ಟಿಡಿಎಸ್ ಎಂದರೇನು ಮತ್ತು ತೆರಿಗೆ ಉಳಿತಾಯ ಪುರಾವೆಗಳನ್ನು ಸಲ್ಲಿಸುವುದು ಏಕೆ ಅಗತ್ಯ....?

Update: 2018-02-07 14:05 GMT

ಹಾಲಿ ಹಣಕಾಸು ವರ್ಷ ಅಂತ್ಯಗೊಳ್ಳಲು ಎರಡು ತಿಂಗಳುಗಳೂ ಉಳಿದಿಲ್ಲ. ಸಂಸ್ಥೆಗಳ ಲೆಕ್ಕಪತ್ರ ವಿಭಾಗಗಳು ಮೂಲದಲ್ಲಿ ಹೆಚ್ಚುವರಿ ಆದಾಯ ತೆರಿಗೆ ಕಡಿತವಾಗುವುದನ್ನು ತಪ್ಪಿಸಲು ತಮ್ಮ ತೆರಿಗೆ ಉಳಿತಾಯ ಪುರಾವೆಗಳನ್ನು ಸಲ್ಲಿಸುವಂತೆ ಉದ್ಯೋಗಿಗಳಿಗೆ ಸೂಚನೆಗಳನ್ನು ನೀಡತೊಡಗಿವೆ.

ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್(ಟಿಡಿಎಸ್) ಅಥವಾ ಮೂಲದಲ್ಲಿಯೇ ತೆರಿಗೆ ಕಡಿತವು ಹೆಸರೇ ಸೂಚಿಸುವಂತೆ ಆದಾಯದ ಮೂಲದಲ್ಲಿಯೇ ತೆರಿಗೆ ಸಂಗ್ರಹದ ಉದ್ದೇಶವನ್ನು ಹೊಂದಿದೆ.

ವೇತನಗಳು ಟಿಡಿಎಸ್‌ಗೊಳಪಟ್ಟಿವೆ

ಆದಾಯ ತೆರಿಗೆ ಕಾಯ್ದೆಯನ್ವಯ ವೇತನಗಳು ಸಾಮಾನ್ಯವಾಗಿ ಟಿಡಿಎಸ್ ಅಡಿಯಲ್ಲಿ ಬರುತ್ತವೆ. ಹಾಗೆಯೇ ಬ್ಯಾಂಕ್ ಠೇವಣಿಗಳು ಮತ್ತು ಇತರ ಹೂಡಿಕೆಗಳ ಮೇಲಿನ ಬಡ್ಡಿ, ವಿಮಾ ಕಂಪನಿಗಳ ಏಜೆಂಟರ ಕಮಿಷನ್ ಇತ್ಯಾದಿಗಳೂ ಟಿಡಿಎಸ್ ವ್ಯಾಪ್ತಿಗೊಳಪಟ್ಟಿವೆ. ತಮ್ಮ ನೌಕರರಿಗೆ ವೇತನಗಳನ್ನು ನೀಡುವ ಉದ್ಯೋಗದಾತರು ವೇತನ ಪಾವತಿಯ ಸಂದರ್ಭ ಆದಾಯ ತೆರಿಗೆಯನ್ನು ಕಡಿತಗೊಳಿಸುವುದು ಕಡ್ಡಾಯವಾಗಿದ್ದು, ಅದನ್ನು ಅವರು ನೇರವಾಗಿ ಸರಕಾರಕ್ಕೆ ಪಾವತಿಸುತ್ತಾರೆ. ಹಣಕಾಸು ವರ್ಷದ ಆರಂಭದಲ್ಲಿಯೇ ಕಂಪನಿಗಳ ಲೆಕ್ಕಪತ್ರ ವಿಭಾಗವು ಉದ್ಯೋಗಿಯ ಅಂದಾಜು ತೆರಿಗೆಗರ್ಹ ವೇತನದ ಆಧಾರದಲ್ಲಿ ಆದಾಯ ತೆರಿಗೆಯನ್ನು ಲೆಕ್ಕ ಹಾಕಲು ಆರಂಭಿಸುತ್ತದೆ.

►ಟಿಡಿಎಸ್‌ನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ನಿಮ್ಮ ಒಟ್ಟು ಆದಾಯದಲ್ಲಿ ಹಣಕಾಸು ವರ್ಷದಲ್ಲಿ ನೀವು ಮಾಡಲು ಉದ್ದೇಶಿಸಿರುವ ತೆರಿಗೆ ಉಳಿತಾಯ ವೆಚ್ಚಗಳನ್ನು ಕಳೆದು ಅಂದಾಜು ತೆರಿಗೆಗರ್ಹ ಆದಾಯವನ್ನು ಲೆಕ್ಕ ಹಾಕಲಾಗುತ್ತದೆ. ತೆರಿಗೆ ಉಳಿತಾಯವನ್ನು ನೀಡುವ ಯಾವುದೇ ಉದ್ದೇಶಿತ ಹೂಡಿಕೆ ಯನ್ನು ಘೋಷಿಸದಿದ್ದರೆ ಪೂರ್ಣ ವೇತನದ ಮೇಲೆ ಮೂಲದಲ್ಲಿಯೇ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.

ಪುರಾವೆಯ ದಾಖಲೆಗಳ ಸಲ್ಲಿಕೆ

ಹೀಗಾಗಿ, ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಕಾಯ್ದೆಯಂತೆ ನಿಮ್ಮ ಒಟ್ಟು ಆದಾಯದಲ್ಲಿ ಕಡಿತಕ್ಕೆ ಅರ್ಹವಿರುವ, ತೆರಿಗೆಯನ್ನು ಉಳಿಸುವ ಯಾವುದೇ ಹೂಡಿಕೆ ಅಥವಾ ಗೃಹಸಾಲದ ಮೇಲಿನ ಬಡ್ಡಿಯಂತಹ ಇತರ ಯಾವುದೇ ವೆಚ್ಚವನ್ನು ಮಾಡಿದ್ದರೆ ಉದ್ಯೋಗಿಯು ಇಂತಹ ಹೂಡಿಕೆಗಳು ಅಥವಾ ವೆಚ್ಚಗಳ ಪುರಾವೆಗಳನ್ನು ಉದ್ಯೋಗದಾತರಿಗೆ ಸಲ್ಲಿಸಬೇಕಾಗುತ್ತದೆ. ಇಂತಹ ದಾಖಲೆಗಳನ್ನು ಸಲ್ಲಿಸಿದ ಬಳಿಕ ಲೆಕ್ಕಪತ್ರ ವಿಭಾಗವು ಅವುಗಳ ಆಧಾರದ ಮೇಲೆ ತೆರಿಗೆಯನ್ನು ಲೆಕ್ಕ ಹಾಕುತ್ತದೆ ಮತ್ತು ನಿಮ್ಮ ವೇತನದಿಂದ ಹೆಚ್ಚುವರಿ ತೆರಿಗೆ ಕಡಿತವಾಗುವುದು ತಪ್ಪುತ್ತದೆ.

►ತೆರಿಗೆ ಉಳಿತಾಯದ ಲಾಭಗಳನ್ನು ಪಡೆಯಲು ವಿಳಂಬವಾಗಿಲ್ಲ

ಹಾಲಿ ಹಣಕಾಸು ವರ್ಷ ಅಂತ್ಯಗೊಳ್ಳುವವರೆಗೆ ನಿಮ್ಮ ಬಳಿ ಹೆಚ್ಚುಕಡಿಮೆ ಕೇವಲ ಎರಡು ತಿಂಗಳುಗಳಿರಬಹುದು, ಆದರೆ ಹೆಚ್ಚಿನ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ನಿಮಗೆ ಬೇರೆ ಮಾರ್ಗವೇ ಉಳಿದಿಲ್ಲ ಎಂದು ಅರ್ಥವಲ್ಲ. ಹಾಲಿ ಹಣಕಾಸು ವರ್ಷದಲ್ಲಿ ಈವರೆಗೆ ನೀವು ಯಾವುದೇ ಹೂಡಿಕೆಯನ್ನು ಮಾಡಿರದಿದ್ದರೂ ತೆರಿಗೆ ಉಳಿತಾಯದ ಲಾಭವನ್ನು ಪಡೆಯಲು ಕಾಲವು ಮಿಂಚಿಲ್ಲ. ತೆರಿಗೆಯನ್ನು ಉಳಿಸಲು ನೆರವಾಗುವ ಹೂಡಿಕೆಗಳನ್ನು ಮಾಡಲು ನಿಮ್ಮ ಬಳಿ ಹಣವಿಲ್ಲದಿದ್ದರೂ ನೀವು ನಿಮ್ಮ ತೆರಿಗೆ ಪಾವತಿಯನ್ನು ಕಡಿಮೆಗೊಳಿಸಲು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಮತ್ತು ಇತರ ಲಭ್ಯ ತೆರಿಗೆ ಉಳಿತಾಯ ಮಾರ್ಗಗಳನ್ನು ಬಳಸಿಕೊಳ್ಳಬಹುದು.

 ತೆರಿಗೆ ಉಳಿತಾಯದ ಲಾಭವನ್ನು ಪಡೆಯಲು ಸರಿಯಾದ ಎಲ್ಲ ದಾಖಲೆಗಳನ್ನು ಸಕಾಲದಲ್ಲಿ ನಿಮ್ಮ ಉದ್ಯೋಗದಾತರಿಗೆ ಸಲ್ಲಿಸಲು ಮಾತ್ರ ಮರೆಯಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News