×
Ad

5000 ಮಂದಿ ಎಚ್ ಐವಿ ಭೀತಿಯಲ್ಲಿ!

Update: 2018-02-08 17:12 IST

ಲಕ್ನೋ,ಫೆ.8 :  ನಕಲಿ ವೈದ್ಯನೊಬ್ಬ ಅಗ್ಗದ ಚಿಕಿತ್ಸೆ ನೀಡುವ ನೆಪದಲ್ಲಿ ಎಚ್‍ಐವಿ ರೋಗಿಯೊಬ್ಬನಿಗೆ ಚುಚ್ಚುಮದ್ದು ನೀಡಲು ಉಪಯೋಗಿಸಿದ ಸಿರಿಂಜ್ ನಿಂದ ಇತರ ರೋಗಿಗಳಿಗೂ ಚುಚ್ಚುಮದ್ದು ನೀಡಿದ ಪರಿಣಾಮ ಉತ್ತರ ಪ್ರದೇಶದ  ಉನ್ನಾವ್ ಜಿಲ್ಲೆಯ ಬಂಗರ್ಮವು ತೆಹ್ಸಿಲ್ ಎಂಬಲ್ಲಿ  ಕಳೆದ ಹತ್ತು ತಿಂಗಳುಗಳ ಅವಧಿಯಲ್ಲಿ ಕನಿಷ್ಠ 46 ಮಂದಿ ಎಚ್‍ಐವಿ ಬಾಧಿತರಾದ ಬಗ್ಗೆ ವರದಿಗಳು ಹೊರಬೀಳುತ್ತಿದ್ದಂತೆಯೇ ಈ ಪ್ರದೇಶದ ಜನ ಭಯದ ನೆರಳಿನಲ್ಲಿಯೇ ಬದುಕುವಂತಾಗಿದೆ. ಸುಮಾರು 5,000 ಜನಸಂಖ್ಯೆಯಿರುವ ಪ್ರೇಮ್ ಗಂಜ್ ಎಂಬಲ್ಲಿನ ಜನರು  ಈ ನಕಲಿ ವೈದ್ಯನ ಬಳಿಯೇ ಹೋಗುತ್ತಿದ್ದುದರಿಂದ ಅವರೆಲ್ಲರೂ ಚಿಂತಾಕ್ರಾಂತರಾಗಿದ್ದಾರೆ.

ಆರೋಪಿ ನಕಲಿ ವೈದ್ಯ ರಾಜೇಂದ್ರ ಯಾದವ್  ಹಳೆಯ ಸಂಸ್ಕೃತ ಶಾಲೆಯ ಕಟ್ಟಡವೊಂದರ ಮೂಲೆಯಲ್ಲಿ ತನ್ನ ಕ್ಲಿನಿಕ್ ನಡೆಸುತ್ತಿದ್ದು ಆತನ ಕ್ಲಿನಿಕ್ ಗೆ ರೋಗಿಗಳು ಬೆಳಗ್ಗೆ 9 ಗಂಟೆಯಿಂದ ಹಿಡಿದು ರಾತ್ರಿ 11 ಗಂಟೆವರೆಗೆ ಸಾಲುಸಾಲಾಗಿ ಬರುತ್ತಿದ್ದರು. ಆತ  ದಿನವೊಂದಕ್ಕೆ ಸುಮಾರು 150 ರೋಗಿಗಳನ್ನು ನೋಡುತ್ತಿದ್ದ. ಮೂರು ಡೋಸ್ ಔಷಧಿ ಹಾಗೂ ಒಂದು ಇಂಜೆಕ್ಷನ್ ಗೆ ಆತ ಕೇವಲ ರೂ. 10  ಪಡೆಯುತ್ತಿದ್ದುದೇ ಜನರು ಆತನ ಬಳಿ ಹೋಗಲು ಕಾರಣ. ಆತ ಒಂದೇ ಸಿರಿಂಜ್ ನಿಂದ ಎಲ್ಲರಿಗೂ ಚುಚ್ಚುಮದ್ದು ನೀಡುತ್ತಿದ್ದನೆಂದು ತಿಳಿದು ಈಗ ಜನರು ಕಂಗಾಲಾಗಿ ಬಿಟ್ಟಿದ್ದಾರೆ. ಈಗ ಜನರು ಅದೆಷ್ಟು ಭಯಭೀತರಾಗಿದ್ದಾರೆಂದರೆ ಹೆಚ್ಚಿನವರು ಎಚ್‍ಐವಿ ಪರೀಕ್ಷೆ ನಡೆಸಲು ಮುಂದೆ ಬರುತ್ತಿಲ್ಲ.

ಈ ವೈದ್ಯನ ಪ್ರಮಾದದಿಂದ ಬಾಧಿತರಾದವರಲ್ಲಿ ದೀಪ್ ಚಂದ್ ಕೂಡ ಒಬ್ಬನಾಗಿದ್ದಾನೆ. ಆತನ ಪತ್ನಿ ಮತ್ತು ಪುತ್ರ ಕೂಡ ಎಚ್‍ಐವಿ  ಬಾಧಿತರಾಗಿದ್ದಾರೆ. ಸ್ಥಳೀಯ ಮಾರ್ಕೆಟ್ ನಲ್ಲಿ ಲೋಡರ್ ಆಗಿ ಕೆಲಸ ಮಾಡುತಿದ್ದ ಆತನಿಗೆ ಕೆಲ ತಿಂಗಳುಗಳ ಹಿಂದೆ ಆತಿಯಾದ ಬೆನ್ನು ನೋವು ಕಾಡಿದಾಗ ರಾಜೇಂದ್ರ ಯಾದವ್ ಬಳಿ ಔಷಧಿ ಪಡೆದಿದ್ದ. ಅದೇ ಈಗ ಆತನ ಪಾಲಿಗೆ ಮುಳುವಾಗಿ ಬಿಟ್ಟಿದೆ. ಆತನಿಗೆ ನಾಲ್ಕು ಮಂದಿ ಪುತ್ರಿಯರಿದ್ದರೂ ಅವರನ್ನೂ ಪರೀಕ್ಷೆಗೊಡ್ಡಲು ಆತ ಸಿದ್ಧನಿಲ್ಲ. ಆತ ಈಗ ತನ್ನ ಗ್ರಾಮದಿಂದ 50 ಕಿ.ಮೀ. ದೂರದಲ್ಲಿರುವ ಕಾನ್ಪುರ ಎಆರ್‍ಟಿ ಕೇಂದ್ರಕ್ಕೆ ಹೋಗಿ ಅಲ್ಲಿ ತಪಾಸಣೆಗೊಳಪಟ್ಟು ಔಷಧಿ ಸ್ವೀಕರಿಸಬೇಕು. ಎಲ್ಲರನ್ನೂ ಅಷ್ಟು ದೂರ ನಿಯಮಿತವಾಗಿ ಕರೆದುಕೊಂಡು ಹೋಗಲು ತನ್ನ ಬಳಿ ಹಣವಿಲ್ಲ ಎಂದು ಆತ ಅಲವತ್ತುಕೊಳ್ಳುತ್ತಾನೆ.

ಹತ್ತಿರದ ಚಕ್ಮೀರಾ ಹಾಗೂ ಕಿದ್ಮಿಯಪುರ್ ಗ್ರಾಮಗಳ ಹಲವು ಮಂದಿಯೂ ಎಚ್‍ಐವಿ ಪೀಡಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News