×
Ad

ಪತ್ರಕರ್ತರ ಮೇಲೆ ಹಲ್ಲೆಗೆ ಕಡಿವಾಣ ಹಾಕಲು ಪ್ರತ್ಯೇಕ ಸೆಕ್ಷನ್

Update: 2018-02-07 19:07 IST

ಹೊಸದಿಲ್ಲಿ, ಫೆ.7: ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದರೂ ಪೊಲೀಸರು ಅಪರಾಧಿಗಳನ್ನು ಬಂಧಿಸುವಲ್ಲಿ ವಿಫಲವಾಗಿರುವ ಕಾರಣ ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆಗಳಿಗೆ ಸಂಬಂಧಪಟ್ಟಂತೆ ಭಾರತೀಯ ದಂಡಸಂಹಿತೆಯಲ್ಲಿ ಪ್ರತ್ಯೇಕ ಸೆಕ್ಷನ್ ರೂಪಿಸುವಂತೆ ಕೋರಿ ರಾಜ್ಯಸಭೆಯಲ್ಲಿ ಖಾಸಗಿ ನಿರ್ಣಯ ಮಂಡಿಸಲು ತೃಣಮೂಲ ಕಾಂಗ್ರೆಸ್‌ನ ಸಂಸದರು ಸಿದ್ಧತೆ ನಡೆಸಿದ್ದಾರೆ.

ಕಳೆದ ಸೆಪ್ಟಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಪ್ರಸ್ತಾಪಿಸಿದ, ಪತ್ರಕರ್ತರೂ ಆಗಿರುವ ಸಂಸದ ವಿವೇಕ್ ಗುಪ್ತಾ ಅವರು, ಪತ್ರಕರ್ತರ ಮೇಲೆ ಕೆಲಸಕ್ಕೆ ಸಂಬಂಧಿಸಿದ ಬೆದರಿಕೆಗಳು ಮತ್ತು ದಾಳಿಗಳು ಹೆಚ್ಚುತ್ತಿವೆ ಎಂದು ತಿಳಿಸಿದ್ದಾರೆ. ಗೌರಿ ಲಂಕೇಶ್ ಹತ್ಯಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಶುಕ್ರವಾರದಂದು ರಾಜ್ಯಸಭೆಯಲ್ಲಿ ಅವರು ಈ ನಿರ್ಣಯವನ್ನು ಮಂಡಿಸಲಿದ್ದಾರೆ.

ಪತ್ರಕರ್ತರು ಮತ್ತು ಮಾಧ್ಯಮ ಸಮುದಾಯದ ಭದ್ರತೆಯನ್ನು ರಕ್ಷಿಸುವ ಯಾವುದೇ ಯೋಜನೆಯಿಲ್ಲ. ಹಾಗಾಗಿ ಅವರಿಗಾಗಿ ರಕ್ಷಣಾ ಯೋಜನೆಯನ್ನು ರೂಪಿಸುವ ಸಲುವಾಗಿ ಕೆಲಸಕ್ಕೆ ಸಂಬಂಧಿಸಿ ದೇಶಾದ್ಯಂತ ಬೆದರಿಕೆ ಮತ್ತು ಹಲ್ಲೆಗಳಿಗೆ ಒಳಗಾಗಿರುವ ಪತ್ರಕರ್ತರ ಅಂದಾಜು ಸಂಖ್ಯೆಯನ್ನು ಪಡೆಯಲು ಸಮೀಕ್ಷೆ ನಡೆಸಬೇಕು ಎಂದು ಗುಪ್ತಾ ಆಗ್ರಹಿಸಿದ್ದಾರೆ. ಪತ್ರಕರ್ತರು ತುರ್ತುಸ್ಥಿತಿಯ ಸಂದರ್ಭದಲ್ಲಿ ಪೊಲೀಸರನ್ನು ಸಂಪರ್ಕಿಸಲು ಉಚಿತ ಕರೆಯ ಸೌಲಭ್ಯವನ್ನೂ ಒದಗಿಸಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ. ಪತ್ರಕರ್ತರ ರಕ್ಷಣೆಗಾಗಿ ಸಮಿತಿ ನೀಡಿರುವ ವರದಿಯನ್ನು ಉಲ್ಲೇಖಿಸಿದ ಸಂಸದರು, ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಪೊಲೀಸರು ಒಬ್ಬನೇ ಒಬ್ಬ ಪತ್ರಕರ್ತನ ಹತ್ಯಾ ಪ್ರಕರಣವನ್ನು ಭೇದಿಸಿಲ್ಲ. 1992ರಿಂದೀಚೆಗೆ ದಾಖಲಾಗಿರುವ ಶೇ. 96 ಮಾಧ್ಯಮ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣಗಳು ಬಗೆಹರಿಸಲ್ಪಟ್ಟಿಲ್ಲ ಎಂದು ಗುಪ್ತಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News