ಭೀಮಾ-ಕೋರೆಗಾಂವ್ ಹಿಂಸಾಚಾರ: ಪ್ರಮುಖ ಆರೋಪಿಯ ಬಂಧನಕ್ಕೆ ಸುಪ್ರೀಂ ತಡೆ

Update: 2018-02-07 13:28 GMT
ಮಿಲಿಂದ್ ಏಕಬೋಟೆ 

ಹೊಸದಿಲ್ಲಿ,ಫೆ.7: ಮಹಾರಾಷ್ಟ್ರದ ಪುಣೆ ಸಮೀಪದ ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ಜ.1ರಂದು ನಡೆದಿದ್ದ ಹಿಂಸಾಚಾರದ ಪ್ರಮುಖ ಆರೋಪಿ ಮಿಲಿಂದ್ ಏಕಬೋಟೆ ಅವರನ್ನು ಬಂಧನಕ್ಕೆ ಸರ್ವೋಚ್ಚ ನ್ಯಾಯಾಲಯವು ತಡೆ ನೀಡಿದೆ. ಈ ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಈ ಹಿಂಸಾಚಾರದ ಬಳಿಕ ನಡೆದಿದ್ದ ಪ್ರತಿಭಟನೆಗಳು ಮುಂಬೈ ಮಹಾನಗರದಲ್ಲಿ ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದವು.

 ನ್ಯಾ.ಕುರಿಯನ್ ಜೋಸೆಫ್ ಅವರ ನೇತೃತ್ವದ ಪೀಠವು ಪ್ರಕರಣದಲ್ಲಿ ಫೆ.20ರವರೆಗೆ ಏಕಬೋಟೆಯವರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆಯನ್ನು ಮಂಜೂರು ಮಾಡಿತು.

ನಿರೀಕ್ಷಣಾ ಜಾಮೀನು ಕೋರಿ ಏಕಬೋಟೆ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶ ನೀಡಿರುವ ನ್ಯಾಯಾಲಯವು, ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ಬಗ್ಗೆ ತನಗೆ ಮಾಹಿತಿಯನ್ನು ಸಲ್ಲಿಸುವಂತೆಯೂ ಸೂಚಿಸಿತು.

ಒಂದು ವೇಳೆ ಏಕಬೋಟೆಯವರನ್ನು ಬಂಧಿಸಿದರೆ ಒಂದು ಲಕ್ಷ ರೂ.ಗಳ ಬಾಂಡ್ ಪಡೆದುಕೊಂಡು ಬಿಡುಗಡೆಗೊಳಿಸುವಂತೆ ಅದು ಆದೇಶಿಸಿದೆ.

ಭೀಮಾ-ಕೋರೆಗಾಂವ್ ಯುದ್ಧದ ದ್ವಿಶತಮಾನೋತ್ಸವದ ಅಂಗವಾಗಿ ದಲಿತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸಿದ ಆರೋಪದಲ್ಲಿ ಹಿಂದೂ ಏಕತಾ ಅಘಾಡಿಯ ನಾಯಕ ಏಕಬೋಟೆ ಮತ್ತು ಶಿವರಾಜ ಪ್ರತಿಷ್ಠಾನದ ನಾಯಕ ಸಂಭಾಜಿ ಭಿಡೆ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪುಣೆಯ ನ್ಯಾಯಾಲಯ ವೊಂದು ಮಂಗಳವಾರ ಏಕಬೋಟೆ ವಿರುದ್ಧ ಬಂಧನದ ಆದೇಶವನ್ನು ಹೊರಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಕಬೋಟೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯವು ಫೆ.2ರಂದು ತಿರಸ್ಕರಿಸಿತ್ತು. ಅದಕ್ಕೂ ಮುನ್ನ ಪುಣೆ ನ್ಯಾಯಾಲಯವೂ ಇಂತಹುದೇ ಅರ್ಜಿಯನ್ನು ತಳ್ಳಿಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News