿದ್ಯುತ್ ಆವೇಶ ಹೊಂದಿರುವ ಮೋಡಗಳು ಪರಸ್ಪರ ಘರ್ಷಿಸಿದಾಗ ಆ ಜಾಗದಲ್ಲಿ ಕೆಪಾಸಿಟರ್ ಅಥವಾ ಧಾರಕಗಳು ರೂಪುಗೊಳ್ಳುತ್ತವೆ. ಧಾರಕವು ತನ್ನ ಗರಿಷ್ಠ ಸಂಗ್ರಹ ಸಾಮರ್ಥ್ಯವನ್ನು ತಲುಪಿದಾಗ ತನ್ನೊಳಗೆ ಶೇಖರವಾಗಿರುವ ವಿದ್ಯುತ್ತನ್ನು ಹೊರಹಾಕುತ್ತದೆ. ಈ ವಿಸರ್ಜನ ಕ್ರಿಯೆಯು ದಿಢೀರ್ ಆಗಿ ಕೆಲವೇ ಕ್ಷಣಗಳ ಕಾಲ ನಡೆಯುತ್ತದೆ. ಈ ಸಂದರ್ಭದಲ್ಲಿ ವಿದ್ಯುತ್ ಶಕ್ತಿಯು ಉಷ್ಣತೆಯಾಗಿ ಪರಿವರ್ತನೆಗೊಳ್ಳುತ್ತದೆ. ವಿದ್ಯುತ್ ವಿಸರ್ಜನೆ ಅಲ್ಪ ಅವಧಿಯದಾಗಿದ್ದರೂ ವೋಲ್ಟೇಜ್ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹೀಗೆ ಉತ್ಪತ್ತಿಯಾದ ಉಷ್ಣತೆಯ ಪ್ರಮಾಣ ಸಾವಿರಾರು ಡಿಗ್ರಿ ಫ್ಯಾರನ್‌ಹೀಟ್‌ಗಳಷ್ಟು ಇರುತ್ತದೆ.

ಈ ಉಷ್ಣತೆ ಸೂರ್ಯನ ಮೇಲ್ಮೈಯಲ್ಲಿ ಇರುವ ಉಷ್ಣತೆ(10,000 ಡಿ.ಫ್ಯಾ.)ಗಿಂತಲೂ ಅಧಿಕವಾಗಿರುತ್ತದೆ. ಹೀಗೆ ಬಿಡುಗಡೆಗೊಂಡ ಉಷ್ಣತೆಯು ಮೋಡಗಳ ವಿದ್ಯುತ್ ವಿಸರ್ಜಿತ ಭಾಗಗಳ ಅಣುಗಳನ್ನು ಧ್ವಂಸಗೊಳಿಸಿ ಪ್ಲಾಸ್ಮಾದ ರೂಪಕ್ಕೆ ಪರಿವರ್ತಿಸುತ್ತದೆ ಮತ್ತು ಈ ಪ್ಲಾಸ್ಮಾ ಮಿಂಚನ್ನು ಹೊರಸೂಸುತ್ತದೆ ಮತ್ತು ವಾತಾವರಣದಲ್ಲಿ ತೀವ್ರ ಒತ್ತಡದ ಏರಿಳಿತಗಳ ಮೂಲಕ ಭಾರೀ ಶಬ್ದಕ್ಕೆ ಕಾರಣವಾಗುತ್ತದೆ.

ಸಿಡಿಲಿನ ಸಂದರ್ಭದಲ್ಲಿ ಚಾರ್ಜ್ಡ್ ಕೆಪಾಸಿಟರ್(ಮೋಡ)ಗಳ ಮೂಲಕ ವಿದ್ಯುತ್ ವಿಸರ್ಜನೆಯು ಏಕಾಏಕಿ ಆಗುವುದರಿಂದ ಮತ್ತು ಅದರ ಪ್ರವಾಹ ಹಾಗು ವೋಲ್ಟೇಜ್ ಅಧಿಕವಾಗಿರುವುದರಿಂದ ಸೃಷ್ಟಿಯಾಗುವ ಉಷ್ಣತೆಯು ದಿಢೀರ್‌ನೆ 50,000 ಡಿ.ಫ್ಯಾರನ್‌ಹೀಟ್‌ವರೆಗೆ ತಲುಪುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News