ಮಾಲ್ದೀವ್ಸ್: ಆದೇಶ ಹಿಂದಕ್ಕೆ ಪಡೆದ ಸುಪ್ರೀಂ ಕೋರ್ಟ್
ಮಾಲೆ (ಮಾಲ್ದೀವ್ಸ್), ಫೆ. 7: ಮಾಲ್ದೀವ್ಸ್‌ನ 9 ಪ್ರತಿಪಕ್ಷ ನಾಯಕರನ್ನು ಬಿಡುಗಡೆ ಮಾಡಬೇಕೆಂಬ ತನ್ನ ಮೊದಲಿನ ಆದೇಶವನ್ನು ಆ ದೇಶದ ಸುಪ್ರೀಂ ಕೋರ್ಟ್ ಮಂಗಳವಾರ ಹಿಂದಕ್ಕೆ ಪಡೆದುಕೊಂಡಿದೆ.
ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಸೋಮವಾರ ರಾತ್ರಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಅಬ್ದುಲ್ಲಾ ಸಯೀದ್ ಮತ್ತು ಇನ್ನೋರ್ವ ನ್ಯಾಯಾಧೀಶ ಅಲಿ ಹಮೀದ್‌ರನ್ನು ಪೊಲೀಸರು ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ.
ಮಂಗಳವಾರ ತಡರಾತ್ರಿ ಕಲಾಪ ನಡೆಸಿದ ಸುಪ್ರೀಂ ಕೋರ್ಟ್‌ನ ಉಳಿದ ಮೂವರು ನ್ಯಾಯಾಧೀಶರು, 9 ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಬೇಕೆಂಬ ಹಿಂದಿನ ಆದೇಶಕ್ಕೆ ತಿದ್ದುಪಡಿ ತಂದರು.
‘ಅಧ್ಯಕ್ಷರು ವ್ಯಕ್ತಪಡಿಸಿರುವ ಕಳವಳಗಳ ಹಿನ್ನೆಲೆಯಲ್ಲಿ’ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕೆನ್ನುವ ಆದೇಶವನ್ನು ಹಿಂದಕ್ಕೆ ಪಡೆದಿರುವುದಾಗಿ ಹೇಳಿಕೆಯೊಂದರಲ್ಲಿ ನ್ಯಾಯಾಧೀಶರು ಹೇಳಿದ್ದಾರೆ.
ಫೆಬ್ರವರಿ 1ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಪ್ರತಿಪಕ್ಷಗಳ 9 ನಾಯಕರನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡಬೇಕು ಹಾಗೂ ಈ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಹೇಳಿತ್ತು.
ಅದೂ ಅಲ್ಲದೆ, ಅಧ್ಯಕ್ಷ ಯಮೀನ್‌ರ ಪಕ್ಷದಿಂದ ಪ್ರತಿಪಕ್ಷಗಳ ಗುಂಪಿಗೆ ಪಕ್ಷಾಂತರ ಮಾಡಿದ 12 ಸಂಸದರ ಸದಸ್ಯತ್ವವನ್ನೂ ಮರಳಿಸಬೇಕು ಎಂದು ಆದೇಶಿಸಿತ್ತು.
ಈ ಸಂಸದರು ತಮ್ಮ ಸದಸ್ಯತ್ವ ಮರಳಿ ಪಡೆದರೆ ಯಮೀನ್ ಸರಕಾರ ಅಲ್ಪಮತಕ್ಕೆ ಜಾರುತ್ತದೆ.
ನ್ಯಾಯಾಧೀಶರ ಮೇಲೆ ಜೈಲಿನಲ್ಲಿ ದೌರ್ಜನ್ಯ: ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ್ ಆರೋಪ
ಹಿಂದೂ ಮಹಾ ಸಾಗರದ ದ್ವೀಪ ರಾಷ್ಟ್ರ ಮಾಲ್ದೀವ್ಸ್‌ನಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾದ ಬಳಿಕ ಬಂಧಿಸಲ್ಪಟ್ಟ ಓರ್ವ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಜೈಲಿನಲ್ಲಿ ದೌರ್ಜನ್ಯ ನಡೆಸಲಾಗಿದೆ ಎಂದು ದೇಶಭ್ರಷ್ಟ ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ್ ಬುಧವಾರ ಆರೋಪಿಸಿದ್ದಾರೆ.
9 ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪಾಲಿಸಲು ನಿರಾಕರಿಸಿದ ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್, ಸೋಮವಾರ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದರು. ಮಂಗಳವಾರ ಮುಂಜಾನೆ ಪೊಲೀಸರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಮತ್ತು ಇನ್ನೋರ್ವ ನ್ಯಾಯಾಧೀಶರನ್ನು ಬಂಧಿಸಿದರು.
ನ್ಯಾಯಾಧೀಶ ಅಲಿ ಹಮೀದ್ ಮೇಲೆ ಜೈಲಿನಲ್ಲಿ ದೌರ್ಜನ್ಯ ನಡೆಸಲಾಗಿದೆ ಎಂದು ನಶೀದ್ ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.
ಜೈಲಿನಲ್ಲಿದ್ದ ಮುಹಮ್ಮದ್ ನಶೀದ್‌ಗೆ ವೈದ್ಯಕೀಯ ಚಿಕಿತ್ಸೆಗಾಗಿ ಬ್ರಿಟನ್‌ಗೆ ಹೋಗಲು 2016ರಲ್ಲಿ ಮಾಲ್ದೀವ್ಸ್ ಅನುಮತಿ ನೀಡಿತ್ತು. ಅಂದಿನಿಂದ ಅವರು ಬ್ರಿಟನ್‌ನಲ್ಲಿ ನೆಲೆಸಿದ್ದಾರೆ.
ಸುಪ್ರೀಂ ಕೋರ್ಟ್ ನಡೆಸಿದ ‘ಕ್ಷಿಪ್ರಕ್ರಾಂತಿ’ಯ ತನಿಖೆಗೆ ತುರ್ತು ಪರಿಸ್ಥಿತಿ: ಅಧ್ಯಕ್ಷ
ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಶಾಮೀಲಾಗಿರುವ ‘ಈ ಪಿತೂರಿ, ಈ ಕ್ಷಿಪ್ರಕ್ರಾಂತಿ’ಯ ಬಗ್ಗೆ ತನಿಖೆ ನಡೆಸುವುದಕ್ಕಾಗಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿರುವುದಾಗಿ ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಮಂಗಳವಾರ ಹೇಳಿದ್ದಾರೆ.
‘‘ಇದು ಯುದ್ಧದ ಪರಿಸ್ಥಿತಿ ಅಲ್ಲ, ಸಾಂಕ್ರಾಮಿಕ ರೋಗ ಅಥವಾ ಪ್ರಾಕೃತಿಕ ವಿಪತ್ತೂ ಅಲ್ಲ. ಇದು ಅದಕ್ಕಿಂತಲೂ ಹೆಚ್ಚು ಅಪಾಯಕಾರಿ’’ ಎಂದು ಅಧ್ಯಕ್ಷರು ರಾಷ್ಟ್ರೀಯ ಟೆಲಿವಿಶನ್‌ನಲ್ಲಿ ಹೇಳಿದರು.
‘‘ಇದು ಸರಕಾರದ ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನೇ ತಡೆಯುವ ಪ್ರಯತ್ನವಾಗಿದೆ’’ ಎಂದು ಅವರು ಬಣ್ಣಿಸಿದರು.