ಕಾಶ್ಮೀರ ಪಾಕಿಸ್ತಾನ ಪಾಲಾಗುವುದನ್ನು ತಪ್ಪಿಸಿದ್ದ ಶೇಕ್ ಅಬ್ದುಲ್ಲಾರ ಪತ್ರ
ಶ್ರೀನಗರ, ಫೆ.8: ಜಮ್ಮು ಮತ್ತು ಕಾಶ್ಮೀರದ ಭವಿಷ್ಯವನ್ನು ನಿರ್ಧರಿಸಿದ 1947, ಅಕ್ಟೋಬರ್ 26ರಂದು ಪ್ರಧಾನಿ ಜವಾಹರ್ ಲಾಲ್ ನೆಹರೂರವರ ನಿವಾಸದಲ್ಲಿ ನಡೆದ ಐತಿಹಾಸಿಕ ಸಭೆಯಲ್ಲಿ ಅವರ ಕೈಸೇರಿದ ಒಂದು ಪತ್ರ ಕಾಶ್ಮೀರ ಪಾಕಿಸ್ತಾನದ ಪಾಲಾಗುವುದನ್ನು ತಪ್ಪಿಸಿತ್ತು. ಆ ಪತ್ರವನ್ನು ಬರೆದವರು ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥರಾದ ಶೇಕ್ ಅಬ್ದುಲ್ಲಾ ಅವರು.
ಕಾಶ್ಮೀರದ ಅಂದಿನ ಪ್ರಧಾನಿಯಾಗಿದ್ದ ಮೆಹರ್ ಚಂದ್ ಮಹಾಜನ್ ಅವರ ಆತ್ಮಕಥನ ಲುಕಿಂಗ್ ಬ್ಯಾಕ್‌ನಲ್ಲಿ ಆ ದಿನ ಏನು ನಡೆಯಿತು ಎಂಬ ಬಗ್ಗೆ ಸಂಪೂರ್ಣ ವಿವರವನ್ನು ನೀಡಲಾಗಿದೆ. ಮಹಾಜನ್ ಅವರ ಆತ್ಮಕತೆಯ ಪುಸ್ತಕವನ್ನು 1963ರಲ್ಲಿ ಮೊದಲ ಬಾರಿ ಮುದ್ರಿಸಲಾಗಿತ್ತು. ನಂತರ 1995ರಲ್ಲಿ ಮರುಮುದ್ರಣಗೊಂಡು ಇದೀಗ ಮೂರನೇ ಬಾರಿ ಮುದ್ರಣಗೊಳ್ಳುತ್ತಿದೆ.
ಈ ಪುಸ್ತಕದಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥರಾದ ಶೇಕ್ ಅಬ್ದುಲ್ಲಾ ಅವರು ಪ್ರಧಾನಿ ನೆಹರೂಗೆ ನೀಡಿದ ಪತ್ರವು ಕಾಶ್ಮೀರವು ಪಾಕಿಸ್ತಾನದ ಪಾಲಾಗುವುದನ್ನು ತಪ್ಪಿಸಿದ ಬಗ್ಗೆ ಉಲ್ಲೇಖವಿದೆ. ಅದು 1947, ಅಕ್ಟೋಬರ್ 26. ನೆಹರೂ ನಿವಾಸದಲ್ಲಿ ಗೃಹ ಸಚಿವರಾದ ಸರ್ದಾರ್ ವಲ್ಲಭ ಬಾಯಿ ಪಟೇಲ್ ಕೂಡಾ ಇದ್ದರು. ಸಭೆಯಲ್ಲಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ ಪ್ರಧಾನಿ ಮೆಹರ್ ಚಂದ್ ಮಹಾಜನ್, ನೀವು ಕಣಿವೆ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಿ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಪಕ್ಷಕ್ಕೆ ಯಾವುದೆಲ್ಲಾ ಅಧಿಕಾರ ನೀಡಲು ಬಯಸಿದ್ದೀರೋ ಎಲ್ಲವನ್ನೂ ನೀಡಿ. ಆದರೆ ಸಂಜೆಯ ಒಳಗಾಗಿ ಭಾರತೀಯ ಸೇನೆ ಶ್ರೀನಗರಕ್ಕೆ ತಲುಪಬೇಕು. ಇಲ್ಲವಾದರೆ, ಈ ನಗರವನ್ನು ರಕ್ಷಿಸುವ ಸಲುವಾಗಿ ನಾನು ಪಾಕಿಸ್ತಾನದ ನಾಯಕ ಮುಹಮ್ಮದ್ ಅಲಿ ಜಿನ್ನಾ ಅವರೊಂದಿಗೆ ಸಮಾಲೋಚನೆ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದರು.
ಮಹಾಜನ್ ಮಾತಿನಿಂದ ಕೋಪಗೊಂಡ ನೆಹರೂ, ಅವರನ್ನು ಹೊರಗೆ ಹೋಗುವಂತೆ ಸೂಚಿಸುತ್ತಾರೆ. ಇನ್ನೇನು ಮಹಾಜನ್ ಕೋಣೆಯಿಂದ ಹೊರನಡೆದರು ಎನ್ನುವಾಗಲೇ ಅವರ ಕೈಹಿಡಿದ ಪಟೇಲ್, ಖಂಡಿತವಾಗಿಯೂ ಮಹಾಜನ್, ನೀವು ಪಾಕಿಸ್ತಾನಕ್ಕೆ ಹೋಗುತ್ತಿಲ್ಲ ಎಂದು ಅವರ ಕಿವಿಯಲ್ಲಿ ಹೇಳಿದರು. ಈ ಎಲ್ಲಾ ಮಾತುಕತೆಗಳನ್ನು ಪ್ರಧಾನಿ ನೆಹರೂ ನಿವಾಸದಲ್ಲಿ ತಂಗಿದ್ದ ಶೇಕ್ ಅಬ್ದುಲ್ಲಾ ಅವರು ಕೇಳಿಸಿಕೊಂಡಿದ್ದರು. ಕೂಡಲೇ ಪತ್ರವೊಂದನ್ನು ಬರೆದ ಅವರು ಅದನ್ನು ಪ್ರಧಾನಿಗೆ ತಲುಪಿಸಿದರು. ಆ ಪತ್ರದಲ್ಲಿ ತಾನು ಕೂಡಾ ಮಹಾಜನ್ ಅವರ ಮಾತನ್ನು ಒಪ್ಪುತ್ತೇನೆ ಎಂದು ಬರೆಯಲಾಗಿತ್ತು. ಆ ಪತ್ರವನ್ನು ಓದಿದ ತಕ್ಷಣ ನೆಹರೂ ಅವರ ಯೋಚನೆ ಸಂಪೂರ್ಣ ಬದಲಾಯಿತು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಕಣಿವೆ ರಾಜ್ಯದಲ್ಲಿ ಆಡಳಿತ ನಡೆಸಬೇಕೆಂದು ಬಯಸಿದ್ದ ಶೇಕ್ ಅಬ್ದುಲ್ಲಾ ಅವರು ಜಿನ್ನಾ ಅವರನ್ನು ಮತ್ತು ಕಾಶ್ಮೀರವು ಪಾಕಿಸ್ತಾನದ ಪಾಲಾಗುವುದನ್ನು ವಿರೋಧಿಸಿದ್ದರು.
ಇದೀಗ ಮುದ್ರಣಗೊಂಡಿರುವ ಪುಸ್ತಕದಲ್ಲಿ ಎರಡು ಹೊಸ ಅಧ್ಯಾಯಗಳನ್ನು ಸೇರಿಸಲಾಗಿದೆ. ಈ ಅಧ್ಯಾಯಗಳನ್ನು ಮಹಾಜನ್ ಅವರೇ ಬರೆದಿದ್ದು ಈಗ ಅದನ್ನು ಅವರ ಕುಟುಂಬಸ್ಥರು ತನಗೆ ನೀಡಿದ್ದಾರೆ ಎಂದು ಹರ್-ಆನಂದ ಮುದ್ರಣ ಸಂಸ್ಥೆಯ ಮುಖ್ಯಸ್ಥರಾದ ನರೇಂದ್ರ ಕುಮಾರ್ ತಿಳಿಸಿದ್ದಾರೆ.